ಕನ್ನಡಪ್ರಭ ವಾರ್ತೆ ಮಡಿಕೇರಿ
ಪ್ರತಿ ಮನೆಗಳಲ್ಲಿ ಪುಸ್ತಕ ಓದುವ ಸಂಸ್ಕೃತಿ ಬೆಳೆಯಬೇಕು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಕರೆ ನೀಡಿದರು.ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಸೋಮವಾರಪೇಟೆ ಕೊಡವ ಸಮಾಜದಲ್ಲಿ ಏರ್ಪಡಿಸಿದ್ದ 6ನೇ ಕೊಡವ ಪುಸ್ತಕ ಪತ್ತಾಯ ಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕೊಡವರ ಸಾಮಾಜಿಕ ವ್ಯವಸ್ಥೆಯಲ್ಲಿ ತಮ್ಮದೇ ಆದ ಸಂಸ್ಕೃತಿ ಇರುವಂತೆ ಪುಸ್ತಕ ಸಂಸ್ಕೃತಿ ಬೆಳೆಸಿಕೊಳ್ಳುವುದು ಕೆಲವು ಅನಿಷ್ಟ ಸಂಸ್ಕೃತಿಗಳಿಂದ ದೂರವಾಗಲು ಸಹಕಾರಿಯಾಗಿದೆ ಎಂದರು. ಸೋಮವಾರಪೇಟೆ ಕೊಡವ ಸಮಾಜವು ಈ ಭಾಗದ ಜನಾಂಗ ಬಾಂಧವರಿಗೆ ಐನ್‌ಮನೆ ಇದ್ದಂತೆ. ಇಂತಹ ಜಾಗದಲ್ಲಿ ಪುಸ್ತಕ ಪತ್ತಾಯ ಸ್ಥಾಪಿಸಲು ಮುಂದಾಗಿರುವ ಅಧ್ಯಕ್ಷ ಮಾಳೇಟಿರ ಅಭಿಮನ್ಯುಕುಮಾರ್ ಹಾಗೂ ನಿರ್ದೇಶಕರ ಪುಸ್ತಕ ಪ್ರೀತಿ ಶ್ಲಾಘನೀಯ ಎಂದರು.ಹಿರಿಯರಾದ ಕಲ್ಲೇಂಗಡ ಅಪ್ಪಚ್ಚು ಮಾತನಾಡಿ, ಸಾಹಿತ್ಯ ರಚನೆಯಿಂದಾಗಿ ಸಂಸ್ಕೃತಿ ಉಳಿಯಲು ಸಾಧ್ಯವಾಗಿದೆ. ನಮ್ಮ ಸಂಘ-ಸಂಸ್ಥೆ, ಸಮಾಜಗಳು ಉಳಿಯಬೇಕಾದರೆ ಮಕ್ಕಳು ತಮ್ಮ ತಾಯ್ನೆಲದಲ್ಲಿ ಬದುಕು ಕಟ್ಟಿಕೊಳ್ಳಬೇಕೆಂದರು. ಅಕಾಡೆಮಿಯ ಪುಸ್ತಕ ಪತ್ತಾಯ ಯೋಜನೆಯು ಅತ್ಯುತ್ತಮ ಕಾರ್ಯವಾಗಿದ್ದು ಸಾಹಿತ್ಯದ ಸೊಬಗು ಕಾಣುವಂತಾಗಿದೆ ಎಂದರು.
ಪುಸ್ತಕ ಓದಿನಿಂದ ಸಂಸ್ಕೃತಿ ಪ್ರೀತಿ: ಮತ್ತೋರ್ವ ಅತಿಥಿ ಕವಯಿತ್ರಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಮಾತನಾಡಿ ಇತ್ತೀಚೆಗೆ ನಮ್ಮ ಬದುಕಿನ ನಡೆ ತಪ್ಪುತ್ತಿದೆ. ಇದಕ್ಕೆ ಕಾರಣ ನಾವು ನಮ್ಮ ಬದುಕಿನ ಸಾಹಿತ್ಯವನ್ನು ಮರೆತಿರುವುದು. ಮಕ್ಕಳಿಗೆ ಸಾಹಿತ್ಯದ ಬಗ್ಗೆ ಅಭಿಮಾನ ಹುಟ್ಟಿಸುವ ಒಳ್ಳೆಯ ಮಾರ್ಗ ಅಕಾಡೆಮಿಯಿಂದ ಯೋಜಿತವಾಗಿರುವ ಪುಸ್ತಕ ಪತ್ತಾಯ. ಪುಸ್ತಕ ಓದುವ ಮೂಲಕ ಸಾಹಿತ್ಯ, ಸಂಸ್ಕೃತಿಯ ಮೇಲೆ ಅಭಿಮಾನ ಹೆಚ್ಚಿಸಿಕೊಳ್ಳುವಂತಾಗಬೇಕು ಎಂದರು.ಕೊಡಗಿನ ಏಕೈಕ ಶಾಸ್ತ್ರಜ್ಞೆ, ಸಾಹಿತಿ ಕರೋಟಿರ ಶಶಿ ಸುಬ್ರಮಣಿ ವಿರಚಿತ, ನಂಬಿಕೆ ಪುರಾಣತ್‌ರ ನಡುಲ್ ಕೊಡವಡ ಸಾಂಸ್ಕೃತಿಕ ಬದ್‌ಕ್ ಪುಸ್ತಕದ 2ನೇ ಮುದ್ರಣವನ್ನು ಅಕಾಡೆಮಿ ವತಿಯಿಂದ ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ನಂತರ ಮಾತನಾಡಿದ ಶಶಿ ಸುಬ್ರಮಣಿ, ಕೊಡವ ಸಾಹಿತ್ಯ ರಚನೆಯಿಂದ ಕೊಡವ ಸಂಸ್ಕೃತಿ ಹಾಗೂ ನಿಜವಾದ ನಂಬಿಕೆಗಳು ಜೀವಂತ ಉಳಿದುಕೊಳ್ಳಲು ಕಾರಣವಾಗಿದೆ. ಕೊಡವ ಭಾಷೆಯಲ್ಲಿ ಸಂಶೋಧನಾ ಸಾಹಿತ್ಯ ಹೆಚ್ಚು ರಚನೆಯಾಗಬೇಕು ಎಂದರು. ಅಕಾಡೆಮಿಯ ಮಾಜಿ ಸದಸ್ಯ ತೇಲಪಂಡ ಕವನ್ ಕಾರ್ಯಪ್ಪ ಕೊಡವ ಪುಸ್ತಕತ್‌ರ ಅವಶ್ಯಕತೆ ಪಿಞ್ಞ ಪ್ರಯೋಜನ ವಿಷಯವಾಗಿ ವಿಚಾರ ಮಂಡಿಸಿದರು.ಕೊಡವ ಸಾಹಿತ್ಯಕ್ಕೆ ಕೊಡುಗೆ: ಪಟ್ಟೋಲೆ ಪಳಮೆಯಂತಹ ಜಾನಪದ ಸಾಹಿತ್ಯದಿಂದಾಗಿ ಇವತ್ತು ಕೊಡವರ ಸಂಸ್ಕೃತಿ, ಪದ್ಧತಿ, ಆಚರಣೆಗಳು ಉಳಿದುಕೊಳ್ಳಲು ಕಾರಣವಾಗಿದೆ. ಐ.ಮಾ.ಮುತ್ತಣ್ಣ, ಬಿ.ಡಿ.