ನಗರದ ಕಾಳೇನ ಅಗ್ರಹಾರದಿಂದ- ತಾವರೆಕೆರೆ (ಸುದ್ದುಗುಂಟೆಪಾಳ್ಯ-ಎಸ್‌.ಜಿ ಪಾಳ್ಯ) ನಿಲ್ದಾಣದವರೆಗಿನ ‘ನಮ್ಮ ಮೆಟ್ರೋ’ ಗುಲಾಬಿ ಮಾರ್ಗ (ಪಿಂಕ್‌ ಲೈನ್) 7.5 ಕಿ.ಮೀ. ಎತ್ತರಿಸಿದ ಮಾರ್ಗವನ್ನು ನ.13ರಂದು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಲಿದ್ದು, ನ.14 ಬೆಳಗ್ಗೆ 6 ಗಂಟೆಯಿಂದ ಸಾರ್ವಜನಿಕರ ಸೇವೆಗೆ ಮುಕ್ತವಾಗಲಿದೆ.

ರಾಜಧಾನಿಯಲ್ಲಿ 103 ಕಿ.ಮೀ. ಮೆಟ್ರೋ ದಾಟಿದ ಜಾಲ । ಹಸಿರು, ನೇರಳೆ, ಹಳದಿ ಬಳಿಕ ಈಗ(ಹ್ಯಾಂಗ್‌ಲೈನ್‌)-ಕಾಳೇನ ಅಗ್ರಹಾರದಿಂದ- ತಾವರೆಕೆರೆ ನಿಲ್ದಾಣವರೆಗೆ ಸಂಪರ್ಕ । 21.2 ಕಿ.ಮೀ. ಪೈಕಿ 7.5 ಕಿ.ಮೀ. ಮಾರ್ಗಕ್ಕೆ ಪ್ರಧಾನಿ ಚಾಲನೆ

-ಉದ್ಘಾಟನೆ ಬಳಿಕ ರೈಲಿನಲ್ಲಿ ನರೇಂದ್ರ ಮೋದಿ, ಸಿಎಂ ಡಿಕೆಶಿ ಸಂಚಾರ । 14 ರಿಂದ 8 ನಿಮಿಷಕ್ಕೊಂದು ಒಂದು ರೈಲು ಓಡಾಟ

---

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಕಾಳೇನ ಅಗ್ರಹಾರದಿಂದ- ತಾವರೆಕೆರೆ (ಸುದ್ದುಗುಂಟೆಪಾಳ್ಯ-ಎಸ್‌.ಜಿ ಪಾಳ್ಯ) ನಿಲ್ದಾಣದವರೆಗಿನ ‘ನಮ್ಮ ಮೆಟ್ರೋ’ ಗುಲಾಬಿ ಮಾರ್ಗ (ಪಿಂಕ್‌ ಲೈನ್) 7.5 ಕಿ.ಮೀ. ಎತ್ತರಿಸಿದ ಮಾರ್ಗವನ್ನು ನ.13ರಂದು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಲಿದ್ದು, ನ.14 ಬೆಳಗ್ಗೆ 6 ಗಂಟೆಯಿಂದ ಸಾರ್ವಜನಿಕರ ಸೇವೆಗೆ ಮುಕ್ತವಾಗಲಿದೆ.

ಈ 7.5 ಕಿ.ಮೀ ಮಾರ್ಗ ಸೇರ್ಪಡೆಯೊಂದಿಗೆ ಬೆಂಗಳೂರಿನ ಒಟ್ಟು ಮೆಟ್ರೋ ಜಾಲವು 103 ಕಿ.ಮೀ. ತಲುಪಲಿದೆ. ಆ ಮೂಲಕ ನಗರದ ಮೆಟ್ರೋ ಜಾಲ 100 ಕಿ.ಮೀ. ಮೈಲಿಗಲ್ಲಿನ ಗಡಿ ದಾಟಿದ ಐತಿಹಾಸಿಕ ಸಾಧನೆ ಮಾಡಲಿದೆ.

ಬುಧವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಚಿವ ಕೃಷ್ಣಬೈರೇಗೌಡ ಅವರು, ‘ನ. 13 ರಂದು ಮಧ್ಯಾಹ್ನ 12.30ಕ್ಕೆ ಡೈರಿ ಸರ್ಕಲ್ ಬಳಿಯ ಅಗ್ನಿಶಾಮಕ ದಳದ ಆವರಣಕ್ಕೆ ಆಗಮಿಸಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಮೀಪದ ಸುದ್ದುಗುಂಟೆಪಾಳ್ಯ ಮೆಟ್ರೋ ನಿಲ್ದಾಣದಲ್ಲಿ ಈ ಹೊಸ 7.5 ಕಿ.ಮೀ. ಮಾರ್ಗಕ್ಕೆ ಚಾಲನೆ ನೀಡಲಿದ್ದಾರೆ. ನ.14 ರಿಂದ ಪ್ರತಿ 8 ನಿಮಿಷಕ್ಕೆ ಒಂದು ರೈಲು ಸಂಚರಿಸಲಿದೆ’ ಎಂದು ಮಾಹಿತಿ ನೀಡಿದರು.

