ಕ್ರಷರ್ ಮತ್ತು ಗುತ್ತಿಗೆದಾರರ ವಿವಾದ ಮತ್ತಷ್ಟು ಕಗ್ಗಂಟು

| Published : Oct 13 2025, 02:02 AM IST

ಕ್ರಷರ್ ಮತ್ತು ಗುತ್ತಿಗೆದಾರರ ವಿವಾದ ಮತ್ತಷ್ಟು ಕಗ್ಗಂಟು
Share this Article
  • FB
  • TW
  • Linkdin
  • Email

ಸಾರಾಂಶ

ಕ್ರಷರ್ ಮಾಲಿಕರು ಈ ಹಿಂದಿನಂತೆಯೇ ಜಲ್ಲಿ ಮಾರಾಟ ಮಾಡುವ ಪ್ರಕ್ರಿಯೇ ಪ್ರಾರಂಭಿಸಬೇಕು

ಕೊಪ್ಪಳ: ಕ್ರಷರ್ ಮಾಲಿಕರು ಮತ್ತು ಗುತ್ತಿಗೆದಾರರ ನಡುವಿನ ವಿವಾದ ಇತ್ಯರ್ಥ ಮಾಡುವ ಪ್ರಯತ್ನ ಭಾನುವಾರ ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ ಉಪಸ್ಥಿತಿಯಲ್ಲಿ ನಡೆಯಿತಾದರೂ ಪೂರ್ಣ ಪರಿಹಾರ ಕಂಡುಕೊಳ್ಳಲು ಆಗಿಲ್ಲ, ಹೀಗಾಗಿ, ಮತ್ತಷ್ಟು ಕಗ್ಗಂಟಾಗಿದೆ.

ಅ.13 ರಿಂದ ಗುತ್ತಿಗೆದಾರರು ಕೆಲಸ ತ್ಯಜಿಸಿ ಪ್ರತಿಭಟನೆಗೆ ಮಾಡವುದಕ್ಕೆ ಮುಂದಾಗಿದ್ದರು. ಆದರೆ ಮಾತುಕತೆಯ ವೇಳೆಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಮೂರು ದಿನಗಳ ಕಾಲವಕಾಶ ಪಡೆದಿದ್ದಾರೆ. ಹೀಗಾಗಿ ಅ. 15 ವರೆಗೂ ಕಾಲವಕಾಶ ನೀಡಲಾಗಿದ್ದು, ಗುತ್ತಿಗೆದಾರರು ತಮ್ಮ ಪ್ರತಿಭಟನೆ ಮುಂದೂಡಿದ್ದಾರೆ.

ಆಗಿದ್ದೇನು:ಕೊಪ್ಪಳ ನಗರದ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಸಂಸದ ರಾಜಶೇಖರ ಹಿಟ್ನಾಳ,ಶಾಸಕ ರಾಘವೇಂದ್ರ ಹಿಟ್ನಾಳ ಉಪಸ್ಥಿತಿಯಲ್ಲಿ ಗುತ್ತಿಗೆದಾರರು ಹಾಗೂ ಕ್ರಷರ್ ಮಾಲಿಕರು ಸಭೆ ಸೇರಿದ್ದರು.

ಸಭೆಯಲ್ಲಿ ಗುತ್ತಿಗೆದಾರರು ಪ್ರೇರಣಾ ಸಂಸ್ಥೆಯ ಮೂಲಕವೇ ಏಕಗವಾಕ್ಷಿ ಅಡಿಯಲ್ಲಿ ಜಲ್ಲಿ ಪೂರೈಕೆ ಕಾನೂನು ಬಾಹೀರ, ಅಷ್ಟೇ ಅಲ್ಲ ಸರ್ಕಾರಿ ಕೆಲಸ ಮಾಡುವ ಗುತ್ತಿಗೆದಾರರಿಗೆ ಜಲ್ಲಿ ಪೂರೈಸುವುದು ಕಡ್ಡಾಯ ಎಂದು ರಾಜ್ಯ ಸರ್ಕಾರ 2002 ರಲ್ಲಿಯೇ ಆದೇಶ ಮಾಡಿದೆ. ಹೀಗಾಗಿ, ಕ್ರಷರ್ ಮಾಲಿಕರು ಈ ಹಿಂದಿನಂತೆಯೇ ಜಲ್ಲಿ ಮಾರಾಟ ಮಾಡುವ ಪ್ರಕ್ರಿಯೇ ಪ್ರಾರಂಭಿಸಬೇಕು. ಇದನ್ನು ಏಕಗವಾಕ್ಷಿಯಡಿ ಮಾಡುವುದನ್ನು ಕೈಬಿಡಬೇಕು ಎಂದು ಬಿಗಿಪಟ್ಟು ಹಿಡಿದರು.

