ಸಾರಾಂಶ
ಕರವೇಯಿಂದ ಪಾಲಿಕೆ ಮುಂಭಾಗ ಉಪವಾಸ ಸತ್ಯಾಗ್ರಹ
ಕನ್ನಡಪ್ರಭ ವಾರ್ತೆ ದಾವಣಗೆರೆಕನ್ನಡೇತರ ನಾಮಫಲಕ ತೆರವಿಗೆ ಒತ್ತಾಯಿಸಿ ಹೋರಾಟದ ವೇಳೆ ಬಂಧಿತರಾದ ಕನ್ನಡ ಪರ ಹೋರಾಟಗಾರರು, ಕಾರ್ಯಕರ್ತರ ತಕ್ಷಣವೇ ಬಿಡುಗಡೆಗೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಹಾಗೂ ಕನ್ನಡ ಪರ ಸಂಘಟನೆಗಳ ಒಕ್ಕೂಟದಿಂದ ನಗರದಲ್ಲಿ ಮಂಗಳವಾರ ಪ್ರತ್ಯೇಕ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಪಾಲಿಕೆ ಮುಂಭಾಗದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಒಂದು ದಿನದ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ಕನ್ನಡ ಪರ ಚಿಂತಕರು, ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಭೇಟಿ ನೀಡಿ ಬಂಧಿತ ನಾರಾಯಣಗೌಡ ಸೇರಿ ಕನ್ನಡ ಪರ ಹೋರಾಟಗಾರರ ಬಿಡುಗಡೆಗೆ ಒತ್ತಾಯಿಸಿ ಘೋಷಣೆ ಕೂಗಿದರು.ಈ ವೇಳೆ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಬೆಂಗಳೂರಿನಲ್ಲಿ ಕನ್ನಡೇತರ ನಾಮಫಲಕ ತೆರವುಗೊಳಿಸಿ, ಕನ್ನಡ ಭಾಷಾ ಫಲಕ, ಕನ್ನಡ ಭಾಷೆಗೆ ಪ್ರಥಮಾದ್ಯತೆ ನೀಡಲು ಒತ್ತಾಯಿಸಿ ಹೋರಾಟ ನಡೆಸಿದ್ದ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಸೇರಿ ಕನ್ನಡ ಪರ ಹೋರಾಟಗಾರರ ಬಂಧಿಸಿದ ಸರ್ಕಾರ, ಪೊಲೀಸ್ ಇಲಾಖೆ ಕ್ರಮವನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.
ಬಂಧಿತ ನಾರಾಯಣ ಗೌಡ ಸೇರಿ ಎಲ್ಲಾ ಹೋರಾಟಗಾರರನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಹೋರಾಟಗಾರರ ಮೇಲೆ ದಾಖಲಿಸಿದ ಎಲ್ಲಾ ಕೇಸ್‌ಗಳನ್ನು ಹಿಂಪಡೆಯಬೇಕು. ಸರ್ಕಾರ ಮಾಡಬೇಕಾದ ಕೆಲಸವನ್ನು ಕನ್ನಡ ಪರ ಹೋರಾಟಗಾರರು, ಸಂಘಟನೆಗಳು ಮಾಡುತ್ತಿದೆ. ಇಡೀ ರಾಜ್ಯದ ಜನತೆ ಮೆಚ್ಚುವ ಈ ಕೆಲಸವನ್ನು ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ಹತ್ತಿಕ್ಕುವ ದುಸ್ಸಾಹಸ ಮಾಡಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ಮಾತನಾಡಿ, ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಸೇರಿ ಕನ್ನಡ ಪರ ಹೋರಾಟಗಾರರ ತಕ್ಷಣ ಬೇಷರತ್ ಬಿಡುಗಡೆ ಮಾಡಬೇಕು. ನಾರಾಯಣಗೌಡ ಇತರರ ಬಂಧಿಸಿದ ಮಾತ್ರಕ್ಕೆ ರಾಜ್ಯದಲ್ಲಿ ಕನ್ನಡ ಪರ ಧ್ವನಿ, ಹೋರಾಟಗಳನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಕರ್ನಾಟಕ ಸರ್ಕಾರವೆಂಬುದು ಕೇವಲ ಹೆಸರಿಗಷ್ಟೇ ಇದ್ದಂತೆ. ಕನ್ನಡ ಕಾವಲು ಸಮಿತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದಂತ ನಿಗಮ ಮಂಡಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಾಕೆ ಇರಬೇಕು ಎಂದು ಪ್ರಶ್ನಿಸಿದರು.