ಉದ್ಘಾಟನೆಯ ನಂತರ ನರೇಂದ್ರ ಮೋದಿ ಅವರು, ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳು ಸೇರಿದಂತೆ ಹಲವು ಗಣ್ಯರು ಅದೇ ಮೆಟ್ರೋ ರೈಲಿನ ಮೂಲಕ ತಾವರೆಕೆರೆ ನಿಲ್ದಾಣದಿಂದ ಐಐಎಂಬಿ ನಿಲ್ದಾಣದವರೆಗೆ ಪ್ರಯಾಣಿಸಲಿದ್ದಾರೆ. ಬಳಿಕ ಐಐಎಂಬಿ ಆಡಿಟೋರಿಯಂನಲ್ಲಿ ಆಯೋಜಿಸಲಾಗಿರುವ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ನಗರದ ವಾಹನ ದಟ್ಟಣೆಗೆ

ಮುಕ್ತಿ , ಸುಲಭ ಸಂಪರ್ಕ

ಗುಲಾಬಿ ಮಾರ್ಗದ ಆರಂಭಿಕ ಭಾಗವು ಬನ್ನೇರುಘಟ್ಟ ರಸ್ತೆಯ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ವಿಶೇಷವಾಗಿ, ಜಯದೇವ ಮೆಟ್ರೋ ನಿಲ್ದಾಣದಲ್ಲಿ ಎಲೆಕ್ಟ್ರಾನಿಕ್‌ ಸಿಟಿ ಮತ್ತು ಸಿಟಿ ಮಾರ್ಗಗಳಿಗೆ ಇಂಟರ್‌ಚೇಂಜ್‌ (ಸಂಪರ್ಕ) ಸೌಲಭ್ಯವಿರುವುದರಿಂದ, ಈ ಭಾಗದ ನಾಗರಿಕರು ಸಿಲ್ಕ್ ಬೋರ್ಡ್, ಎಚ್ಎಸ್‌ಆರ್ ಲೇಔಟ್, ಜಯನಗರ, ಮಜೆಸ್ಟಿಕ್ ಹಾಗೂ ವೈಟ್‌ಫೀಲ್ಡ್‌ ಸೇರಿ ನಗರದ ಯಾವುದೇ ಭಾಗಕ್ಕೆ ಸುಲಭವಾಗಿ ಪ್ರಯಾಣಿಸಬಹುದು ಎಂದು ಕೃಷ್ಣಬೈರೇಗೌಡ ಹೇಳಿದರು. ಆರಂಭಿಕ ಹಂತದಲ್ಲಿ ಈ ಮಾರ್ಗದಲ್ಲಿ 5 ಮೀಸಲು ರೈಲುಗಳು ಕಾರ್ಯನಿರ್ವಹಿಸಲಿದ್ದು, ಪ್ರತಿ 8 ನಿಮಿಷಕ್ಕೊಂದು ರೈಲು ಸಂಚರಿಸಲಿದೆ. ಮುಂಬರುವ ದಿನಗಳಲ್ಲಿ ಪ್ರಯಾಣಿಕರ ದಟ್ಟಣೆ ಮತ್ತು ಸಿಗ್ನಲಿಂಗ್ ವ್ಯವಸ್ಥೆಯ ಸ್ಥಿರತೆಯನ್ನು ಗಮನಿಸಿ ಈ ಕಾಲಾವಧಿಯನ್ನು ಮತ್ತಷ್ಟು ಕಡಿಮೆ ಮಾಡುವ ಯೋಜನೆಯಿದೆ.

1.5 ವರ್ಷದಲ್ಲಿ 170 ಕಿ.ಮೀ.ಗೆ ಜಾಲ ವಿಸ್ತರಣೆ:

