ಮಕ್ಕಳಿಗೆ ಸಾಹಿತ್ಯದ ಅಭಿರುಚಿ ಬೆಳೆಸಿ: ವಿ.ಟಿ.ಅರುಣ್

| Published : Jul 02 2024, 01:34 AM IST

ಸಾರಾಂಶ

ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಸ್ವಾಮಿ ವಿವೇಕಾನಂದ ಬಡಾವಣೆಯ ಶ್ರೀ ವರಂದಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಮುಂಗಾರು ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಎಳೆಯ ವಯಸ್ಸಿನಲ್ಲಿಯೇ ಮಕ್ಕಳಿಗೆ ಸಾಹಿತ್ಯದ ಅಭಿರುಚಿ ಬೆಳೆಸಬೇಕಿದೆ ಎಂದು ಶ್ರೀ ವರದಾಂಜನೇಯ ಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷ ವಿ.ಟಿ.ಅರುಣ್ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಸ್ವಾಮಿ ವಿವೇಕಾನಂದ ಬಡಾವಣೆಯ ಶ್ರೀ ವರಂದಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಮುಂಗಾರು ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮಕ್ಕೆ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಜಿಲ್ಲೆಯ ಮಣ್ಣಿನಲ್ಲೇ ಸಾಹಿತ್ಯದ ಗುಣ ಬೆರತು ಹೋಗಿದೆ. ಕುವೆಂಪು, ಶಿವರುದ್ರಪ್ಪರಂತಹ ರಾಷ್ಟ್ರಕವಿಗಳು ಇಲ್ಲಿ ಹುಟ್ಟಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಇಂತಹ ಮಣ್ಣಿನ ಮಕ್ಕಳಿಗೆ ಸಾಹಿತ್ಯದ ಬಗ್ಗೆ ಸ್ವಲ್ಪ ಅಭಿರುಚಿ ಬೆಳೆಸಿದರೂ ಅವರು ಕನ್ನಡ ಕಟ್ಟುವ ಕೆಲಸಕ್ಕೆ ಮುಂದಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಪ್ರತಿ ಬಡಾವಣೆಯಲ್ಲಿ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಪ್ರತಿಯೊಂದು ಮನೆ ಮನವನ್ನು ತಲುಪುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳು ಇಂಗ್ಲಿಷ್ ಮಾಧ್ಯಮದತ್ತ ಸಾಗುತ್ತಿರುವ ಯುವ ಪೀಳಿಗೆಯಲ್ಲಿ ಕನ್ನಡದ ಬಗ್ಗೆ ಆಸಕ್ತಿ ಮೂಡಿಸಲು ಸಹಕಾರಿ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸೌಹರ್ದ ನಿವಾಸಿಗಳ ಸಂಘದ ಅಧ್ಯಕ್ಷ ಶಿವನಗೌಡ ಮಾತನಾಡಿ, ಇಂದಿನ ಕಾಲದಲ್ಲಿ ಪ್ರತಿಯೊಬ್ಬರು ತಮ್ಮ ಮಕ್ಕಳು ವೈದ್ಯರು, ಎಂಜಿನಿಯರ್ ಆಗಲಿ ಎನ್ನುತ್ತಾರೆಯೇ ಹೊರತು ಸಾಹಿತಿಯಾಗಲಿ ಎಂದು ಪ್ರೊತ್ಸಾಹಿಸುವುದಿಲ್ಲ. ಇದರಿಂದ ಸಾಹಿತ್ಯದಿಂದ ಮಕ್ಕಳು ದೂರವಾಗುವ ಆತಂಕ ಎದುರಾಗಿದೆ. ಇದನ್ನು ತಪ್ಪಿಸಲು ಮಕ್ಕಳಿಗೆ ಕನ್ನಡ ಸಾಹಿತ್ಯದತ್ತ ಆಸಕ್ತಿ ಮೂಡಿಸುವ ಪ್ರಯತ್ನ ಮಾಡಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ತಾಲೂಕು ಅಧ್ಯಕ್ಷ ಕೆ. ಎಸ್. ಮಂಜಪ್ಪ ಮಾತನಾಡಿ, ಸಾಹಿತ್ಯಕ್ಕೆ ಜಾತಿ, ಮತ, ಧರ್ಮಗಳ ಭೇದ ಮರೆತು ಎಲ್ಲರನ್ನು ಒಟ್ಟುಗೂಡಿಸುವ, ಸೌಹಾರ್ದತೆ ಮೂಡಿಸುವ ಶಕ್ತಿ ಇದೆ ಎಂದರು.

ಅತಿಥಿಗಳಾಗಿ ಚಿರಂತನ ಯೋಗ ಕೇಂದ್ರದ ಸಂಸ್ಥಾಪಕಿ ಶಾಂತಶೆಟ್ಟಿ, ರೋಟರಿ ರಿವರ್ಸೈಡ್ ಮಾಜಿ ಅಧ್ಯಕ್ಷ ದ್ವಾರಕಾನಾಥ್ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಸುಮಿತ್ರಮ್ಮ ಸಂಗಡಿಗರಿಂದ ಭಜನೆ, ಉರ್ಮಿಳಾರಾವ್ ಕವನ ವಾಚಿಸಿದರು. ಶಿಕ್ಷಕ ಮೋಹನ್, ಅಭಿಷೇಕ್ ರಾಯಣ್ಣರಿಂದ ಏಕಪಾತ್ರಭಿನಯ ನಡೆಯಿತು. ಶೈಲಜಾ ಸತ್ಯನಾರಾಯಣ ಕಥೆ ಹೇಳಿದರು. ಶ್ರೀನಿವಾಸ್ ಗೋಪಾಲ ನಾಯಕ್ ಸ್ವಾಗತಿಸಿದರು. ಶಿವಪ್ಪ ಭೈರಾಪುರ ವಂದಿಸಿದರು.

ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಸ್ವಾಮಿ ವಿವೇಕಾನಂದ ಬಡಾವಣೆಯ ಶ್ರೀ ವರಂದಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಮುಂಗಾರು ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮಕ್ಕೆ ಶ್ರೀ ವರದಾಂಜನೇಯ ಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷ ವಿ. ಟಿ. ಅರುಣ್ ಚಾಲನೆ ನೀಡಿದರು.