ಮೇರು ವ್ಯಕ್ತಿಗಳಾಗಲು ಸಾಹಿತ್ಯ ಅಭಿರುಚಿ ಬೆಳೆಸಿಕೊಳ್ಳಿ

| Published : Sep 01 2024, 01:56 AM IST

ಸಾರಾಂಶ

ಪೋಷಕರು ಮತ್ತು ಶಿಕ್ಷಕರು ಮಕ್ಕಳಲ್ಲಿ ಪಠ್ಯದ ಜೊತೆಗೆ ಸಾಹಿತ್ಯದ ಅಭಿರುಚಿ ಬೆಳೆಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರವೀಶ್ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕ, ಕಸಬಾ ಹೋಬಳಿ, ನಗರ ಮತ್ತು ತಾಲೂಕು ಮಹಿಳಾ ಘಟಕ, ಹಿರೇಮಗಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಶ್ರಾವಣ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಸಾಹಿತ್ಯ ನಮ್ಮ ಬದುಕನ್ನು ಶ್ರೀಮಂತ ಗೊಳಿಸುತ್ತದೆ, ನಮ್ಮನ್ನು ಸುಸಂಸ್ಕೃತರನ್ನಾಗಿ ಮಾಡುತ್ತದೆ, ಸಾಹಿತ್ಯದ ಅಭಿರುಚಿ ಬೆಳೆಸಿಕೊಂಡರೆ ಮೇರು ವ್ಯಕ್ತಿತ್ವ ನಮ್ಮದಾಗುತ್ತದೆ ಎಂದು ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಪೋಷಕರು ಮತ್ತು ಶಿಕ್ಷಕರು ಮಕ್ಕಳಲ್ಲಿ ಪಠ್ಯದ ಜೊತೆಗೆ ಸಾಹಿತ್ಯದ ಅಭಿರುಚಿ ಬೆಳೆಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರವೀಶ್ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕ, ಕಸಬಾ ಹೋಬಳಿ, ನಗರ ಮತ್ತು ತಾಲೂಕು ಮಹಿಳಾ ಘಟಕ, ಹಿರೇಮಗಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಶ್ರಾವಣ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಸಾಹಿತ್ಯ ನಮ್ಮ ಬದುಕನ್ನು ಶ್ರೀಮಂತ ಗೊಳಿಸುತ್ತದೆ, ನಮ್ಮನ್ನು ಸುಸಂಸ್ಕೃತರನ್ನಾಗಿ ಮಾಡುತ್ತದೆ, ಸಾಹಿತ್ಯದ ಅಭಿರುಚಿ ಬೆಳೆಸಿಕೊಂಡರೆ ಮೇರು ವ್ಯಕ್ತಿತ್ವ ನಮ್ಮದಾಗುತ್ತದೆ ಎಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಜೊತೆಗೆ ಸಾಹಿತ್ಯವನ್ನೂ ರೂಢಿಸಿಕೊಳ್ಳಬೇಕು, ಕವಿ, ಸಾಹಿತಿಗಳಾಗಿ ಹೊರಹೊಮ್ಮಬೇಕು ಎಂದು ಸಲಹೆ ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಐಡಿಎಸ್‌ಜಿ ಕಾಲೇಜಿನ ಉಪನ್ಯಾಸಕಿ ಡಾ.ಶಿಲಾಲಿ, ಯಾವುದೇ ಭಾಷೆ ಬೆಳೆಯಬೇಕಾದರೆ ಜನ ಅದನ್ನು ದಿನನಿತ್ಯದ ಜೀವನದಲ್ಲಿ ಬಳಸಬೇಕು. ಅಂದಾಗ ಮಾತ್ರ ಭಾಷೆ ಬೆಳೆಯುತ್ತದೆ, ಮುಂದಿನ ಪೀಳಿಗೆಗೆ ಉಳಿಯುತ್ತದೆ ಎಂದರು. ರಾಜ್ಯದಲ್ಲಿ ಕನ್ನಡ ಉಳಿದು ಬೆಳೆಯಬೇಕಾದರೆ ನಾವು ಅದನ್ನು ನಮ್ಮ ಬದುಕಿನ ಎಲ್ಲಾ ಹಂತಗಳಲ್ಲೂ, ಎಲ್ಲಾ ವ್ಯವಹಾರಗಳಲ್ಲೂ ಬಳಸಬೇಕು, ಮಾತೃ ಭಾಷೆ ನಮ್ಮ ಉಸಿರಾಗಬೇಕು ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ವಿಜಯಲಕ್ಷ್ಮಿ ವಿಶ್ವನಾಥ್, ಶ್ರಾವಣ ಮಾಸದ ಮಹತ್ವ ತಿಳಿಸುವುದರ ಜೊತೆಗೆ ಸಾಹಿತ್ಯದ ಅಭಿರುಚಿಯನ್ನು ಎಲ್ಲರಲ್ಲೂ ಬೆಳೆಸುವ ನಿಟ್ಟಿನಲ್ಲಿ ಶ್ರಾವಣ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಇದೆ ವೇಳೆ ಮಕ್ಕಳು ಮತ್ತು ಕಥೆಗಳು ವಿಷಯದ ಕುರಿತು ಐಡಿಎಸ್‌ಜಿ ಕಾಲೇಜಿನ ಸಹ ಪ್ರಾಧ್ಯಾಪಕಿ ಎ.ಆರ್‌. ಸುಧಾ ಪ್ರಶಾಂತ್‌ ಉಪನ್ಯಾಸ ನೀಡಿದರು, ಸಮಾರಂಭದ ನಡುವೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಸಾಪ ತಾಲೂಕು ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್, ಜಿಲ್ಲಾ ಕಾರ್ಯದರ್ಶಿ ರೂಪಾ ನಾಯಕ್, ಕಸಬಾ ಹೋಬಳಿ ಅಧ್ಯಕ್ಷೆ ವೀಣಾ ಮಲ್ಲಿಕಾರ್ಜುನ, ಶೈಲಾ ಬಸವರಾಜ್, ಮಹಾಲಕ್ಷ್ಮಿ, ಸಾವಿತ್ರಿ, ಎಚ್.ಆರ್. ಕಾಂತರಾಜ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಕಿರಣ್, ಸಿಆರ್‌ಪಿ ಪೂರ್ಣೇಶ್, ಮುಖ್ಯ ಶಿಕ್ಷಕಿ ಶಿವಮ್ಮ ಉಪಸ್ಥಿತರಿದ್ದರು.