ವಿದ್ಯಾರ್ಥಿಗಳು ಸಾಧನೆಯ ಶಿಖರವನ್ನೇರಬೇಕಾದರೆ ಇಂದಿನಿಂದಲೇ ಪುಸ್ತಕ ಹಾಗೂ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಆದಿತ್ಯ ಕನ್‌ಸ್ಟ್ರಕ್ಷನ್‌ ಕಂಪನಿಯ ಮಾಲೀಕ ಎಚ್‌.ಎಸ್‌.ಶಿವಶಂಕರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ವಿದ್ಯಾರ್ಥಿಗಳು ಸಾಧನೆಯ ಶಿಖರವನ್ನೇರಬೇಕಾದರೆ ಇಂದಿನಿಂದಲೇ ಪುಸ್ತಕ ಹಾಗೂ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಆದಿತ್ಯ ಕನ್‌ಸ್ಟ್ರಕ್ಷನ್‌ ಕಂಪನಿಯ ಮಾಲೀಕ ಎಚ್‌.ಎಸ್‌.ಶಿವಶಂಕರ್‌ ಹೇಳಿದರು.

ನಗರದ ದುರ್ಗಿಗುಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಕನ್ನಡಪ್ರಭ ಪತ್ರಿಕೆ ವತಿಯಿಂದ ಆಯೋಜಿಸಿದ್ದ ವಿದ್ಯಾರ್ಥಿ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತಗೊಳ್ಳದೆ ಪತ್ರಿಕೆಗಳನ್ನು ಓದುವ ಮನೋಭಾವ ಬೆಳೆಸಿಕೊಳ್ಳಬೇಕು. ಪತ್ರಿಕೆ ಓದಿನಿಂದ ಸಮಾಜದಲ್ಲಿ ನಿತ್ಯ ಏನು ನಡೆಯುತ್ತಿದೆ ಎಂಬುದು ತಿಳಿಯುತ್ತಿದೆ ಎಂದರು.

ಕನ್ನಡಪ್ರಭ ಹೊರ ತರುತ್ತಿರುವ ವಿದ್ಯಾರ್ಥಿ ಸಂಚಿಕೆ ಅಮೂಲ್ಯವಾದುದು. ಇದು ವಿದ್ಯಾರ್ಥಿಗಳ ವಿದ್ಯಾಭ್ಯಾಸದ ದೃಷ್ಟಿಯಿಂದ ಮಹತ್ತರವಾದುದು. ಇದನ್ನು ನಿತ್ಯ ಓದಿದರೆ ಮತ್ತು ಇದನ್ನು ಸಂಗ್ರಹ ರೂಪದಲ್ಲಿ ಇರಿಸಿಕೊಂಡರೆ ಅದು ದೊಡ್ಡ ಲಾಭವನ್ನು ತಂದುಕೊಡುತ್ತದೆ ಎಂದು ಹೇಳಿದರು.

ನಮ್ಮಂತಹ ಅನೇಕ ಸಾಧಕರನ್ನು ಗುರುತಿಸಿ, ಸಾಧಕರ ಕುರಿತು ಕಿರುಪರಿಚಯವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕನ್ನಡಪ್ರಭ ಪತ್ರಿಕೆಯು ಗೆದ್ದವರ ಸಿದ್ದಸೂತ್ರ ಎಂಬ ಶೀರ್ಷಿಕೆಯ ಪುಸ್ತಕವನ್ನು ಹೊರತಂದಿದೆ. ಇಂತಹ ಪುಸ್ತಕಗಳನ್ನು ವಿದ್ಯಾರ್ಥಿಗಳು ಓದಬೇಕು. ಯಾವುದೇ ಸಂದರ್ಭದಲ್ಲಿ ಋಣಾತ್ಮಕ ಚಿಂತನೆಗಳು ಮನಸ್ಸಿನಲ್ಲಿ ಮೂಡಿದಾಗ ಸಾಧಕರ ಕುರಿತ ಪುಸ್ತಕಗಳನ್ನು ಓದುವುದರಿಂದ ಸಾಧಕರ ಅನುಭವಗಳು, ಅವರು ಪಟ್ಟ ಕಷ್ಟಗಳು ಹಾಗೂ ಅವರು ಜೀವನದಲ್ಲಿ ಗೆದ್ದ ಬಗ್ಗೆ ತಿಳಿಯುತ್ತದೆ. ಆಗ ತಾವೂ ಏನಾದರೂ ಸಾಧಿಸಬೇಕು ಎಂಬ ಛಲ ಮೂಡುತ್ತದೆ ಎಂದು ತಿಳಿಸಿದರು.