ಮುಂದಿನ 1.5 ವರ್ಷದ ಅವಧಿಯಲ್ಲಿ ಮೆಟ್ರೋ ಜಾಲವನ್ನು 170 ಕಿ.ಮೀ.ಗೆ ವಿಸ್ತರಿಸುವ ಸ್ಪಷ್ಟ ಗುರಿಯನ್ನು ಸರ್ಕಾರ ಹೊಂದಿದೆ. ಪಿಂಕ್ ಲೈನ್ ಪೂರ್ಣ ಪ್ರಮಾಣವು 21.2 ಕಿ.ಮೀ. ಆಗಿದ್ದು, ತಾವರೆಕೆರೆಯಿಂದ ನಾಗವಾರದವರೆಗಿನ 13.7 ಕಿ.ಮೀ. ಭೂಗತ ಮಾರ್ಗ ಪೂರ್ಣಗೊಂಡಾಗ ಒಟ್ಟು 21.2 ಕಿ.ಮೀ. ಪೂರ್ಣಗೊಳ್ಳಲಿದೆ. ಇನ್ನು ನೀಲಿ ಮಾರ್ಗದ ಸಂಪರ್ಕದಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರಂವರೆಗಿನ 19.75 ಕಿ.ಮೀ ಮತ್ತು ಹೆಬ್ಬಾಳದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ ಮಾರ್ಗಗಳನ್ನು ಮುಂದಿನ ವರ್ಷವೇ ಮುಕ್ತಗೊಳಿಸುವ ಗುರಿ ಇದೆ. ಕೆ.ಆರ್.ಪುರಂನಿಂದ ಹೆಬ್ಬಾಳ ನಡುವಿನ ಸವಾಲಿನ ಮಾರ್ಗವನ್ನೂ ಪೂರ್ಣಗೊಳಿಸಿ, ಸಿಲ್ಕ್ ಬೋರ್ಡ್ ನಿಂದ ಏರ್ಪೋರ್ಟ್‌ವರೆಗಿನ ಒಟ್ಟು 59 ಕಿ.ಮೀ ಸಂಪರ್ಕವನ್ನು ಶೀಘ್ರವೇ ಕಲ್ಪಿಸಲಾಗುವುದು ಎಂದು ಸಚಿವರು ತಿಳಿಸಿದರು. ಜೆ.ಪಿ. ನಗರ 4ನೇ ಹಂತದಿಂದ ಮೈಸೂರು ರಸ್ತೆ, ಮಾಗಡಿ ರಸ್ತೆ ದಾಟಿ ಹೆಬ್ಬಾಳಕ್ಕೆ ತಲುಪುವ 32 ಕಿ.ಮೀ ಮಾರ್ಗ ಹಾಗೂ ಹೊಸಹಳ್ಳಿಯಿಂದ ಕಡಬಗೆರೆವರೆಗಿನ 12.5 ಕಿ.ಮೀ (ಒಟ್ಟು 44.5 ಕಿ.ಮೀ) ಆರೆಂಜ್ ಲೈನ್‌ಗೆ (ಕಿತ್ತಳೆ ಮಾರ್ಗ) ಮುಂದಿನ 6 ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಸಿ ಭೂಮಿ ಪೂಜೆ ನೆರವೇರಿಸಲಾಗುವುದು. ಸರ್ಜಾಪುರದಿಂದ ಹೆಬ್ಬಾಳದವರೆಗೆ 37.8 ಕಿ.ಮೀ. ಉದ್ದದ ರೆಡ್ ಲೈನ್ ಯೋಜನೆಗೆ 2025ರ ಜನವರಿಯಲ್ಲಿಯೇ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಒಪ್ಪಿಗೆ ದೊರೆತ ತಕ್ಷಣ ಟೆಂಡರ್ ಕರೆಯಲಾಗುವುದು ಎಂದರು.

--

ಸರ್ಜಾಪುರ ಟ್ರಾಫಿಕ್‌ ಸಮಸ್ಯೆಗೆ

ಮೆಟ್ರೋ ಒಂದೇ ಪರಿಹಾರ

ಸರ್ಜಾಪುರ ಟ್ರಾಫಿಕ್ ಸಮಸ್ಯೆಗೆ ಮತ್ತೊಂದು ಹೆಸರು. ಮೆಟ್ರೋ ಒಂದೇ ಇದಕ್ಕೆ ಪರಿಹಾರ. ಹೀಗಾಗಿ ಇಲ್ಲಿ ಡಬಲ್ ಡೆಕ್ಕರ್ ಮೆಟ್ರೋ ಮಾಡಿ ಎಂಬ ಬೇಡಿಕೆ ಇದೆ. ಸರ್ಜಾಪುರದಿಂದ ಆರಂಭಿಸಿ ಇಬ್ಲೂರ್ ಜಂಕ್ಷನ್ ಔಟರ್ ರಿಂಗ್ ರೋಡ್ ಬಳಿ ಕ್ರಾಸ್ ಆಗಿ ಸೆಂಟ್ ಜಾನ್ಸ್‌ವರೆಗೆ ಬಂದು ಸೆಂಟ್ ಜಾನ್ಸ್‌ನಿಂದ ಹೆಬ್ಬಾಳದ ವರೆಗೆ ರೆಡ್ ಲೈನ್ 37.8 ಕಿಮೀ ಅನುಮತಿಗಾಗಿ 2025 ಜನವರಿಯಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಕೃಷ್ಣಬೈರೇಗೌಡ ಹೇಳಿದರು.