ಸಾರಾಂಶ
ಗದಗ: ನಿಮಗೆ ಹಿಂದೂ ಹಬ್ಬಗಳ ಮೇಲೆ ಏಕೆ ಕಣ್ಣು? ಕಾನೂನು ಪಾಲನೆ ಬಗ್ಗೆ ನಿಜವಾದ ಶ್ರದ್ಧೆ ಇದ್ದರೆ, ರಾತ್ರಿ 9ರಿಂದ ಬೆಳಗ್ಗೆ 6ರ ವರೆಗೆ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ ಎಂಬ ನ್ಯಾಯಾಲಯದ ತೀರ್ಪುಗಳನ್ನು ಮೊದಲು ಪಾಲಿಸಿ ಎಂದು ಮಾಜಿ ಸಚಿವ ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದರು.
ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣೇಶ ಹಬ್ಬದ ಸಂದರ್ಭದಲ್ಲಿ ಡಿಜೆ ಮತ್ತು ಪಟಾಕಿಗಳ ಮೇಲೆ ಸರ್ಕಾರ ವಿಧಿಸಿರುವ ನಿಷೇಧ ಸರ್ಕಾರದ ಬಾಲಿಷ ನಡೆಯಾಗಿದೆ ಎಂದರು.ಸರ್ಕಾರದ ಈ ನಿರ್ಧಾರಗಳನ್ನು ಕೆಟ್ಟ ನೀತಿ ಎಂದು ಕರೆದ ಅವರು, ಗಣೇಶ ಉತ್ಸವಕ್ಕೆ ಬೇರೆಯವರೇ ಕಲ್ಲು ಹೊಡೆಯುತ್ತಾರೆ. ಹಿಂದೂಗಳು ಕಲ್ಲು ಹೊಡೆಯುವುದಿಲ್ಲ ಅಥವಾ ಪೆಟ್ರೋಲ್ ಬಾಂಬ್ ಹಾಕುವುದಿಲ್ಲ ಎಂದು ಅವರು, ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ಪೆಟ್ರೋಲ್ ಬಾಂಬ್ ಹಾಕಿದ್ದು ಎಸ್‌ಡಿಪಿಐ ಸದಸ್ಯರು, ಆದರೆ ಅವರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ, ಹೀಗಾಗಿ, ಗಣೇಶ ಉತ್ಸವಕ್ಕೆ ಹೊರಡಿಸಿರುವ ಸುತ್ತೋಲೆಯನ್ನು ಸರ್ಕಾರ ತಕ್ಷಣವೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಸಿಎಂ ಸಿದ್ದರಾಮಯ್ಯ, ಸಚಿವರಾದ ಎಚ್.ಕೆ. ಪಾಟೀಲ, ಎಂ.ಬಿ. ಪಾಟೀಲ, ಸತೀಶ್ ಜಾರಕಿಹೊಳಿ ಹಿಂದೂಗಳಲ್ಲ ಎಂದು ನಾವು ಹೇಳುವುದಿಲ್ಲ. ನೀವೆಲ್ಲ ಹಿಂದೂಗಳೇ, ಆದರೆ ನಿಮ್ಮ ರಾಜಕೀಯ ಸ್ವಾರ್ಥಕ್ಕಾಗಿ ನೀವೆಲ್ಲ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದೀರಿ ಎಂದು ಸಿ.ಟಿ. ರವಿ ಆಕ್ರೋಶ ವ್ಯಕ್ತ ಪಡಿಸಿದರು.ಟೀಕೆ ಮಾಡುವುದಿಲ್ಲ: ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಭಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿ.ಟಿ. ರವಿ, ಈ ಕುರಿತು ತಾವು ಯಾವುದೇ ಟೀಕೆ ಮಾಡುವುದಿಲ್ಲ, ಚಾಮುಂಡಿ ಮೇಲೆ ನಂಬಿಕೆ ಮತ್ತು ಭಕ್ತಿ ಇದ್ದರೆ ಭಾನು ಮುಷ್ತಾಕ್ ಅವರು ದಸರಾ ಉದ್ಘಾಟನೆ ಮಾಡುತ್ತಾರೆ. ದೇವನೊಬ್ಬ ನಾಮ ಹಲವು ಎಂಬ ಘೋಷಣೆಯನ್ನು ಭಾರತೀಯರು ಜಗತ್ತಿಗೆ ನೀಡಿದ್ದಾರೆ. ಆದರೆ ಇಸ್ಲಾಂ ಧರ್ಮ ಅಲ್ಲಾ ಮಾತ್ರ ದೇವರು ಎಂದು ಹೇಳುತ್ತದೆ. ಭಾನು ಅವರಿಗೆ ನಂಬಿಕೆ ಇದ್ದರೆ ದಸರಾ ಉದ್ಘಾಟನೆ ಮಾಡುತ್ತಾರೆ ಎಂದರು.