ಕರ್ನಾಟಕ ಏಕತಾ ವೇದಿಕೆ ರಾಜ್ಯಾಧ್ಯಕ್ಷ ಎನ್.ಎಚ್.ಹಾಲೇಶ ಮಾತನಾಡಿ, ಬೆಂಗಳೂರಿನಲ್ಲಿ ಆಂಗ್ಲ, ಹಿಂದಿ, ಅನ್ಯ ಭಾಷೆ ಫಲಕ ಇದ್ದು, ಅವುಗಳನ್ನು ತೆರವುಗೊಳಿಸಲು ಹೋರಾಟ ನಡೆಸಿದ್ದು ತಪ್ಪೇ? ಇಂತಹ ಹೋರಾಟ ಹತ್ತಿಕ್ಕಲೇ ಬಂಧಿಸಿದ್ದು, ರಾಜ್ಯವ್ಯಾಪಿ ಬಂಧಿತರ ಬಿಡುಗಡೆಗೆ ಒತ್ತಾಯಿಸಿ ಮತ್ತಷ್ಟು ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.ಹಿರಿಯ ಜಾನಪದ ತಜ್ಞ ಡಾ.ಎಂ.ಜಿ.ಈಶ್ವರಪ್ಪ, ಹಿರಿಯ ಪ್ರಾಧ್ಯಾಪಕ ಡಾ.ಎಚ್.ಎಸ್.ಮಂಜುನಾಥ ಕುರ್ಕಿ, ರಾಮದೇವಪ್ಪ, ಮಹೇಶ್ವರಪ್ಪ, ಆರ್.ಎಂ.ಶಿವಯ್ಯ, ರಾಮೇಗೌಡ, ಶಿವಾನಂದ ಪಾಟೀಲ್, ಮಾರುತಿ, ಜಯರಾಮ, ರಾಘವೇಂದ್ರ, ಈರಣ್ಣ, ಬಸಮ್ಮ, ಗಿರೀಶಕುಮಾರ, ಜಿ.ಎಸ್.ಸಂತೋಷ, ಮಹೇಶ್ವರಪ್ಪ, ಜಬೀವುಲ್ಲಾ, ಎಂ.ಡಿ.ರಫೀಕ್, ದಾದಾಪೀರ್, ಆಟೋ ರಫೀಕ್, ದಾದೇಷ್, ಬಾಷಾ ಸಾಬ್, ಹರಿಹರ ರಾಜೇಶ ಇತರರಿದ್ದರು.
........................ಪ್ರಕರಣ ದಾಖಲಿಸಿದರೂ ಹೋರಾಟದ ಧ್ವನಿ ಅಡಗದು: ಶಿವಕುಮಾರ
* ಕನ್ನಡ ಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನಾ ಮೆರವಣಿಗೆದಾವಣಗೆರೆ: ಮತ್ತೊಂದು ಕಡೆ ನಗರದ ಶ್ರೀ ಜಯದೇವ ವೃತ್ತದಿಂದ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಟಿ.ಶಿವಕುಮಾರ ಇತರರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಆರಂಭಿಸಿ, ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ, ಕಚೇರಿ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಟಿ.ಶಿವಕುಮಾರ, ಬೆಂಗಳೂರಿನಲ್ಲಿ ಕನ್ನಡ ಪರ ಹೋರಾಟಗಾರರ ಬಂಧಿಸಿ, ಹಲವಾರು ಸೆಕ್ಷನ್‌ನಡಿ ಕೇಸ್ ದಾಖಲಿಸಿರುವುದು ಕನ್ನಡ ಪರ ಹೋರಾಟ ಹತ್ತಿಕ್ಕುವ ಹುನ್ನಾರ. ಹೋರಾಟಗಾರರ ಮೇಲೆ ಕೇಸ್ ಗಳನ್ನು ಸರ್ಕಾರ ಹಾಕಿಸಬಹುದೇ ಹೊರತು, ಕನ್ನಡ ನಾಡು, ನುಡಿ, ನೆಲ, ಜಲ, ಜನರ ಪರವಾದ ಹೋರಾಟವನ್ನಾಗಲೀ, ಧ್ವನಿಯನ್ನಾಗಲೀ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.ಕನ್ನಡ ಪರ ಹೋರಾಟಗಾರರನ್ನು ಜೈಲುಗಳಲ್ಲಿ ಕೈದಿಗಳಂತೆ ಬಂಧಿಸಿಟ್ಟಿರುವುದು ಅಕ್ಷಮ್ಯ. ಪರಭಾಷಿಕರ ಚಿತಾವಣೆ, ಪ್ರಭಾವಕ್ಕೆ ಮಣಿದಿರುವ ರಾಜ್ಯ ಸರ್ಕಾರ, ಗೃಹ ಸಚಿವರು, ಪೊಲೀಸ್ ಇಲಾಖೆಗಳು ಕನ್ನಡ ಪರ ಹೋರಾಟಗಾರನ್ನು ಅಪರಾಧಿಗಳಂತೆ ಬಿಂಬಿಸಲು ಮುಂದಾಗಿದ್ದು ನಾಡಿನ ದೌರ್ಭಾಗ್ಯ. ನಾರಾಯಣಗೌಡ ಸೇರಿ ಬಂಧಿತ ಎಲ್ಲರನ್ನೂ ಬೇಷರತ್ ಬಿಡುಗಡೆ ಮಾಡಿ, ಎಲ್ಲಾ ಕೇಸ್ ಹಿಂಪಡೆಯಬೇಕು ಎಂದು ತಾಕೀತು ಮಾಡಿದರು.
ಒಕ್ಕೂಟದ ಹಿರಿಯ ಮುಖಂಡರಾದ ನಾಗೇಂದ್ರ ಬಂಡೀಕರ್, ಕೆ.ಜಿ.ಶಿವಕುಮಾರ, ಎಸ್.ಜಿ.ಸೋಮಶೇಖರ, ಕೆ.ಎನ್.ವೆಂಕಟೇಶ, ಮಂಜುನಾಥ ಗೌಡ, ನಾಗರಾಜ ಆದಾಪುರ, ಶುಭಮಂಗಳ, ಎಸ್.ಸುವರ್ಣಮ್ಮ, ಸುನೀತಾ ಭೀಮಣ್ಣ, ರಾಧಾಬಾಯಿ, ಸಂಗಮ್ಮ, ಸುವರ್ಣಕ್ಕ, ಸುಧಾ, ಸುನಂದಾ ವರ್ಣೇಕರ್, ಶಾಮ್ ಕುಶಾಲ್ ಇತರರರಿದ್ದರು................