ಹವಾಮಾನಕ್ಕೆ ತಕ್ಕಂತೆ ಬೇಸಾಯ ಮಾಡಿ: ಶಿವಕುಮಾರ ಹುಗ್ಗೆ

| Published : Feb 15 2024, 01:35 AM IST

ಸಾರಾಂಶ

ಬೀದರ್‌ನ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ ಗ್ರಾಮೀಣ ಕೃಷಿ ಮೌಸಮ್‌ ಸೇವಾ ಯೋಜನೆ ಅಡಿಯಲ್ಲಿ ಕೃಷಿಯಲ್ಲಿ ಬದಲಾಗುತ್ತಿರುವ ಹವಾಮಾನದ ಪರಿಣಾಮಗಳು ಹಾಗೂ ವಿವಿಧ ಬೆಳೆ ಪದ್ಧತಿಗಳ ಮಹತ್ವ ಕುರಿತು ರೈತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಬೀದರ್‌

ಬದಲಾಗುತ್ತಿರುವ ಹವಾಮಾನದ ಪರಿಸ್ಥಿತಿಗೆ ತಕ್ಕಂತೆ ಹೊಂದುಕೊಂಡು ಸುಧಾರಿತ ಬೇಸಾಯ ಕ್ರಮಗಳನ್ನು ಅವಳವಡಿಸಿಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕರಾದ ಶಿವಕುಮಾರ ಹುಗ್ಗೆ ಸಲಹೆ ನೀಡಿದರು.

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು ಅಡಿಯಲ್ಲಿ ಬರುವ ಕೃಷಿ ಸಂಶೋಧನಾ ಕೇಂದ್ರ, ಬೀದರ್‌ ಹಾಗೂ ಭಾರತ ಹವಾಮಾನ ವಿಭಾಗ, ನವದೆಹಲಿ ಆಶ್ರಯದಲ್ಲಿ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ ಗ್ರಾಮೀಣ ಕೃಷಿ ಮೌಸಮ್‌ ಸೇವಾ ಯೋಜನೆ ಅಡಿಯಲ್ಲಿ ಕೃಷಿಯಲ್ಲಿ ಬದಲಾಗುತ್ತಿರುವ ಹವಾಮಾನದ ಪರಿಣಾಮಗಳು ಹಾಗೂ ವಿವಿಧ ಬೆಳೆ ಪದ್ಧತಿಗಳ ಮಹತ್ವ ಕುರಿತು ರೈತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕೃಷಿ ವಿಜ್ಞಾನ ಕೇಂದ್ರ ಬೀದರ್‌ನ ಡಾ. ಸುನೀಲಕುಮಾರ ಎನ್‌ಎಂ ಅವರು ಕೃಷಿಯಲ್ಲಾಗುವ ನಷ್ಟವನ್ನು ಅವುಗಳಿಂದ ಹೇಗೆ ಕಡಿಮೆಗೊಳಿಸಬೇಕು ಎಂಬುವುದರ ಬಗ್ಗೆ ಸಭೆಯಲ್ಲಿ ರೈತರಿಗೆ ತಿಳಿಸಿಕೊಟ್ಟರು.

ಕೇಂದ್ರ ಉಗ್ರಾಣ ಸಂಸ್ಥೆಯ ವ್ಯವಸ್ಥಾಪಕರಾದ ರೀತಾ ಬನ್ನಸೂಧ ಮಾತನಾಡಿ, ಹವಾಮಾನ ಆಧಾರಿಸಿ ದವಸ ಧಾನ್ಯಗಳನ್ನು ಯಾವ ರೀತಿ ಉಗ್ರಾಣದಲ್ಲಿ ಶೇಖರಿಸಿ ಅವುಗಳ ಗುಣಮಟ್ಟ ದೀರ್ಘಕಾಲದವರೆಗೆ ಕಾಪಾಡುವುದು ಮತ್ತು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭಾಂಶ ಪಡೆಯುವುದರ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

ಕಲಬುರಗಿಯ ಸಹ ಸಂಶೋಧನಾ ನಿರ್ದೇಶಕರಾದ ಡಾ. ಬಿ.ಎಂ ದೊಡ್ಡಮನಿ ಮಾತನಾಡಿ, ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿ ಅನುಗುಣವಾಗಿ ಹೊಸ ತಳಿಗಳನ್ನು ಅಭಿವೃದ್ಧಿಪಡಿಸುವುದರ ಬಗ್ಗೆ ಮಾರ್ಗದರ್ಶನ ನೀಡಿದರಲ್ಲದೇ ತೋಟಗಾರಿಕೆ ಮತ್ತು ಅರಣ್ಯ ಬೆಳೆಗಳ ಮಹತ್ವದ ಬಗ್ಗೆ ಅರಿವು ಮೂಡಿಸಿದರು.

ಕೆವಿಕೆ ಪ್ರಾಧ್ಯಾಪಕರಾದ ಡಾ. ಸುನೀಲ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ರೈತ ಜಾಗೃತಿ ಕಾರ್ಯಕ್ರಮದಲ್ಲಿ ವಿಜ್ಞಾನಿಗಳಾದ ಬಸವರಾಜ ಬಿರಾದಾರ, ಡಾ. ಅರ್‌.ಎಲ್‌ ಜಾಧವ ಮತ್ತು ಡಾ. ಜ್ಞಾನದೇವ ಬಿ., ಡಾ.ಮಲ್ಲಿಕಾರ್ಜುನ ಎನ್‌., ರೋಹಿತ್‌ ಬಿರಾದಾರ, ವೈಜಿನಾಥ, ಕೆ. ತಮ್ಮ ತಮ್ಮ ವಿಷಯಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಮಾಹಿತಿ ಮಂಡಿಸಿದರು.

ಬೀದರ್‌ ಜಿಲ್ಲೆಯ ವಿವಿಧ ತಾಲೂಕುಗಳಿಂದ ಸುಮಾರು 185 ರೈತರು ಪಾಲ್ಗೊಂಡು ಕಾರ್ಯಕ್ರಮದ ಲಾಭ ಪಡೆದುಕೊಂಡರು.