ಇದಕ್ಕೆ ಪ್ರತಿಯಾಗಿ ಕ್ರಷರ್ ಮಾಲಿಕರು ನಾವು ಇತರೆ ಬೇಡಿಕೆಗಳನ್ನು ಶಾಸಕರು,ಸಂಸದರು ಈಡೇರಿಸಲಿ, ಆದರೆ, ನಾವು ಪ್ರೇರಣಾ ಸಂಸ್ಥೆಯ ಮೂಲಕ ಪೂರೈಕೆ ಮಾಡುವುದು ನಮ್ಮ ಉಳುವಿಗಾಗಿ, ಹೀಗಾಗಿ ಇದನ್ನು ನಾವು ಯಾವುದೇ ಕಾರಣಕ್ಕೂ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದರು. ಹೀಗೆ ಮಾಡುವುದರಿಂದ ಜಿಎಸ್ ಟಿ ಪಾವತಿ ಸಮಸ್ಯೆಯಾಗುತ್ತ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಮಧ್ಯೆ ಪ್ರವೇಶ ಮಾಡಿದ ಶಾಸಕ ರಾಘವೇಂದ್ರ ಹಿಟ್ನಾಳ ಗುತ್ತಿಗೆದಾರರು ಕೆಲವೊಂದು ಬೇಡಿಕೆ ಇಟ್ಟಿದ್ದಾರೆ. ನಿರ್ಮಿತಿ ಕೇಂದ್ರ ಮತ್ತು ಲ್ಯಾಂಡ್ ಆರ್ಮಿ ಸೇರಿದಂತೆ ಸರ್ಕಾರ ಎಜೆನ್ಸಿಯಿಂದ ಪ್ಯಾಕೇಜ್ ಗುತ್ತಿಗೆ ನೀಡುವುದನ್ನು ಕೈಬಿಡಬೇಕು ಎನ್ನುವ ಬೇಡಿಕೆ ಸೇರಿದಂತೆ ಹಲವಾರು ಬೇಡಿಕೆ ಗುತ್ತಿಗೆದಾರರ ಹಿತ ಕಾಯಲು ಮಾಡುವ ಭರವಸೆ ನೀಡಿದರು.

ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಪ್ರೇರಣಾ ಸಂಸ್ಥೆ ಅಥವಾ ಎಜೆನ್ಸಿ ಮಾಡಿರುವುದು ಎಲ್ಲರ ಅನುಕೂಲಕ್ಕಾಗಿ, ಕ್ರಷರ್ ಮಾಲಿಕರ ಉಳುವಿಗಾಗಿ, ಹೀಗಾಗಿ, ಗುತ್ತಿಗೆದಾರರ ಬೇಡಿಕೆಯಂತೆ ಉದ್ರಿಯನ್ನು ಷರತ್ತು ಬದ್ಧವಾಗಿ ನೀಡುವ ಕುರಿತು ಚಿಂತನೆ ಮಾಡೋಣ, ಏಕಗವಾಕ್ಷಿ ಪದ್ಧತಿ ಮುಂದುವರೆಸೋಣ ಎಂದು ಹೇಳುತ್ತಿದ್ದ ಗುತ್ತಿಗೆದರಾರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಹೀಗಾಗಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದೆ ಇರುವುದರಿಂದ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಅ.15 ವರೆಗೂ ಸಮಯ ನೀಡಿ ಎಲ್ಲರನ್ನು ಸೇರಿ ಇತ್ಯರ್ಥ ಮಾಡುವ ದಿಸೆಯಲ್ಲಿ ನಾನು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಹೇಳಿದ್ದರಿಂದ ಗುತ್ತಿಗೆದಾರರು ಅ.13 ರಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಅ.15 ಕ್ಕೆ ಮುಂದೂಡಿದ್ದಾರೆ.

ಮಖಂಡರಾದ ಎಸ್. ಬಿ.ನಾಗರಳ್ಳಿ, ಬಸವರಾಜ ಪುರದ, ಹನುಮೇಶ ಕಡೇಮನಿ, ದೇವಪ್ಪ ಅರಿಕೇರಿ, ಎಲ್.ಎಂ. ಮಲ್ಲಯ್ಯ, ಶಂಕರಭಾವಿಮನಿ, ಎಸ್. ಪ್ರಸಾದ, ರಾಜಶೇಖರ ಗಂಗಾವತಿ, ಕೃಷ್ಣಾ ಇಟ್ಟಂಗಿ, ವೆಂಕಟೇಶ ಸುಂದರಂ, ರಾಜಣ್ಣ ನಾಲ್ವಡ, ಶ್ರೀಧರ, ಮಂಜುನಾಥ ಪಲ್ಲೇದ ಮೊದಲಾದವರು ಇದ್ದರು.