ಕನ್ನಡಪ್ರಭ ಪತ್ರಿಕೆಯ ಶಿವಮೊಗ್ಗ ಬ್ಯೂರೋ ಮುಖ್ಯಸ್ಥ ಗೋಪಾಲ್‌ ಯಡಗೆರೆ ಮಾತನಾಡಿ, ಕನ್ನಡಪ್ರಭ ಪತ್ರಿಕೆ ಕನ್ನಡ ಪತ್ರಿಕೋದ್ಯಮದಲ್ಲಿ ಅತ್ಯಂತ ಪ್ರಭಾವಿ ಪತ್ರಿಕೆಯಾಗಿ ಮನೆ ಮನೆಗೆ ಮುಟ್ಟಿದೆ. ಮಕ್ಕಳ ಜ್ಞಾನ ವೃದ್ಧಿಗೆ ಪತ್ರಿಕೆಗಳು ಪೂರಕವಾಗಿವೆ. ಮಕ್ಕಳು ನಿತ್ಯ ಪತ್ರಿಕೆಗಳನ್ನು ಓದುವ ಗುಣವನ್ನು ಬೆಳೆಸಿಕೊಳ್ಳಬೇಕು. ಹಾಗೆಯೇ ಓದಿಗೆ ಒಂದು ಕ್ರಮ ಇದೆ. ಆ ಕ್ರಮವನ್ನು ಅನುಸರಿದರೆ ಸುಲಭವಾಗಿ ಹೆಚ್ಚಿನ ಅಂಕ ಗಳಿಸಬಹುದು ಎಂದು ಸಲಹೆ ನೀಡಿದರು.

ಪತ್ರಿಕೆಯ ಪ್ರಸರಣ ವಿಭಾಗದ ಸಹಾಯಕ ವ್ಯವಸ್ಥಾಪಕ ಎಸ್‌.ಕೆ. ಸಂಚಿತ್‌ ಸಿಬ್ಬಂದಿ, ಶಾಲೆಯ ಶಿಕ್ಷಕ ವೃಂದವರು ಇದ್ದರು. ಶಿಕ್ಷಕ ಚಿಕ್ಯಾನಾಯ್ಕ್ ಸ್ವಾಗತಿಸಿದರು. ಶಿಕ್ಷಕಿ ಸರಸ್ವತಿ ನಿರೂಪಿಸಿದರು.

ಇಂದಿನ ಮಕ್ಕಳಲ್ಲಿ ಪತ್ರಿಕೆ ಓದು ಕಡಿಮೆ

ಇಂದಿನ ಮಕ್ಕಳಲ್ಲಿ ಸುದ್ದಿ ಪತ್ರಿಕೆಗಳನ್ನು ಓದುವ ಮನೋಭಾವ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳು ನಿತ್ಯ ಪತ್ರಿಕೆಗಳನ್ನು ಓದುವುದರಿಂದ ಎಲ್ಲ ಕ್ಷೇತ್ರದಲ್ಲಾಗುವ ವಿಷಯಗಳನ್ನು ತಿಳಿಯಬಹುದು. ಪತ್ರಿಕೆ ಓದಿನಿಂದ ಓದುವ ಹವ್ಯಾಸವೂ ಬೆಳೆಯುತ್ತದೆ ಎಂದು ಶಾಲೆಯ ಪ್ರಾಂಶುಪಾಲ ಕೆ.ಎಂ. ಮೋಹನ್ ತಿಳಿಸಿದರು.

ಕನ್ನಡ‌ಪ್ರಭ ಪತ್ರಿಕೆ ಕೇವಲ ಒಂದು ಪತ್ರಿಕೆಯಾಗಿ ಉಳಿಯದೇ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅವರಿಗಾಗಿಯೇ ಪ್ರತ್ಯೇಕ ಪತ್ರಿಕೆಯನ್ನು ಮುದ್ರಿಸಿ ಅದರಲ್ಲಿ ಪಠ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಮಾತ್ರ ನೀಡಿ ಮಕ್ಕಳನ್ನು ಪರೀಕ್ಷೆಗೆ ತಯಾರಿ ಮಾಡುವ ಕನ್ನಡಪ್ರಭ ಪತ್ರಿಕೆಯ ಪ್ರಯತ್ನ ಶ್ಲಾಘನೀಯ ಎಂದು ಬಣ್ಣಿಸಿದರು.