ದೀಪಾವಳಿ: ಹೊನ್ನಾಳಿಯಲ್ಲಿ ವಸ್ತುಗಳ ಖರೀದಿಗೆ ಜನಸಾಗರ

| Published : Oct 21 2025, 01:00 AM IST

ಸಾರಾಂಶ

ದೀಪಗಳ ಹಬ್ಬ ದೀಪಾವಳಿ ಹಬ್ಬ ಸಂಭ್ರಮದ ಆಚರಣೆಗೆ ಅಗತ್ಯ ವಸ್ತುಗಳಾದ ಬಾಳೆಗಿಡ, ಮಾವಿನ ಸೊಪ್ಪು, ವಿವಿಧವಾದ ಹೂವುಗಳು ಬಾಳೆಹಣ್ಣು, ತೆಂಗಿನಕಾಯಿ ಸೇರಿದಂತೆ ಬೆನಕನ ಪೂಜೆಗೆ ಆವಶ್ಯಕವಾದ ಬ್ರಹ್ಮದಂಡೆ, ಉತ್ತರಾಣಿ ಕಡ್ಡಿ, ಕಾಚಿಕಡ್ಡಿ, ತಾವರೆ ಹೂವು ಸೇರಿದಂತೆ ಅನೇಕ ವಿಧವಾದ ಪೂಜಾ ಸಾಮಗ್ರಿಗಳ ಖರೀದಿಗಾಗಿ ಹೊನ್ನಾಳಿ ಪಟ್ಟಣಕ್ಕೆ ಜನಸಾಗರವೇ ಹರಿದುಬಂದಿತ್ತು.

- ಪೇಟೆ, ಅಂಗಡಿ, ರಸ್ತೆಗಳಲ್ಲಿ ಜನಸಂದಣಿ । ಸಂಚಾರ ವ್ಯವಸ್ಥೆ ಅಸ್ತವ್ಯಸ್ತ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ದೀಪಗಳ ಹಬ್ಬ ದೀಪಾವಳಿ ಹಬ್ಬ ಸಂಭ್ರಮದ ಆಚರಣೆಗೆ ಅಗತ್ಯ ವಸ್ತುಗಳಾದ ಬಾಳೆಗಿಡ, ಮಾವಿನ ಸೊಪ್ಪು, ವಿವಿಧವಾದ ಹೂವುಗಳು ಬಾಳೆಹಣ್ಣು, ತೆಂಗಿನಕಾಯಿ ಸೇರಿದಂತೆ ಬೆನಕನ ಪೂಜೆಗೆ ಆವಶ್ಯಕವಾದ ಬ್ರಹ್ಮದಂಡೆ, ಉತ್ತರಾಣಿ ಕಡ್ಡಿ, ಕಾಚಿಕಡ್ಡಿ, ತಾವರೆ ಹೂವು ಸೇರಿದಂತೆ ಅನೇಕ ವಿಧವಾದ ಪೂಜಾ ಸಾಮಗ್ರಿಗಳ ಖರೀದಿಗಾಗಿ ಹೊನ್ನಾಳಿ ಪಟ್ಟಣಕ್ಕೆ ಜನಸಾಗರವೇ ಹರಿದುಬಂದಿತ್ತು.

ವಿಶೇಷವಾಗಿ ತಾಲೂಕಿನ ಗ್ರಾಮೀಣ ಜನತೆ ಹಾಗೂ ರೈತರು ರಾಸುಗಳ ಅಲಂಕಾರಕ್ಕಾಗಿ ಬಣ್ಣ ಹಾಗೂ ಹಿರಿಯರ ಪೂಜೆಗಾಗಿ ಹೊಸ ಬಟ್ಟೆಗಳು, ವಿವಿಧ ರೀತಿಯ ಹಣತೆಗಳು, ಅಕಾಶ ಬುಟ್ಟಿ, ಮುಖ್ಯವಾಗಿ ಪಟಾಕಿಗಳ ಖರೀದಿಗಾಗಿ ಹೊನ್ನಾಳಿ ಪೇಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.

ವಿವಿಧ ವಾಹಗಳಲ್ಲಿ ಅಗಮಿಸಿದ್ದ ಹೆಚ್ಚಿನ ಜನರಿಂದಾಗಿ ಸಂಚಾರ ದಟ್ಟಣೆ ಉಂಟಾಗಿ ಸುಮಗ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು. ರಸ್ತೆಗಳಲ್ಲಿ ಜನರು ಮುಂದೆ ಸಾಗಲು ಹರಸಾಹಸಪಟ್ಟರು. ರಸ್ತೆಯ ಮಗ್ಗುಲಲ್ಲಿ ಸೇವಂತಿಗೆ, ಚಂಡೆ, ಕನಕಾಂಬರ, ಕಾಕಡ ಸೇರಿದಂತೆ ಅನೇಕ ರೀತಿಯ ಹೂವುಗಳ ದೊಡ್ಡ ದೊಡ್ಡ ರಾಶಿ, ಮಾವಿನ ಸೊಪ್ಪು, ಬಾಳೆ ಗಿಡ ಹಾಗೂ ಬಾಳೆಎಲೆಗಳು ಹಾಕಿಕೊಂಡು ಮಾರಾಟಗಾರರು ಮಾರಾಟ ಮಾಡುತ್ತಿದ್ದರು. ದಿನಸಿ, ಬಟ್ಟೆ, ಎಲೆಕ್ಟ್ರಿಕಲ್‌ ವಸ್ತುಗಳು, ಬಣ್ಣಗಳು ಹಾಗೂ ಪಟಾಕಿಗಳ ಅಂಗಡಿಗಳಲ್ಲಿ ಜನಸ್ತೋಮ ಕಂಡುಬಂತು.

ವಸ್ತುಗಳ ಖರೀದಿಯಲ್ಲಿ ಜನರ ಉತ್ಸಾಹ, ಜನಸಂದಣಿ ನೋಡಿದರೆ ಜನರಿಗೆ ದುಬಾರಿ ದುನಿಯಾದ ಪರಿವೆ ಇಲ್ಲದಂತಿತ್ತು. ಜನರು ಅತ್ಯಂತ ಉತ್ಸಾಹದಿಂದ ದೀಪಾವಳಿ ಸಂಭ್ರಮಕ್ಕಾಗಿ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು.

- - -

-ಎಚ್.ಎಲ್.ಐ3, 3ಎ:

ದೀಪಾವಳಿ ಹಿನ್ನೆಲೆ ಹೊನ್ನಾಳಿ ಪಟ್ಟಣದಲ್ಲಿ ತಾಲೂಕಿನ ಜನತೆ ಅಗತ್ಯ ವಸ್ತುಗಳ ಖರೀದಿಯಲ್ಲಿ ಬ್ಯುಸಿಯಾಗಿರುವುದು.