ಸಾರಾಂಶ
ಅಸುರೀ ಶಕ್ತಿಯನ್ನು ನಾಶಪಡಿಸಲು ದೈವೀ ಶಕ್ತಿಯನ್ನು ಬಳಸಿಕೊಳ್ಳಬೇಕು. ಮನಸ್ಸನ್ನು ಶಾಂತಗೊಳಿಸಿಕೊಂಡರೆ ಸಾಧನೆ ಸಾಧ್ಯ ಎಂದು ಸ್ವರ್ಣವಲ್ಲಿ ಸ್ವಾಮೀಜಿ ತಿಳಿಸಿದರು.
ಸಿದ್ದಾಪುರ: ಜೀವನ್ಮುಕ್ತಿ ಮತ್ತು ಜ್ಞಾನಯೋಗ ಇವೆರಡೂ ಬೇರೆ ಬೇರೆ. ಜ್ಞಾನಯೋಗದಿಂದ ಮುಂದೆ ಜೀವನ್ಮುಕ್ತಿ ಸಾಧ್ಯ. ತತ್ವಜ್ಞಾನ ಜೀವನ್ಮುಕ್ತಿಗೆ ನೇರ ಸಾಧನ ಎಂದು ಸ್ವರ್ಣವಲ್ಲಿ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ತಿಳಿಸಿದರು.ತಾಲೂಕಿನ ಶಿರಳಗಿಯ ಚೈತನ್ಯ ರಾಜಾರಾಮ ಕ್ಷೇತ್ರದಲ್ಲಿ ಸಂಘಟಿಸಿದ್ದ ಅಧ್ಯಾತ್ಮ ಚಿಂತನಾಮೃತ ಕಾರ್ಯಕ್ರಮದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಉಪನ್ಯಾಸ ಮತ್ತು ಆಶೀರ್ವಚನ ನೀಡಿದರು.
ಅಸುರೀ ಶಕ್ತಿಯನ್ನು ನಾಶಪಡಿಸಲು ದೈವೀ ಶಕ್ತಿಯನ್ನು ಬಳಸಿಕೊಳ್ಳಬೇಕು. ಮನಸ್ಸನ್ನು ಶಾಂತಗೊಳಿಸಿಕೊಂಡರೆ ಸಾಧನೆ ಸಾಧ್ಯ. ಮನುಷ್ಯ ಜನ್ಮಕ್ಕೆ ಭಗವಂತನನ್ನು ಕಾಣುವ ಶಕ್ತಿ ಇದೆ. ನನ್ನದೇನಿಲ್ಲ ಎಲ್ಲವೂ ಅಲ್ಲಿಂದ ಬರುತ್ತಿದೆ ಎನ್ನುವುದೇ ನಿಜವಾದ ಅನುಭಾವ. ನಿಜವಾದ ಸಾಧಕ ಎಲ್ಲ ದೇವರನ್ನೂ ಒಂದೇ ಎಂದು ಪರಿಗಣಿಸುತ್ತಾನೆ. ಸಾಧಕ ನಮ್ಮನ್ನು ನೋಡಿದರೆ ನಮ್ಮಲ್ಲಿ ಆನಂದದ ಅನುಭವವಾಗುತ್ತದೆ. ಸಾಧಕನಾದವನಿಗೆ ಬಟ್ಟೆ ತೊಟ್ಟರೂ ಒಂದೇ, ತೊಡದಿದ್ದರೂ ಒಂದೇ. ತನ್ನವರು, ಬೇರೆಯವರು ಎಂಬ ಭೇದಭಾವ, ಸ್ತ್ರೀ- ಪುರುಷರೆಂಬ ಭೇದಭಾವ ಆತನಿಗಿಲ್ಲ. ನಾವು ಕಾಣುವುದೆಲ್ಲ ಸತ್ಯವಲ್ಲ, ಸಂತೋಷ, ಸಂತೃಪ್ತಿ, ಸತ್ಸಂಗ ರೂಢಿಸಿಕೊಳ್ಳಬೇಕು. ಇವುಗಳನ್ನೆಲ್ಲಾ ಪಡೆಯಲು ಭಗವದ್ಭಕ್ತಿ ಏಕೈಕ ಸಾಧನ. ಸತ್ಸಂಗದ ಕೊನೆಯ ಗುರಿಯೇ ಜೀವನ್ಮುಕ್ತಿ ಎಂದ ಅವರು ಸಕಲರಿಗೂ ಒಳಿತಾಗಲೆಂದು ಹರಸಿದರು.ಸಾನ್ನಿಧ್ಯ ವಹಿಸಿದ್ದ ಶಿರಳಗಿಯ ಚೈತನ್ಯ ರಾಜಾರಾಮ ಕ್ಷೇತ್ರದ ಬ್ರಹ್ಮಾನಂದಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು.
