ದೀಪಾವಳಿ ಕೇವಲ ಸಂಭ್ರಮದ ಹಬ್ಬವಲ್ಲ. ಅದು ಜ್ಞಾನ, ತಿಳುವಳಿಕೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳಗಿಸುವ ಹಬ್ಬವಾಗಿದೆ ಎಂದು ಖ್ಯಾತ ಚಿಂತಕ ಮುನಿರಾಜ್ ರೆಂಜಾಳ ಹೇಳಿದರು.
ಮೂಡುಬಿದಿರೆ ; ದೀಪಾವಳಿ ಕೇವಲ ಸಂಭ್ರಮದ ಹಬ್ಬವಲ್ಲ. ಅದು ಜ್ಞಾನ, ತಿಳುವಳಿಕೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳಗಿಸುವ ಹಬ್ಬವಾಗಿದೆ ಎಂದು ಖ್ಯಾತ ಚಿಂತಕ ಮುನಿರಾಜ್ ರೆಂಜಾಳ ಹೇಳಿದರು.ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಡೊಳ್ಳು ದೀಪಾವಳಿ ಕಾರ್ಯಕ್ರಮದಲ್ಲಿ ದೀಪಾವಳಿ ಸಂದೇಶ ನೀಡಿ ಮಾತನಾಡಿದ ಅವರು, ಪ್ರತಿಯೊಂದು ಹಬ್ಬದ ಹಿಂದೆಯೂ ಒಂದು ಇತಿಹಾಸ, ಸಂಸ್ಕೃತಿ ಹಾಗೂ ಬದುಕಿಗೆ ಮಾರ್ಗದರ್ಶನ ನೀಡುವ ಸಂದೇಶವಿದೆ ಎಂದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಡೊಳ್ಳು ತಂಡದ ವಿದ್ಯಾರ್ಥಿಗಳು ಹಾಗೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮನೆಗೆ ತೆರಳಲು ಸಾಧ್ಯವಾಗದೆ ಆಳ್ವಾಸ್ನಲ್ಲಿಯೇ ಉಳಿದುಕೊಂಡಿರುವ ವಿದ್ಯಾರ್ಥಿಗಳಿಗಾಗಿ ಈ ವಿಶೇಷ ಆಚರಣೆಯನ್ನು ಆಯೋಜಿಸಲಾಗಿದೆ. ಶ್ರೀಲಂಕಾ, ಕಾಶ್ಮೀರ, ಬಿಹಾರ, ಮಣಿಪುರ, ಅಸ್ಸಾಂ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಶಿಕ್ಷಣಕ್ಕಾಗಿ ಆಳ್ವಾಸ್ಗೆ ಆಗಮಿಸಿರುವ ವಿದ್ಯಾರ್ಥಿಗಳು ತಮ್ಮ ಮನೆ, ಕುಟುಂಬ ಮತ್ತು ಊರಿನ ಹಬ್ಬದ ಸಂಭ್ರಮವನ್ನು ಇಲ್ಲಿ ನೆನಪಿಸಿಕೊಳ್ಳುವುದು ಸಹಜ. ಅಂತಹ ವಿದ್ಯಾರ್ಥಿಗಳಿಗೂ ದೀಪಾವಳಿಯ ಸಂತಸ, ಆತ್ಮೀಯತೆ ಮತ್ತು ಹಬ್ಬದ ಸಂಭ್ರಮವನ್ನು ಅನುಭವಿಸುವ ಅವಕಾಶ ದೊರೆಯಬೇಕು ಎಂಬ ಉದ್ದೇಶದಿಂದ ಈ ಆಚರಣೆಯನ್ನು ರೂಪಿಸಲಾಗಿದೆ ಎಂದರು. ದೀಪಾವಳಿಯ ಸಂಪ್ರದಾಯಿಕ ಆಚರಣೆಗಳಿಗೆ ಭಕ್ತಿಯ ಸೊಬಗು ತುಂಬಿದ ಭಜನಾ ಕಾರ್ಯಕ್ರಮವು ವಿಶೇಷ ಆಕರ್ಷಣೆಯಾಯಿತು. ಮಂಗಳೂರಿನ ಇಸ್ಕಾನ್ ಬಳಗದ ಎರಡು ತಂಡಗಳು, ಆದಿತ್ಯ ಭಟ್ ಪಾಣೆಮಂಗಳೂರು, ಆಳ್ವಾಸ್ ಸಂಸ್ಥೆಯ ಭಜನಾ ತಂಡ ಸೇರಿದಂತೆ ವಿವಿಧ ಭಜನಾ ಮಂಡಳಿಗಳು ಭಕ್ತಿಗೀತೆ ಹಾಗೂ ಕುಣಿತ ಭಜನೆಯ ಮೂಲಕ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದವು.
ಕಲ್ಲಮುಂಡ್ಕೂರಿನ ಮಹಾಲಿಂಗೇಶ್ವರ ಭಜನಾ ಮಂಡಳಿ, ಸಂಪಿಗೆ ಪುತ್ತಿಗೆಯ ಗುರು ರಾಘವೇಂದ್ರ ಭಜನಾ ಮಂಡಳಿ, ಇರುವೈಲು ಪುಪಾಡಿಕಲ್ಲಿನ ಸತ್ಯನಾರಾಯಣ ಭಜನಾ ಮಂಡಳಿ, ಮೂಡುಬಿದಿರೆ ಕೋಟೆಬಾಗಿಲಿನ ಮಹಮ್ಮಾಯಿ ಸೇವಾ ಭಜನಾ ಮಂಡಳಿ ಹಾಗೂ ಮುಂಡ್ಕೂರು–ಬೆಳ್ಮಣ್ನ ಸೇವಾ ಭಾರತಿ ಭಜನಾ ಮಂಡಳಿಗಳು ಭಾಗವಹಿಸಿ ಭಕ್ತಿಸಂಗೀತದ ಮೂಲಕ ಹಬ್ಬದ ವಾತವರಣವನ್ನು ಇಮ್ಮಡಿಗೊಳಿಸಿದವು.ಇದಕ್ಕೂ ಮುನ್ನ ಸಾಂಪ್ರದಾಯಿಕ ದೀಪಾವಳಿ ಆಚರಣೆಯ ಅಂಗವಾಗಿ ಗೋಪೂಜೆ, ಬಲೀಂದ್ರ ಪೂಜೆ, ಕೃಷಿಗೆ ಸಂಬಂಧಿಸಿದ ಉಪಕರಣಗಳ ಪೂಜೆ ಹಾಗೂ ತುಳಸಿ ಪೂಜೆ ನೆರವೇರಿಸಲಾಯಿತು. ಡೊಳ್ಳು ಪೂಜೆಯನ್ನು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ನೆರವೇರಿಸಲಾಯಿತು.ಉದ್ಯಮಿ ಕೆ ಶ್ರೀಪತಿ ಭಟ್, ಮೀನಾಕ್ಷಿ ಆಳ್ವ, ಡಾ ವಿನಯ ಆಳ್ವ, ಡಾ. ಹನಾ ಶೆಟ್ಟಿ, ಡಾ ಗ್ರೀಷ್ಮಾ ಆಳ್ವ, ಶಿಕ್ಷಕ ಹಾಗೂ ಶಿಕ್ಷಕೇತರ ವರ್ಗದವರು, ವಿದ್ಯಾರ್ಥಿಗಳು, ಸ್ಥಳೀಯರು ಪಾಲ್ಗೊಂಡರು. ನಿತೇಶ್ ಎಕ್ಕಾರು ನಿರೂಪಿಸಿದರು.