ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿಐತಿಹಾಸಿಕ ಮಡಿಕೇರಿ ದಸರಾ ಅಂಗವಾಗಿ ಗುರುವಾರ ಮಡಿಕೇರಿಯಲ್ಲಿ ಭಾರಿ ಜನಸ್ತೋಮ ಕಂಡುಬಂತು.ಸಂಜೆ ವೇಳೆಗೆ ಮಳೆ ಬಿಡುವು ನೀಡಿತು. ಇದರಿಂದ ಅಪಾರ ಸಂಖ್ಯೆಯಲ್ಲಿ ಜನರು ಮಡಿಕೇರಿ ದಸರಾದಲ್ಲಿ ಸೇರಿದ್ದರು. ನಗರದ ಫೀ.ಮಾ.ಕೆ. ಎಂ ಕಾರ್ಯಪ್ಪ ವೃತ್ತದಿಂದ ಇಡೀ ನಗರದ ತುಂಬೆಲ್ಲ ಜನರೇ ತುಂಬಿದ್ದರು. ಜನರಲ್ ತಿಮ್ಮಯ್ಯ ವೃತ್ತದಿಂದ ರಾಜಾಸೀಟು ತೆರಳುವ ರಸ್ತೆಯಲ್ಲಿ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಂಡುಬಂದರು.ದಸರಾದ ಪ್ರಮುಖ ಆಕರ್ಷಣೆ ದಶಮಂಟಪಗಳ ಶೋಭಾಯಾತ್ರೆ ಅಂಗವಾಗಿ ಗುರುವಾರ ರಾತ್ರಿ 10 ಗಂಟೆಯ ನಂತರ ಪೇಟೆ ಶ್ರೀ ರಾಮ ಮಂದಿರ ದೇವಾಲಯದ ಮಂಟಪ ಹೊರಡುವ ಮೂಲಕ ಶೋಭಾಯಾತ್ರೆಗೆ ಚಾಲನೆ ದೊರೆಯಿತು.ನಗರದ ಗಾಂಧಿ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ರಾತ್ರಿ ಇಡೀ ನಡೆದಿದ್ದು, ಸಾವಿರಾರು ಮಂದಿ ಕುಳಿತು ವೀಕ್ಷಣೆ ಮಾಡಿದರು.ನಗರದ ನಾಲ್ಕು ಶಕ್ತಿ ದೇವತೆಗಳಾದ ಕುಂದುರು ಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕಂಚಿ ಕಾಮಾಕ್ಷಿ ಹಾಗೂ ಕೋಟೆ ಮಾರಿಯಮ್ಮ ದೇವಾಲಯಗಳ ಕರಗಗಳು ರಾತ್ರಿ ಇಡೀ ನಗರ ಸಂಚಾರವನ್ನು ನಡೆಸಿತು.ದಸರಾ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ನಗರದ ಎಲ್ಲ ಕಡೆಗಳಲ್ಲಿ ಕೂಡ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ನಗರದಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು.ನಗರದ ರಸ್ತೆಯುದ್ದಕ್ಕೂ ವಿವಿಧ ಅಂಗಡಿ ಮಳಿಗೆಗಳು ತೆರದಿದ್ದು, ವ್ಯಾಪಾರ ವಹಿವಾಟು ಜೋರಾಗಿ ನಡೆಯಿತು.ಶೋಭಾಯಾತ್ರೆ : ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಯಾದ ದಶಮಂಟಪಗಳ ಶೋಭಾಯಾತ್ರೆ ವೈಭವಯುತವಾಗಿ ಜರುಗಿತು. ಶೋಭಾಯಾತ್ರೆ ಇರುಳನ್ನು ಬೆಳೆಕಾಗಿಸುವಂತೆ ಮಾಡಿತು. ಪೇಟೆ ಶ್ರೀ ರಾಮ ಮಂದಿರ, ಕೋಟೆ ಮಹಾ ಗಣಪತಿ, ಕುಂದೂರು ಮೊಟ್ಟೆ ಚೌಟಿ ಮಾರಿಯಮ್ಮ, ಕಂಚಿ ಕಾಮಾಕ್ಷಿ, ಕೋಟೆ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕರವಲೆ ಭಗವತಿ, ಚೌಡೇಶ್ವರಿ, ದೇಚೂರು ಶ್ರೀ ರಾಮ ಮಂದಿರ, ಕೋದಂಡ ರಾಮ ದೇವಾಲಯಗಳ ಮಂಟಪಗಳು ಶೋಭಾಯಾತ್ರೆಯ ಮೂಲಕ ಎಲ್ಲರನ್ನೂ ಆಕರ್ಷಿಸಿತು. ಪ್ರದರ್ಶನ ವೇಳೆ ಎಲ್ಲರೂ ಕೂಡ ಕುತೂಹಲದಿಂದ ವೀಕ್ಷಿಸಿದರು. ಒಂದೊಂದು ಮಂಟಪಗಳು ಕೂಡ ಒಂದೊಂದು ಕಥಾ ಸಾರಾಂಶವನ್ನು ಅಳವಡಿಸಿ ವಿಭಿನ್ನ ಪ್ರದರ್ಶನ ನೀಡಿತು.