ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಪರಿಸರದೊಂದಿಗೆ ನಾವು-ನೀವು ಮನುಷ್ಯರ ಬದುಕಿಗೆ ಉಸಿರಾಗಿರುವ ಹಸಿರು ಗಿಡ ಬೆಳೆಸಬೇಕು ಎಂದು ಪರಿಸರ ಪ್ರೇಮಿ ಸುಗಮ ಸಂಗೀತ ಗಾಯಕ ಡಾ.ಕಿಕ್ಕೇರಿಕೃಷ್ಣಮೂರ್ತಿ ಹೇಳಿದರು.ಪಟ್ಟಣದ ಕೇಂಬ್ರಿಡ್ಜ್ ಶಾಲೆ ಹಮ್ಮಿಕೊಂಡಿದ್ದ ಪರಿಸರದೊಂದಿಗೆ ನಾವು-ನೀವು ಕಾರ್ಯಕ್ರಮದಲ್ಲಿ ಗಿಡ ನೆಟ್ಟು ನೀರು ಎರೆದು ಮಾತನಾಡಿ, ಹುಟ್ಟೂರಿನ ಋಣ ನನ್ನ ಮೇಲಿದೆ. ನಮ್ಮೂರಿನ ಪ್ರೇಮಕವಿ ಕಿಕ್ಕೇರಿ ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷನಾಗಿ ಕವಿ ನೆನಪಿನಲ್ಲಿ ಸಾಕಷ್ಟು ಕೆಲಸವನ್ನು ಕಿಕ್ಕೇರಿಯಲ್ಲಿ ಮಾಡಬೇಕಿದೆ ಎಂದರು.
ಕೆಎಸ್‌ನ ಪರಿಚಯ ಮಕ್ಕಳಿಗೆ ಆದರೆ ಮಾತ್ರ ಸಾಹಿತ್ಯ, ಕಾವ್ಯ, ಕವಿ, ಕನ್ನಡ ಭಾಷೆ ಸಮೃದ್ಧತೆ ತಿಳಿಯಲಿದೆ. ಮಕ್ಕಳಿಗೆ ಪರಿಸರ ಶಿಕ್ಷಣ ಬಲು ಮುಖ್ಯ. ಶಾಲಾ ಕಾಲೇಜು ಮಕ್ಕಳು ಸಮಾಜದ ಪರಿವರ್ತಕ ಕೇಂದ್ರ ಬಿಂದುಗಳು. ಮಕ್ಕಳ ಮನಸ್ಸು ಪರಿಸರ, ಪ್ರಕೃತಿ, ಸಂಗೀತದ ಕಡೆಗೆ ಆಸಕ್ತಿ ಮೂಡಿದರೆ ಸಾಕು ಎಲ್ಲವೂ ಸರಾಗವಾಗಿ ಆಗಲಿದೆ ಎಂದರು.ಸಂಸ್ಕಾರ, ಪರಿಸರ ಶಿಕ್ಷಣದ ಬೀಜ ಬಿತ್ತುವ ಕೆಲಸ ಸಮರ್ಪಕವಾಗಿ ಆಗಬೇಕಿದೆ. ಗಿಡಮರಗಳನ್ನು ಸಮೃದ್ಧಿಯಾಗಿ ಬೆಳೆಸಿದರೆ ನಮ್ಮೊಂದಿಗೆ ಮಾತನಾಡಲಿವೆ. ಅವುಗಳನ್ನು ಪ್ರೀತಿಯಿಂದ ಪೋಷಿಸಿದರೆ ಶುದ್ಧ ಗಾಳಿ, ಆರೋಗ್ಯ ಎಲ್ಲವನ್ನು ನೀಡಲಿದೆ ಎಂದರು.
ಹಲಸು, ಮಾವು, ನೇರಳೆ, ಬೆಟ್ಟದ ನಲ್ಲಿಯಂತಹ ವಿವಿಧ ಬಗೆಯ ಗಿಡಗಳನ್ನು ನೆಡಲುಎಲ್ಲರೂ ಮುಂದಾಗೋಣ. ಪ್ರಕೃತಿ ಪರಿಸರ ಸಮತೋಲನದ ಜೊತೆ ಪ್ರಾಣಿ ಪಕ್ಷಿಗಳಿಗೆ ಆಹಾರ ಸಿಗಲಿದೆ. ಬೇಸಿಗೆಯಲ್ಲಿ ಮೂಕ ಪ್ರಾಣಿ ಪಕ್ಷಿಗಳಿಗೆ ನೀರಿನ ದಾಹ, ಸಮಸ್ಯೆಇದೆ. ಇವುಗಳಿಗಾಗಿಯೇ ಒಂದು ಪಾತ್ರೆ, ಕಾಳು ಇಡಲು ಮುಂದಾಗಿ ಎಂದು ವಿನಂತಿಸಿದರು.
ಮಕ್ಕಳಿಗೆ ಪರಿಸರಗೀತೆ ಹೇಳಿಕೊಟ್ಟು ಪರಿಸರ ಸಂರಕ್ಷಣೆಯ ಪ್ರತಿಜ್ಞೆ ಮಾಡಿದರು. ಮುಖ್ಯಶಿಕ್ಷಕಿ ಎಚ್.ಎಂ.ದೀಪಾ, ಮೇಲ್ವಿಚಾರಕಿ ಅನುಪಮಾ, ಶೇಕ್ಷವಲ್ಲಿ, ಕೋಮಲಾ, ಶುಭಾ, ರಕ್ಷಿತಾ ಮತ್ತಿತರರಿದ್ದರು.