ಪುತ್ತೂರು ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಸವಣೂರಿನ ಸ್ವಂತ ನಿವೇಶನದಲ್ಲಿ ಸುಮಾರು 5 ಕೋಟಿ ರು. ಗಳ ವೆಚ್ಚದಲ್ಲಿ ನಿರ್ಮಾಣಗೊಂಡ ಸಂಘದ ಕೇಂದ್ರ ಕಚೇರಿ, ಸವಣೂರು ಶಾಖೆ ಹಾಗೂ ವಾಣಿಜ್ಯ ಸಂಕೀರ್ಣಗಳ ನೂತನ ಕಟ್ಟಡ ಸಹಕಾರ ರಶ್ಮಿ ಉದ್ಘಾಟನೆ ಹಾಗೂ ರಜತ ಮಹೋತ್ಸವ ಸಮಾರಂಭ 16ರಂದು ಸವಣೂರಿನ ಸಂಘದ ವಠಾರದಲ್ಲಿ 9 ವೈವಿದ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಪುತ್ತೂರು : ಪುತ್ತೂರು ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಸವಣೂರಿನ ಸ್ವಂತ ನಿವೇಶನದಲ್ಲಿ ಸುಮಾರು 5 ಕೋಟಿ ರು. ಗಳ ವೆಚ್ಚದಲ್ಲಿ ನಿರ್ಮಾಣಗೊಂಡ ಸಂಘದ ಕೇಂದ್ರ ಕಚೇರಿ, ಸವಣೂರು ಶಾಖೆ ಹಾಗೂ ವಾಣಿಜ್ಯ ಸಂಕೀರ್ಣಗಳ ನೂತನ ಕಟ್ಟಡ ಸಹಕಾರ ರಶ್ಮಿ ಉದ್ಘಾಟನೆ ಹಾಗೂ ರಜತ ಮಹೋತ್ಸವ ಸಮಾರಂಭ 16ರಂದು ಸವಣೂರಿನ ಸಂಘದ ವಠಾರದಲ್ಲಿ 9 ವೈವಿದ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.ಸಂಘದ ಅಧ್ಯಕ್ಷ ಸಹಕಾರ ರತ್ನ ಸವಣೂರು ಸೀತಾರಾಮ ರೈ ಕೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾರಂಭದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀಧಾಮ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.ಕೇಂದ್ರ ಕಚೇರಿಯನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಸಮಾರಂಭವನ್ನು ಮಂಗಳೂರು ಎ.ಜೆ.ಶೆಟ್ಟಿ ಆಸ್ಪತ್ರೆ-ಸಂಶೋಧನಾ ಕೇಂದ್ರದ ಚೇರ್ ಮೆನ್ ಡಾ.ಎ.ಜೆ ಶೆಟ್ಟಿ, ಸವಣೂರು ಶಾಖೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಲಿದ್ದಾರೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸನ್ಮಾನ ಕಾರ್ಯಕ್ರಮ ನೆರವೇರಿಸಲಿದ್ದಾರೆ.ರಜತಮಹೋತ್ಸವದ ಸವಿನೆನಪಿಗಾಗಿ ಸಂಘವು ರು. 2 ಲಕ್ಷ ವೆಚ್ಚದಲ್ಲಿ ಸವಣೂರಿನಲ್ಲಿ ನಿರ್ಮಿಸಿದ ಬಸ್ಸು ನಿಲ್ದಾಣವನ್ನು ಮಾಜಿ ಸಂಸದ ನಳಿನ್‌ಕುಮಾರ್ ಕಟೀಲು ಉದ್ಘಾಟಿಸಲಿದ್ದಾರೆ. ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಸಹಕಾರಿ ಧ್ವಜಾರೋಹಣ ಮಾಡಲಿದ್ದಾರೆ. ಸಹಕಾರ ಸಂಘಗಳ ದ.ಕ.ಜಿಲ್ಲಾ ಉಪನಿಬಂಧಕ ರಮೇಶ್ ಎಚ್.ಎನ್. ಹಾಗೂ ಸವಣೂರು ಗ್ರಾ.ಪಂ.ಆಡಳಿತಾಧಿಕಾರಿ ಹರೀಶ್ ಕೆ. ಗೌರವ ಉಪಸ್ಥಿತರಿರುತ್ತಾರೆ ಎಂದು ತಿಳಿಸಿದರು.

9 ವೈವಿಧ್ಯಮಯ ಕಾರ್ಯಕ್ರಮ: ರಜತ ಸಂಭ್ರಮವು 9 ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಜಿಲ್ಲೆಯ ಅತ್ಯುತ್ತಮ ಹಿರಿಯ ಸಹಕಾರಿ ಜಾಕೆ ಮಾಧವ ಗೌಡ ಅವರಿಗೆ ಆದರ್ಶ ರಜತ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ವಿದ್ಯಾರಶ್ಮಿ ವಿದ್ಯಾಸಂಸ್ಥೆಗೆ ರು. 1 ಲಕ್ಷ ಮೊತ್ತದ ಕಂಪ್ಯೂಟರ್ ಕೊಡುಗೆ ನೀಡಲಾಗುವುದು. 2 ಲಕ್ಷ ರು. ವೆಚ್ಚದ ಸಾರ್ವಜನಿಕ ಬಸ್ಸು ನಿಲ್ದಾಣ ಲೋಕಾರ್ಪಣೆಗೊಳಿಸಲಾಗುವುದು. ಸಂಘದ ಆರಂಭದಿಂದ ಪ್ರಸ್ತುತ ತನಕದ ನಿರ್ದೇಶಕರು, ನೌಕರರು, ಪಿಗ್ಮಿ ಏಜೆಂಟರು, ನಿವೃತ್ತರಾದ ನೌಕರರು, ಕಟ್ಟಡದ ಗುತ್ತಿಗೆದಾರರು ಮತ್ತು ಕಟ್ಟಡದ ಎಂಜಿನಿಯರ್ ಗಳನ್ನು ಸನ್ಮಾನಿಸಲಾಗುವುದು. ಯಜ್ಞೇಶ್ ಆಚಾರ್ ಮತ್ತು ಬಳಗ ಸುಬ್ರಹ್ಮಣ್ಯ ಇವರಿಂದ ‘ಭಕ್ತಿ ಗಾನಾಮೃತ’ ಉಮೇಶ್ ದೇವಾಡಿಗ ಪುತ್ತೂರು ಮತ್ತು ಬಳಗದಿಂದ ‘ರಾಗ್‌ರಂಗ್ ಸಂಗೀತ’ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಪೂರ್ಣಿಮಾ ಯತೀಶ್ ರೈ ಚೆಲ್ಯಡ್ಕ ಇವರಿಂದ ‘ಯಕ್ಷ ನೃತ್ಯ ರೂಪಕ’ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎನ್ ಸುಂದರ ರೈ, ನಿರ್ದೇಶಕರಾದ ಅಶ್ವಿನ್ ಎಲ್.ಶೆಟ್ಟಿ, ಜೈರಾಜ್ ಭಂಡಾರಿ ನೋಣಾಲು, ರಶ್ಮಿ ರೈ ಎಸ್.ಸವಣೂರು, ಮಹಾಪ್ರಬಂಧಕ ವಸಂತ ಜಾಲಾಡಿ ಉಪಸ್ಥಿತರಿದ್ದರು.25 ವರ್ಷ ಪೂರೈಸಿದ ಸಹಕಾರ ಸಂಘ

2002ರಲ್ಲಿ ಪ್ರಾರಂಭಗೊಂಡ ಆದರ್ಶ ವಿವಿಧೋದ್ದೇಶ ಸಹಕಾರ ಸಂಘವು ಪ್ರಸ್ತುತ 25 ವರ್ಷಗಳನ್ನು ಪೂರೈಸಿದ್ದು, ದ.ಕ.ಜಿಲ್ಲೆಯ ಪುತ್ತೂರು, ಸುಳ್ಯ, ಸುಬ್ರಹ್ಮಣ್ಯ, ವಿಟ್ಲ, ಉಜಿರೆ, ಕಡಬ, ಸವಣೂರು, ಸಾಲೆತ್ತೂರು, ಕುಂಬ್ರ, ಬೆಳ್ಳಾರೆ, ಪಂಜ, ಬೊಳುವಾರು, ಮಡಂತ್ಯಾರು, ಬಿ.ಸಿ.ರೋಡು, ಕಲ್ಲಡ್ಕ, ಮಂಗಳೂರಿನ ಪಾಂಡೇಶ್ವರ ಹಾಗೂ ಈಶ್ವರಮಂಗಲದಲ್ಲಿ 17 ಶಾಖೆಗಳನ್ನು ಹೊಂದಿದೆ. ಮುಂದೆ ಜನವರಿ ಪ್ರಥಮ ವಾರದಲ್ಲಿ ಮಡಿಕೇರಿಯಲ್ಲಿ 18ನೇ ಶಾಖೆ ಹಾಗೂ ಉಡುಪಿಯ ಪಡುಬಿದ್ರಿಯಲ್ಲಿ 19ನೇ ಶಾಖೆ ಆರಂಭಗೊಳ್ಳಲಿದೆ. ಸಂಘವು 2025-26ನೇ ಸಾಲಿನಲ್ಲಿ ರು. 1078 ಕೋಟಿ ವ್ಯವಹಾರ ನಡೆಸಿ ದಾಖಲೆಯ 2.60 ಕೋಟಿ ಲಾಭಗಳಿಸಿದೆ ಎಂದು ತಿಳಿಸಿದರು.