ಬಯಲುಸೀಮೆ ಕುಕ್ಕೆ ಸುಬ್ರಹ್ಮಣ್ಯ, ಶರಣರ ಗ್ರಾಮ ಸಾಸಲು ಗ್ರಾಮದಲ್ಲಿ ಮಾಣಿಕಶೆಟ್ಟಿ (ಕತ್ತೆ) ಮೆರವಣಿಗೆ ಹಬ್ಬ ಸಂಭ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು. ಮಹಾನ್ ಶಿವಭಕ್ತ ಜಂಗಮ ಭೈರವೇಶ್ವರರಿಗೆ ಹಾಗೂ ಶಿವನಿಗೆ ಭಕ್ತಿಯ ವಿಚಾರದಲ್ಲಿ ನಡೆದ ಕಾಳಗದಲ್ಲಿ ಭಕ್ತಿಗೆ ಗೆಲುವಾಗಿ ಶಿವಭಕ್ತನ ಭಕ್ತಿಗೆ ಮೆಚ್ಚಿ ಈ ಹಬ್ಬಆಚರಿಸಲು ಅಪ್ಪಣೆ ಮಾಡುತ್ತಾನೆ ಎಂದು ಗ್ರಾಮದ ಸ್ಥಳ ಪುರಾಣವಿದೆ.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಬಯಲುಸೀಮೆ ಕುಕ್ಕೆ ಸುಬ್ರಹ್ಮಣ್ಯ, ಶರಣರ ಗ್ರಾಮ ಸಾಸಲು ಗ್ರಾಮದಲ್ಲಿ ಮಾಣಿಕಶೆಟ್ಟಿ (ಕತ್ತೆ) ಮೆರವಣಿಗೆ ಹಬ್ಬ ಸಂಭ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು.ಮಹಾನ್ ಶಿವಭಕ್ತ ಜಂಗಮ ಭೈರವೇಶ್ವರರಿಗೆ ಹಾಗೂ ಶಿವನಿಗೆ ಭಕ್ತಿಯ ವಿಚಾರದಲ್ಲಿ ನಡೆದ ಕಾಳಗದಲ್ಲಿ ಭಕ್ತಿಗೆ ಗೆಲುವಾಗಿ ಶಿವಭಕ್ತನ ಭಕ್ತಿಗೆ ಮೆಚ್ಚಿ ಈ ಹಬ್ಬಆಚರಿಸಲು ಅಪ್ಪಣೆ ಮಾಡುತ್ತಾನೆ ಎಂದು ಗ್ರಾಮದ ಸ್ಥಳ ಪುರಾಣವಿದೆ. ಈ ಹಿನ್ನೆಲೆಯಲ್ಲಿ ಪ್ರತಿವರ್ಷ ನಡಯವ ಹಬ್ಬದಲ್ಲಿ ಇಡೀ ಗ್ರಾಮದ ವೀರಶೈವ ಕುಟುಂಬ, ಹಾಲುಮತ ಸಮುದಾಯದವರು ಭಾಗಿಯಾಗಿದ್ದರು.
ಜಂಗಮ ಅರ್ಚಕ ಕುಟುಂಬದ ಭಾಸ್ಕರ್ ಎಂಬ ಬಾಲಕನಿಗೆ ಶಿವಸ್ವರೂಪಿ ಸೋಮೇಶ್ವರ ದೇವರ ಪ್ರತಿನಿಧಿಯಾಗಿ ಅಲಂಕಾರ ಮಾಡಲಾಯಿತು. ಶಿವನು ಭಕ್ತನಿಗೆ ಸೋತ ಸಲುವಾಗಿ ಸಾಂಪ್ರದಾಯಿಕವಾಗಿ ನಡೆದು ಬಂದಿರುವಂತೆ ಶಿವನಿಗೆ ತೆಂಗಿನಗರಿಯ ಟೋಪಿ, ಹಳೆ ಬಿದಿರು ಮೊರದ ಛತ್ರಿ, ಈಜ್ಜಲುವಿನ ಮೀಸೆ, ತೆಂಗಿನಗರಿಯ ಜನಿವಾರ, ಆಭರಣ ತೊಡಿಸಲಾಯಿತು.ನಂತರ ಸೋಮೇಶ್ವರ ಗುಡಿಯ ಬಾಲಯಲದ ಒಳಗೆ ಬಾಲಕನನ್ನು ಕರೆದುಕೊಂಡು ಹೋಗಿ ಆರತಿ ಎತ್ತಿದೊಡನೆ ಬಾಲಕ ಭಕ್ತಿಯ ಪರವಶೆಗೆ ಒಳಗಾದನು. ಶಿವಸ್ವರೂಪಿ ಬಾಲಕನನ್ನು ಎತ್ತಿಕೊಂಡು ದೇಗುಲದ ಪ್ರವೇಶದ್ವಾರದಲ್ಲಿ ನಿಲ್ಲಿಸಲಾಗಿದ್ದ ಮಣಿಕಶೆಟ್ಟಿ(ಕತ್ತೆ) ಮೇಲೆ ಕೂರಿಸಲಾಯಿತು. ಶಿವಸ್ವರೂಪಿ ಬಾಲಕನಿಗೆ, ಮೂಲವಿಗ್ರಹಕ್ಕೆ ಆರತಿ ಬೆಳಗಿ ದೇಗುಲದ ಸುತ್ತ ಮೂರು ಸುತ್ತು ಮಂಗಳವಾದ್ಯದೊಂದಿಗೆ ಮೆರವಣಿಗೆ ಮಾಡಲಾಯಿತು.
ದೇಗುಲ ಹಾಗೂ ಮೆರವಣಿಗೆ ಸಾಗಿದ ಪ್ರದೇಶದ ಇಕ್ಕೆಲಗಳಲ್ಲಿ ನಿಂತು ಭಕ್ತರು ಶಿವಸ್ವರೂಪಿ ಬಾಲಕನಿಗೆ ನಮಸ್ಕರಿಸಿದರು. ಶಿವನು ಭಕ್ತನ ಮೇಲೆ ಇಟ್ಟಿರುವ ಕಾಳಜಿಗೆ ಶಿವಭಕ್ತರು ಕೊಂಡಾಡಿದರು. ಮೆರವಣಿಗೆ ರಥಬೀದಿ, ಭೈರವರಾಜ, ಕುದುರೆ ಮಂಡಮ್ಮದೇಗುಲ, ಸೋಮೇಶ್ವರ ಪುಷ್ಕರಿಣಿ ಬೀದಿಯಲ್ಲಿ ಸಾಗಿ ಅಂತಿಮವಾಗಿ ರಂಗಸ್ಥಳದ ಮಂಟಪಕ್ಕೆ ಸಾಗಿತು.ರಂಗಸ್ಥಳಕ್ಕೆ ಮೆರವಣಿಗೆ ಬಂದ ನಂತರ ಬಾಲಕನಿಗೆ ಪೂಜೆ ಸಲ್ಲಿಸಿದ ನಂತರ ಹಬ್ಬ ಸಮಾಪ್ತಿಯಾಯಿತು. ಭಕ್ತರು ದೇವರ ದರ್ಶನ ಪಡೆದು ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು.