ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ಅಪರಾಧ ಮುಕ್ತ ಸಮಾಜಕ್ಕಾಗಿ ಇಂದು ಶಿಕ್ಷಣದ ಜತೆ ಮಕ್ಕಳಿಗೆ ಸಂಸ್ಕಾರದ ಮೌಲ್ಯ, ಕಾನೂನಿನ ಅರಿವನ್ನು ನೀಡುವ ಅಗತ್ಯವಿದೆ ಎಂದು ಬಂಗಾರಪೇಟೆ ಪ್ರಧಾನ ಸಿವಿಲ್ ನ್ಯಾಯಾಧೀಶ ಕೇಶವಮೂರ್ತಿ ಕರೆ ನೀಡಿದರು.ಜಿಲ್ಲೆಯ ಬಂಗಾರಪೇಟೆ ಕನ್ನಡ ಸಂಘದಿಂದ ಪಟ್ಟಣದ ಕುವೆಂಪು ವೃತ್ತದಲ್ಲಿ ನಡೆದ ೧೨೨ನೇ ಕನ್ನಡ ಸಾಂಸ್ಕೃತಿಕ ಸಮಾರಂಭವನ್ನು ಉದ್ಘಾಟಿಸಿ, ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡ ವಿಷಯದಲ್ಲಿ ಶೇ. ೧೦೦ರಷ್ಟು ಸಾಧನೆಗೈದ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಅವರು ಮಾತನಾಡಿದರು.
ಶಿಕ್ಷಣವೆಂದರೆ ಕೇವಲ ಓದಿಗೆ ಸೀಮಿತವಲ್ಲ. ಕ್ರೀಡೆ, ಸಾಂಸ್ಕೃತಿಕ ನೆಲಗಟ್ಟಿನ ಜತೆಗೆ ಇಂದು ಅಗತ್ಯವಾಗಿ ಸಂಸ್ಕಾರ, ನೈತಿಕ ಮೌಲ್ಯ, ಬದುಕಿಗೆ ಅಗತ್ಯ ಕಾನೂನುಗಳ ಕಲಿಸುವ ಅಗತ್ಯವಿದೆ ಎಂದು ತಿಳಿಸಿದರು.ಶಿಕ್ಷಣವನ್ನು ಮಾತೃಭಾಷೆಯಲ್ಲೇ ಕಲಿತರೆ ಅತೀ ಬೇಗ ಮನನವಾಗುತ್ತದೆ, ಬದುಕಿಗೆ ಹತ್ತಿರವಾಗಿರುತ್ತದೆ ಎಂದ ಅವರು, ಕನ್ನಡ ನಾಡು, ನುಡಿಯ ಕುರಿತು ಆಚರಿಸುವ ಸಂಭ್ರಮವು ಕೇವಲ ರಾಜ್ಯೋತ್ಸವಕ್ಕೆ ಸೀಮಿತವಾಗಬಾರದು, ಬಂಗಾರಪೇಟೆ ಕನ್ನಡ ಸಂಘವು ಕನ್ನಡತನವನ್ನು ನಿರಂತರವಾಗಿ ಉಳಿಸಿಕೊಂಡು ಪ್ರತಿ ತಿಂಗಳೂ ಸಾಧಕರನ್ನು ಗೌರವಿಸುತ್ತಿರುವುದು ಶ್ಲಾಘನೀಯ ಎಂದರು.
ನೆಮ್ಮದಿಯ ಜೀವನ:ಕಾನೂನು ಸೇವಾ ಪ್ರಾಧಿಕಾರದ ಆಶ್ರಯದಲ್ಲಿ ಕಾನೂನು ಸಾಕ್ಷರತಾ ಅರಿವು-ನೆರವು ಕಾರ್ಯಕ್ರಮಕ್ಕೂ ಚಾಲನೆ ನೀಡಿದ ನ್ಯಾಯಾಧೀಶರು, ಸಮಾಜದಲ್ಲಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಜೀವನ ನಡೆಸಬೇಕು, ಕಾನೂನನ್ನು ಮೀರಿ ನಡೆದರೆ ಶಿಕ್ಷೆ ಖಚಿತ ಎಂದು ಎಚ್ಚರಿಸಿ, ಭ್ರೂಣಾವಸ್ಥೆಯಿಂದ ಮರಣದ ನಂತರವೂ ಮರಣ ಪ್ರಮಾಣ ಪತ್ರ ಪಡೆಯಲು ಕಾನೂನು ಆವರಿಸಿಕೊಂಡಿದ್ದು, ಇದರ ಅರಿವು ಪ್ರತಿಯೊಬ್ಬರಿಗೂ ಅಗತ್ಯವಿದ್ದು, ಕಾನೂನು ಅರಿತಾಗ ನೆಮ್ಮದಿಯ ಜೀವನ ಸಾಧ್ಯ ಎಂದರು.
ಬಂಗಾರಪೇಟೆ ವಕೀಲರ ಸಂಘದ ಅಧ್ಯಕ್ಷ ನಾರಾಯಣಪ್ಪ ಮಾತನಾಡಿ, ಇಂದು ಹಿರಿಯರ ಕುರಿತ ಗೌರವ ಮಾಯವಾಗುತ್ತಿದೆ, ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿದೆ, ನಮ್ಮ ಮಕ್ಕಳಿಗೆ ನಾವು ಜೀವನವಿಡೀ ಕಷ್ಟಪಟ್ಟು ದುಡಿದು ಆಸ್ತಿ, ಶಿಕ್ಷಣ ಕೊಡುವುದು ಈ ಪುರುಷಾರ್ಥಕ್ಕಾಗಿಯೇ ಎಂದು ಪ್ರಶ್ನಿಸಿದರು.ಓದಿನಲ್ಲಿ ಎಷ್ಟೇ ಸಾಧಿಸಿದ್ದರೂ ಮಕ್ಕಳು ಹೆತ್ತವರೊಂದಿಗೆ ಬದುಕು ಸಾಗಿಸಬೇಕು, ಅವರಿಗೆ ನೆರಳಾಗಬೇಕು ಎಂಬ ಮೌಲ್ಯಗಳ ಅರಿವು ಬಾರದಿದ್ದರೆ ಶಿಕ್ಷಣಕ್ಕೇನು ಅರ್ಥ? ವಿದ್ಯಾರ್ಥಿಗಳು ನಿಮ್ಮ ಕಲಿಕಾ ಸಾಧನೆ ಜತೆಗೆ ಸಂಸ್ಕಾರ ರೂಢಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಗಾರಪೇಟೆ ಕನ್ನಡ ಸಂಘದ ಅಧ್ಯಕ್ಷ ಪಲ್ಲವಿ ಮಣಿ ಮಾತನಾಡಿ, ಕನ್ನಡ ಸಂಘದಿಂದ ೧೨೨ನೇ ತಿಂಗಳ ಕಾರ್ಯಕ್ರಮ ಇದಾಗಿದ್ದು, ಪ್ರತಿ ತಿಂಗಳೂ ಯಾರಿಗೂ ಕಾಯದೇ ಕನ್ನಡ ಕಾರ್ಯಕ್ರಮ ನಡೆಯುತ್ತದೆ ಎಂದು ತಿಳಿಸಿದರು.ಎಸ್ಸೆಸ್ಸೆಲ್ಸಿ ಕನ್ನಡದಲ್ಲಿ ೧೨೫ಕ್ಕೆ ೧೨೫ ಅಂಕಗಳ ಸಾಧನೆ ಮಾಡಿರುವ ಆದರ್ಶ ವಿದ್ಯಾಲಯದ ಸಾಧಕ ವಿದ್ಯಾರ್ಥಿನಿಯರಾದ ಗಂಗೋತ್ರಿ, ಗಾಯತ್ರಿ, ದೀಕ್ಷಿತಾ, ಚೈತನ್ಯ, ಎಚ್.ಕೆ.ರಷ್ಮಿತಾ, ಎನ್.ಗೀತಾರನ್ನು ಸನ್ಮಾನಿಸಲಾಯಿತು.
ರಾಜ್ಯದ ಹೆಸರಾಂತ ಹಾಸ್ಯ ಕಲಾವಿದ ಹಾಗೂ ಮಿಮಿಕ್ರಿ ಮಾಂತ್ರಿಕ ಪಟ್ಟಾಭಿರಾಮ ಸುಳ್ಯ ರಿಂದ ಹಾಸ್ಯ ಕಾರ್ಯಕ್ರಮ, ನಾಗ ಶೈನಿಂಗ್ ಸ್ಟಾರ್ ಅಕಾಡೆಮಿ, ಡ್ಯಾನ್ಸ್ ಪ್ರಿಕ್ ತಂಡ ಬೆಮೆಲ್ ನಗರ ಹಾಗೂ ನಾಟ್ಯಾಂಜಲಿ ಕಲಾ ತಂಡದವರಿಂದ ಅಮೋಘ ನೃತ್ಯ ಪ್ರದರ್ಶನ ಜನಮನಸೂರೆಗೊಂಡಿತು.ಮುಖಂಡರಾದ ಅಪ್ಸರ್ ಪಾಷಾ, ಆದರ್ಶ ವಿದ್ಯಾಲಯದ ಶ್ಯಾಮಲ, ಕನ್ನಡ ಸಂಘದ ಪದಾಧಿಕಾರಿಗಳಾದ ಹೇಮಂತ್‌ಕುಮಾರ್,ಬಿ.ಜಿ.ನಂಜಪ್ಪ, ಮುರಳಿ ಪ್ರಸಾದ್, ವೈ.ವಿ. ರಮೇಶ್, ಪರ್ವತ್ ಸ್ಪೋರ್ಟ್ಸ್‌ನ ಆನಂದರೆಡ್ಡಿ, ಶಿವಮಹೇಶ್, ದೇವೇಂದ್ರಕುಮಾರ್, ರಾಮಚಂದ್ರ, ಜಯಕುಮಾರ್, ನಂಜುಂಡಪ್ಪ, ಮಂಜುನಾಥ್, ವಕೀಲರಾದ ಜಯಪ್ರಕಾಶ್, ವೇಣುಗೋಪಾಲ್, ಮುಖಂಡ ಬಾ.ಶೇಖರಪ್ಪ,ಕುಮುದಿನಿ, ಸೂರ್ಯನಾರಾಯಣರಾವ್, ವೆಂಕಟೇಶ್ವರಚಾರಿ, ಗಂಗಾಧರ್ ಮತ್ತಿತರರಿದ್ದರು.