ಸಿ.ಟಿ.ರವಿ ಭೇಷರತ್ ಕ್ಷಮೆಯಾಚನೆಗೆ ಒತ್ತಾಯ

| Published : Mar 28 2024, 12:45 AM IST

ಸಾರಾಂಶ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿಯವರ ತಾಯಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಬಿಜೆಪಿ ಮುಖಂಡ ಸಿ.ಟಿ ರವಿ ಭೇಷರತ್ ಕ್ಷಮೆ ಯಾಚಿಸಬೇಕೆಂದು ಜಿಲ್ಲಾ ಭೋವಿ ಸಂಘ ಆಗ್ರಹಿಸಿದೆ.

ಚಿತ್ರದುರ್ಗ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿಯವರ ತಾಯಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಬಿಜೆಪಿ ಮುಖಂಡ ಸಿ.ಟಿ ರವಿ ಭೇಷರತ್ ಕ್ಷಮೆ ಯಾಚಿಸಬೇಕೆಂದು ಜಿಲ್ಲಾ ಭೋವಿ ಸಂಘ ಆಗ್ರಹಿಸಿದೆ.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಟಿ. ತಿಪ್ಪೇಸ್ವಾಮಿ, ಸಿ.ಟಿ.ರವಿ ಅವರ ಮಾತುಗಳು ಭೋವಿ ಸಮಾಜಕ್ಕೆ ಅತ್ಯಂತ ನೋವುಂಟು ಮಾಡಿದೆ. ಭೇಷರತ್ ಕ್ಷಮೆ ಯಾಚಿಸದಿದ್ದರೆ ಎಲ್ಲ ಕಡೆ ಘೇರಾವ್ ಮಾಡಿ ಕಪ್ಪು ಪಟ್ಟಿ ಪ್ರದರ್ಶಿಸಲಾಗುವುದೆಂದು ಎಚ್ಚರಿಸಿದರು.

ಹೆಣ್ಣನ್ನು ಭೂಮಾತೆ ಎಂದು ಗೌರವಿಸಲಾಗುವುದು. ರಾಜಕೀಯ ವ್ಯವಸ್ಥೆಯಲ್ಲಿ ಟೀಕೆ ಟಿಪ್ಪಣಿಗಳಿರುವುದು ಸಹಜ. ಆದರೆ ಶಿವರಾಜ್ ತಂಗಡಗಿಯವರ ತಾಯಿ ಕುರಿತು ಅವಹೇಳನವಾಗಿ ಮಾತನಾಡಿರುವ ಸಿ.ಟಿ.ರವಿ ಸಂಸ್ಕೃತಿ ಎಂತಹುದು ಎಂದು ತೋರಿಸುತ್ತದೆ. ಹಾಗಾಗಿ ಕ್ಷಮೆ ಕೇಳದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದರು.

ಜಿಲ್ಲಾ ಭೋವಿ ಸಂಘದ ಖಜಾಂಚಿ ಈ.ಮಂಜುನಾಥ್ ಮಾತನಾಡಿ ಶಿವರಾಜ್ ತಂಗಡಗಿ ತಾಯಿ ಬಗ್ಗೆ ಹೀನಾಯವಾದ ಮಾತುಗಳನ್ನು ಬಳಸಿರುವ ಸಿ.ಟಿ.ರವಿ ಎಲ್ಲಿಯೇ ಬರಲಿ ಅವರ ವಿರುದ್ಧ ಧಿಕ್ಕಾರಗಳನ್ನು ಕೂಗಿ ಘೇರಾವ್ ಹಾಕುತ್ತೇವೆ. ಇನ್ನು ಮುಂದೆ ಯಾವ ಹೆಣ್ಣಿಗೂ ಅವಮಾನವಾಗುವ ರೀತಿಯಲ್ಲಿ ನಡೆದುಕೊಳ್ಳಬಾರದೆಂದು ಆಕ್ರೋಶ ವ್ಯಕ್ತಪಡಿಸಿದರು.

ಗೋಡೆಮನೆ ಹನುಮಂತಪ್ಪ, ಜಿಲ್ಲಾ ಭೋವಿ ಸಂಘದ ಪ್ರಧಾನ ಕಾರ್ಯದರ್ಶಿ ಎಚ್. ಲಕ್ಷ್ಮಣ್, ದೇವರಾಜ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.