ಸಾರಾಂಶ
ಜಾನಪದ, ಮಕ್ಕಳ ಸಾಹಿತ್ಯ ಕುರಿತ ಉಪನ್ಯಾಸ, ವಿದ್ಯಾರ್ಥಿಗಳಿಗಾಗಿ ಕವಿಗೋಷ್ಠಿಕನ್ನಡಪ್ರಭ ವಾರ್ತೆ ಕೊಪ್ಪಳ
ಮಕ್ಕಳಿರುವಾಗಲೇ ಪಠ್ಯದ ಜೊತೆಗೆ ಸೃಜನಶೀಲ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಬೇಕು ಎಂದು ಎಂದು ಸಾಹಿತಿ ನಿಂಗು ಸೊಲಗಿ ತಿಳಿಸಿದರು.ತಾಲೂಕಿನ ಕವಲೂರು ಗ್ರಾಮದಲ್ಲಿ ಜಿಲ್ಲಾ ಹಾಗೂ ತಾಲೂಕಾ ಕಸಾಪ ಕೊಪ್ಪಳ, ಕನ್ನಡ ಸಾಹಿತ್ಯ ಪರಿಷತ್ ಅಳವಂಡಿ ಹೋಬಳಿ ಘಟಕ, ಸರ್ಕಾರಿ ಮಾದರಿಯ ಹಿರಿಯ ಹಾಗೂ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಡೆದ ಜಾನಪದ ಹಾಗೂ ಮಕ್ಕಳ ಸಾಹಿತ್ಯ ಕುರಿತ ಉಪನ್ಯಾಸ ಮತ್ತು ವಿದ್ಯಾರ್ಥಿಗಳಿಗಾಗಿ ನಡೆದ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಪ್ರತಿಯೊಬ್ಬರ ಮನಸ್ಸಿನಲ್ಲಿ ಹೆಮ್ಮರವಾಗಿ ಬೆಳೆಯಬೇಕು. ಮಕ್ಕಳು ಸಾಹಿತ್ಯ ರಚನೆಯತ್ತ ಒಲವು ತೋರಬೇಕು. ಮಕ್ಕಳು ಬಾಲ್ಯದಲ್ಲಿದ್ದಾಗ ತಂದೆ-ತಾಯಿ ಹಾಡುವ ಹಾಡಿನ ಸಾಹಿತ್ಯದಲ್ಲಿ ಎಲ್ಲರೂ ಕೂಡಿ ಬಾಳುವ ಹಾಗೂ ಸಂಸ್ಕಾರ ಕಲಿಸುವ ನೀತಿ ಪಾಠ ಇದೆ. ಜೀವನದಲ್ಲಿ ತಾಯಿ ಕಲಿಸುವ ಮೌಲ್ಯ ಅತ್ಯಂತ ದೊಡ್ಡದು ಎಂದರು.ಶಿಕ್ಷಕ ನೀಲಪ್ಪ ಹಕ್ಕಂಡಿ ಮಾತನಾಡಿ, ಜಾನಪದ ಕಲೆ ನಮ್ಮ ಜೀವನದ ಒಂದು ಅಂಗವಾಗಿದೆ. ಅಕ್ಷರಸ್ಥರ ಜೊತೆಗೆ ಹೆಚ್ಚಾಗಿ ಅನಕ್ಷರಸ್ಥರು ಸಹ ಇದರಲ್ಲಿ ಸಾಧನೆ ಮಾಡಿದ್ದಾರೆ. ಜನಪದ ಕಲೆಗಳು ನಮ್ಮ ಆಚಾರ, ವಿಚಾರ, ಸಂಸ್ಕೃತಿಗಳನ್ನು ಮುಂದಿನ ತಲೆಮಾರಿನವರೆಗೆ ಹೊತ್ತು ಸಾಗುತ್ತವೆ. ಜಾನಪದ ಜನನದಿಂದ ಮರಣದವೆರೆಗೂ, ದಿನನಿತ್ಯ ಪ್ರತಿಯೊಂದು ಚಟುವಟಿಕೆಯಲ್ಲಿ ಜಾನಪದ ಹಾಸು ಹೊಕ್ಕಾಗಿದೆ. ಧಾರ್ಮಿಕ ಕಾರ್ಯ, ಕೃಷಿ ಚಟುವಟಿಕೆ, ಒಗಟು ಮುಂತಾದವುಗಳಲ್ಲಿ ಜಾನಪದ ಇದೆ. ಮಕ್ಕಳು ಜಾನಪದ ಸಾಹಿತ್ಯದ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ನಂತರ ಪ್ರಬಂಧ ಸ್ಪರ್ದೆಯಲ್ಲಿ ವಿಜೇತರಾದ ಮಕ್ಕಳು, ಕವಿಗೋಷ್ಠಿಯಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು. ನಂತರ ಉಪನ್ಯಾಸಕರನ್ನು ಸನ್ಮಾನಿಸಲಾಯಿತು.ಭೂದಾನಿ ಪ್ರದೀಪಗೌಡ ಮಾಲಿಪಾಟೀಲ, ಕಸಾಪ ಅಳವಂಡಿ ಹೋಬಳಿ ಅಧ್ಯಕ್ಷ ಸುರೇಶ ಸಂಗರಡ್ಡಿ, ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ಮುತ್ತಣ್ಣ ಬಿಸರಳ್ಳಿ, ಎಸ್‌ಡಿಎಂಸಿ ಅಧ್ಯಕ್ಷರಾದ ಮಹಾಂತೇಶ ಸಿಂದೋಗಿಮಠ, ನಾಗರಾಜ ಕಗ್ಗಲ್, ಮುಖ್ಯ ಶಿಕ್ಷಕರಾದ ಮಲ್ಲಣ್ಣ ಗೊರವರ, ಗಿರಿಯಪ್ಪ ಹಮ್ಮಗಿ, ಗ್ರಂಥ ಪಾಲಕಿ ಶೋಭಾ ಬಾರಕೇರ, ಪ್ರಮುಖರಾದ ತಿಮ್ಮಣ್ಣ ಸಿದ್ನೆಕೊಪ್ಪ, ಪ್ರಭು ಬಾಲಪ್ಪನವರ, ಜುನುಸಾಬ, ಮಲ್ಲಿಕಾರ್ಜುನಗೌಡ ಪಾಟೀಲ, ಎಸ್‌ಡಿಎಂಸಿ ಸದಸ್ಯರು, ಉಭಯ ಶಾಲೆಗಳ ಶಿಕ್ಷಕರು, ಇತರರಿದ್ದರು.