ಗಣಪತಿ, ಅಪ್ಪಚ್ಚ ಕವಿಗಳಂತ ಸಾಹಿತಿಗಳಿಂದ ಹಿಡಿದು ಆಧುನಿಕ ಸಾಹಿತ್ಯವೆಲ್ಲವೂ ಕೊಡವಾಮೆಯನ್ನು ಉಳಿಸಿಕೊಳ್ಳುವಲ್ಲಿ ಸಹಕಾರಿಯಾಗಿದೆ. ಪೂಮಾಲೆ ಕೊಡವ ಪತ್ರಿಕೆ ಸೇರಿದಂತೆ ಹಲವು ಪ್ರಕಟಣೆಗಳಿಂದ ಕೊಡವಾಮೆ ಉಳಿದುಕೊಂಡಿದೆ ಎಂದು ಅಭಿಪ್ರಾಯಪಟ್ಟರು.ಅಧ್ಯಕ್ಷತೆ ವಹಿಸಿದ್ದ ಕೊಡವ ಸಮಾಜದ ಅಧ್ಯಕ್ಷ, ವಕೀಲರಾದ ಮಾಳೇಟಿರ ಅಭಿಮನ್ಯು ಕುಮಾರ್ ಮಾತನಾಡಿ, ಕೊಡವ ಸಮಾಜದಲ್ಲಿ ಗ್ರಂಥಾಲಯ ಸ್ಥಾಪನೆ ನಮ್ಮ ಬಹುಕಾಲದ ಆಕಾಂಕ್ಷೆಯಾಗಿತ್ತು. ಕೊಡವ ಸಾಹಿತ್ಯ ಅಕಾಡೆಮಿಯ ಅತ್ಯುತ್ತಮವಾಗಿರುವ ಈ ಒಂದು ಯೋಜನೆಯಿಂದ ನಮ್ಮ ಆಸೆ ಈಡೇರಿದಂತಾಗಿದೆ ಎಂದರು. ಸೋಮವಾರಪೇಟೆ ವಿಭಾಗದಿಂದ ಬಹುದೊಡ್ಡ ಸಂಖ್ಯೆಯ ಸಾಹಿತ್ಯಾಭಿಮಾನಿಗಳು ಕಾರ್ಯಕ್ರಮಕ್ಕೆ ಬಂದಿರುವುದು ಇಲ್ಲಿನ ಜನರಲ್ಲಿರುವ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕವಾದ ಅಭಿರುಚಿ ತೋರಿಸುತ್ತಿದೆ. ಇಂದು ಜಿಲ್ಲೆಯಲ್ಲಿ ಸಾಹಿತ್ಯಪರ ಚಟುವಟಿಕೆಗಳು ಹೆಚ್ಚುತ್ತಿದೆ ಎಂದರು. ಈ ವೇಳೆ ಜಾನಪದ ಹಾಡುಗಾರ ನಾಪಂಡ ಚಿಣ್ಣಪ್ಪ ಸ್ವರಚಿತ ಕೊಡವ್ ನಾಡ್ ಗೀತೆಯನ್ನು ಹಾಡಿ ದರು. ಕೊಡವ ಸಮಾಜದ ವತಿಯಿಂದ ಸಮಾಜಕ್ಕಾಗಿ ದುಡಿಯುತ್ತಿರುವ ಹಾಗೂ ದುಡಿದ ಹಲವರನ್ನು ಗೌರವಿಸಲಾಯಿತು.ಮಚ್ಚಂಡ ಪ್ರಕಾಶ್ ಸ್ವಾಗತಿಸಿದರು. ಹಂಚೆಟ್ಟಿರ ಸಾರಿಕ ತಮ್ಮಯ್ಯ ಪ್ರಾರ್ಥಿಸಿದರು. ಕೊಡವ ಅಕಾಡೆಮಿ ಸದಸ್ಯೆ ಕಂಬೆಯಂಡ ಡೀನಾ ಬೋಜಣ್ಣ ನಿರೂಪಿಸಿದರು. ವೇದಿಕೆಯಲ್ಲಿ ಕೊಡವ ಸಮಾಜದ ಕಾರ್ಯದರ್ಶಿ ಕೊಚ್ಚೆರ ಅನಿಲ್‌ಕುಮಾರ್, ಖಜಾಂಚಿ ಪಾಡೆಯಂಡ ಮುತ್ತಣ್ಣ, ಕೊಡವ ಪೊಮ್ಮಕ್ಕಡ ಸಂಘದ ಅಧ್ಯಕ್ಷೆ ಬಾಚಿನಾಡಂಡ ಇಂದಿರಾ ಚಿಂಗಪ್ಪ ಇತರರು ಇದ್ದರು.