ಹೊಸ ವರ್ಷದ ಹಿನ್ನೆಲೆಯಲ್ಲಿ ನಗರದ ಹಲವು ದೇವಸ್ಥಾನಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹೊಸ ವರ್ಷದ ಹಿನ್ನೆಲೆಯಲ್ಲಿ ನಗರದ ಹಲವು ದೇವಸ್ಥಾನಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ನಗರದ ಬನಶಂಕರಿ ದೇವಸ್ಥಾನ, ಇಸ್ಕಾನ್ ಕೃಷ್ಣನ ದೇಗುಲ, ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನ, ಮಲ್ಲೇಶ್ವರದ ಕಾಡು ಮಲ್ಲೇಶ್ವರ ದೇವಸ್ಥಾನ, ಸಾಯಿಬಾಬಾ ದೇವಸ್ಥಾನ ಸೇರಿದಂತೆಅನೇಕ ದೇಗುಲಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಹೊಸ ವರ್ಷದ ಅಂಗವಾಗಿ ದೇವರಿಗೆ ವಿಶೇಷ ಅಲಂಕಾರ, ಅಭಿಷೇಕ, ಪೂಜೆ ಕೈಂಕಾರ್ಯಗಳು ಜರುಗಿದವು. ಭಕ್ತರಿಗೆ ಪ್ರಸಾದ ವಿನಿಯೋಗದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಬನಶಂಕರಿ ದೇವಸ್ಥಾನದಲ್ಲಿ ದೇವಿಗೆ ಮುತ್ತು ರತ್ನಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಜ.3ರಂದು ಬನದ ಹುಣ್ಣಿಮೆಯಂದು ಬನಶಂಕರಿ ದೇವಾಲಯದ 110ನೇ ವರ್ಷದ ಜಾತ್ರಾ ಮಹೋತ್ಸವ ಅಂಗವಾಗಿ ಬ್ರಹ್ಮ ರಥೋತ್ಸವ ಜರುಗಲಿದೆ. ಹೀಗಾಗಿ, ಭಕ್ತರ ಸಂಖ್ಯೆ ಹೆಚ್ಚಿತ್ತು.

ವರ್ಷದ ಮೊದಲ ದಿನ ದೇವರ ಆಶೀರ್ವಾದ ಪಡೆಯಲು ನಗರದ ಬಹುತೇಕ ದೇವಾಲಯಗಳಿಗೆ ಸಾವಿರಾರು ಭಕ್ತರು ಮುಂಜಾನೆಯೇ ತೆರಳಿದ್ದರು. ಹೀಗಾಗಿ, ದರ್ಶನಕ್ಕೆ ಉದ್ದನೆ ಸಾಲು ಕಂಡು ಬಂತು.

ಬಸವನಗುಡಿಯ ದೊಡ್ಡ ಗಣಪತಿ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಅಲಂಕಾರಗಳನ್ನು ಏರ್ಪಡಿಸಲಾಗಿತ್ತು. ವಸಂತಪುರದ ಐತಿಹಾಸಿಕ ವಸಂತ ವಲ್ಲಭರಾಯ ದೇವಸ್ಥಾನ ಹಾಗೂ ರಾಜಾಜಿನಗರದ ಇಸ್ಕಾನ್ ದೇವಾಲಯಗಳಲ್ಲಿಯೂ ಜನಸಂದಣಿ ಹೆಚ್ಚಾಗಿತ್ತು.