ಸ್ವರ್ಣವಲ್ಲಿ ಮಹಾಸಂಸ್ಥಾನದ ಕಿರಿಯ ಯತಿ ಆನಂದಭೋದೇಂದ್ರ ಸರಸ್ವತೀ ಸ್ವಾಮಿಗಳು ದಿವ್ಯ ಉಪಸ್ಥಿತಿ ನೀಡಿದ್ದರು. ಅಧ್ಯಾತ್ಮ ಚಿಂತನಾಮೃತದಲ್ಲಿ ಜೀವನೋಪಾಯ ಮತ್ತು ಜೀವನದ ಗುರಿ ಕುರಿತು ನರಹರಿ ಹೆಗಡೆ ಶಿರಳಗಿ, ಕೇನೋಪನಿಷತ್ತಿನ ಒಳನೋಟ ಕುರಿತು ಬ್ರಹ್ಮಾನಂದಭಾರತೀ ಸ್ವಾಮೀಜಿ, ಮೈತ್ರೇಯಿ-ಯಾಜ್ಞವಲ್ಕ್ಯರ ಸಂವಾದ ಕುರಿತು ವಿ. ಮಹಾಬಲೇಶ್ವರ ಭಟ್ಟ ಹಿರೇಕೈ,ಅದ್ವೈತ, ವಿಶಿಷ್ಟಾದ್ವೈತ, ದ್ವೈತ ಸಿದ್ಧಾಂತಗಳಲ್ಲಿ ಸಾಮ್ಯ ಮತ್ತು ವೈರುಧ್ಯ ಕುರಿತು ವಿ. ಉಮಾಕಾಂತ ಭಟ್ಟ ಕೆರೇಕೈ, ಆನಂದ ಮೀಮಾಂಸೆ ಕುರಿತು ವಿ. ಶಂಕರ ಭಟ್ಟರು ಬಾಲಿಗದ್ದೆ ಉಪನ್ಯಾಸ ನೀಡಿದರು.ಕಠೋಪನಿಷತ್ತಿನ ಹರಿಕಥಾ ರೂಪವನ್ನು ವಿ. ಶಂಕರ ಭಟ್ಟರು ಉಂಚಳ್ಳಿ ನಡೆಸಿಕೊಟ್ಟರು. ಬೆಂಗಳೂರಿನ ಶ್ರೀ ರಾಮನಾರಾಯಣ ಗುರುಕುಲದವರಿಂದ ಶಾಸ್ತ್ರೀಯ ಸಂಗೀತ ಸೇವೆ ನಡೆಯಿತು. ಕು. ಸಂಹಿತಾ ವಿ. ಅವಧಾನಿ ಗಾಯನ, ಅಭಿರಾಮ ಪಿಟೀಲು, ಬಿ.ಜೆ. ಶ್ರೀನಿವಾಸ ಮೃದಂಗವಾದನ ನಡೆಸಿಕೊಟ್ಟರು. ಅನಂತಪದ್ಮನಾಭ ಶಿರಸಿ ನಿರ್ವಹಿಸಿದರು. ಕೇಶವ ಕೂರ್ಸೆ ವಂದಿಸಿದರು.