ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪ್ರತಿಯೊಬ್ಬರೂ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಬೇಕು. ಬಡ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರೆ ಅವರು ಸಾಧಕರಾಗಿ ಹೊರಹೊಮ್ಮುತ್ತಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಅಶೋಕ ಹಾರಿವಾಳ ಹೇಳಿದರು.ಪಟ್ಟಣದ ವಿರಕ್ತಮಠದಲ್ಲಿ ಹಂಗರಗಿಯ ಚನ್ನಬಸವೇಶ್ವರ ಪ್ರತಿಷ್ಠಾನ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳು ಗುರು, ಹಿರಿಯರನ್ನು ಗೌರವಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂದರು.
ಉಪನ್ಯಾಸ ನೀಡಿದ ಶಿಕ್ಷಕ ಅಶೋಕ ಹಂಚಲಿ ಮಾತನಾಡಿ, ಬಸವಾದಿ ಶರಣರ ಕಾಯಕ, ದಾಸೋಹ ಚಿಂತನೆಗಳನ್ನು ಅಳವಡಿಸಿಕೊಂಡಿದ್ದ ಹೆಮರಡ್ಡಿ ಮಲ್ಲಮ್ಮ ಕಷ್ಟದ ಬದುಕು ಸಾಗಿಸಿದರು. ಪತಿ ಭಕ್ತಿ, ಶಿವ ಭಕ್ತಿಯೊಂದಿಗೆ ಸ್ತ್ರೀ ಕುಲಕ್ಕೆ ಆದರ್ಶಪ್ರಾಯರಾಗಿದ್ದಾರೆ. ನಂಬಿಕೆ ಇದ್ದರೆ ದೇವರ ದರ್ಶನವಾಗುತ್ತದೆ ಎಂಬುವುದನ್ನು ತೋರಿಸಿಕೊಟ್ಟ ಮಲ್ಲಮ್ಮರ ಜೀವನ ಆದರ್ಶಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ಹೇಳಿದರು.ನೇತಾಜಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ರಾಜಶೇಖರ ಪಾಟೀಲ ಮಾತನಾಡಿ, ಬಸವಣ್ಣನವರು ಜಾತಿರಹಿತ ಸಮಾಜ ನಿರ್ಮಿಸಲು ಶ್ರಮಿಸಿದರು. ಮಹಾತ್ಮರ ಜಯಂತಿಗಳು ಒಂದೇ ವರ್ಗಕ್ಕೆ ಸಿಮೀತವಾಗಬಾರದು. ಎಲ್ಲರೂ ಒಗ್ಗಟ್ಟಿನಿಂದ ಕಾರ್ಯಕ್ರಮ ಆಯೋಜಿಸಿದಾಗ ಮಹಾತ್ಮರ ವಿಚಾರಗಳು ಎಲ್ಲರಿಗೂ ತಲುಪಿಸಿದಂತಾಗುತ್ತದೆ. ಚನ್ನಬಸವೇಶ್ವರ ಪ್ರತಿಷ್ಠಾನ ಸಮಾಜಮುಖಿಯಾಗಿ ಇಂತಹ ಕಾರ್ಯಕ್ರಮಗಳ ಮೂಲಕ ಮಹಾತ್ಮರ ಆದರ್ಶಗಳನ್ನು ತಿಳಿಸುವುದರೊಂದಿಗೆ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಚನ್ನಬಸವೇಶ್ವರ ಪ್ರತಿಷ್ಠಾನದ ಅಧ್ಯಕ್ಷ ವಿವೇಕಾನಂದ ಕಲ್ಯಾಣಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯತ್ತಿನ ಆಸ್ತಿ, ಅವರು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಬೆಳೆಯಬೇಕು. ಸಾಧಕ ಮಕ್ಕಳನ್ನು ಪ್ರೋತ್ಸಾಹಿಸಿದರೆ ಅದು ಇತರರ ಸಾಧನೆಗೆ ಪ್ರೇರಣೆಯಾಗುತ್ತದೆ. ಎಲ್ಲರೂ ಸೇರಿ ಸುಂದರ ಸಮಾಜ ನಿರ್ಮಾಣಮಾಡಬೇಕಿದೆ ಎಂದು ಹೇಳಿದರು.ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ವೀರಣ್ಣ ಮರ್ತೂರ, ಸಾನ್ನಿಧ್ಯ ವಹಿಸಿದ್ದ ಸಿದ್ಧಲಿಂಗ ಸ್ವಾಮೀಜಿ, ಪ್ರತಿಷ್ಠಾನದ ಕಾರ್ಯದರ್ಶಿ ಮುತ್ತು ಪತ್ತಾರ ಮಾತನಾಡಿದರು. ತಾ.ಪಂ ಮಾಜಿ ಅಧ್ಯಕ್ಷ ಶ್ರೀಶೈಲಗೌಡ ಹೊಸಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು, ಪ್ರತಿಷ್ಠಾನದ ಸಂಚಾಲಕಿ ಸಾವಿತ್ರಿ ಕಲ್ಯಾಣಶೆಟ್ಟಿ ಇದ್ದರು. ಶಿಕ್ಷಕ ಎಚ್.ಬಿ.ಬಾರಿಕಾಯಿ ಸ್ವಾಗತಿಸಿದರು, ದೇವೇಂದ್ರ ಗೋನಾಳ ನಿರೂಪಿಸಿದರು, ಯುವರಾಜ ಮಾದನಶೆಟ್ಟಿ ವಂದಿಸಿದರು. ಕಾರ್ಯಕ್ರಮದಲ್ಲಿ ಹೂವಿನಹಿಪ್ಪರಗಿಯ ಗ್ರಾಮೀಣ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಶೋಕ ಬ್ಯಾಕೋಡ, ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಚಾರ್ಯ ಎಸ್.ಡಿ.ಪಾಟೀಲ, ಬಿ.ಎಲ್.ಡಿ.ಇ ಸಂಸ್ಥೆಯ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ರಾಮಚಂದ್ರ ಪವಾರ ಸೇರಿದಂತೆ ಎಸ್.ಎಸ್.ಎಲ್.ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ತಾಲೂಕಿನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.