ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಿ

| Published : Jan 08 2024, 01:45 AM IST

ಸಾರಾಂಶ

ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಿ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ನಾಗಾಲೋಟದಲ್ಲಿರುವ ಸ್ಪರ್ಧಾತ್ಮಕವಾಗಿರುವ ಇಂದಿನ ತಂತ್ರಜ್ಞಾನದ ಯುಗದಲ್ಲಿ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಲು ಪಾಲಕರು ಸೂಕ್ತ ವಾತಾವರಣ ಸೃಷ್ಟಿಸಬೇಕು ಎಂದು ಹೆಸರಾಂತ ಕಾರ್ಪೋರೇಟ್ ತಜ್ಞ ಮಹೇಶ ಮಶ್ಯಾಳ ತಿಳಿಸಿದರು.

ರಬಕವಿ ಹೊಸೂರಿನ ಪದ್ಮಾವತಿ ಅಂತಾರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಹಜಾರೆ ಹಬ್ಬ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ ಅವರು, ಹಿಂದೆ ಮಕ್ಕಳು ದೈಹಿಕ ಶಕ್ತಿ ಸಾಮರ್ಥ್ಯವನ್ನು ವೃದ್ಧಿಸುವ ಆಟೋಟಗಳನ್ನು ಆಡುತ್ತಿದ್ದರು ಮತ್ತು ಸೃಜನಾತ್ಮಕ ಕೃತಿಗಳ ಮೂಲಕ ತಮ್ಮ ಬೌದ್ಧಿಕ ಬೆಳವಣಿಗೆಯನ್ನೂ ಪೂರೈಸಿಕೊಳ್ಳುತ್ತಿದ್ದರು. ಆಗ ಇದೊಂದು ರೀತಿಯ ಸಂತುಲಿತ ಪ್ರಕ್ರಿಯೆ ಆಗಿತ್ತು. ಇಂದು ದೈಹಿಕ ಪರಿಶ್ರಮದ ಆಟಗಳನ್ನು ಬಿಟ್ಟು ಮಕ್ಕಳು ಒಂದೆಡೆ ವಿಡಿಯೋ ಗೇಮ್, ಐಪ್ಯಾಡ್, ಟ್ಯಾಬ್ ಮುಂತಾದ ಆಟೋಟಗಳನ್ನು ಮಾತ್ರ ಆಡಿ ಮನ ರಂಜನೆಯನ್ನು ಪಡೆದುಕೊಳ್ಳುತ್ತಾರೆ. ಅದರ ಜೊತೆ ಅವರಲ್ಲಿ ಶಾರೀರಿಕ ಶಕ್ತಿಯನ್ನು ವೃದ್ಧಿಸುವ ಆಟೋಟಗಳಲ್ಲಿ ಆಸಕ್ತಿ ಕಡಿಮೆ ಆಗುತ್ತಿದೆ ಎಂದು ವಿಷಾದಿಸಿದ ಅವರು, ಮಕ್ಕಳ ದೈಹಿಕ ಮತ್ತು ಮಾನಸಿಕ ಸಕ್ಷಮತೆಗೆ ಶಾಲೆಗಳಲ್ಲಿ ಹೆಚ್ಚು ಕ್ರೀಡೆಗಳನ್ನು ಹಾಗೂ ಮನೋಕ್ಷಮತೆ ಹೆಚ್ಚಿಸುವ ಬೌದ್ಧಿಕ ಚಟುವಟಿಕೆಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.

ಓದುವ ಹವ್ಯಾಸದಿಂದ ಮಕ್ಕಳಲ್ಲಿ ತಾವು ಓದುತ್ತಿರುವ ಪಾತ್ರಗಳ ಬಗ್ಗೆ ಹೆಚ್ಚು ಆಸಕ್ತಿ ಅನುಕರಣೆ ಉಂಟಾಗುತ್ತದೆ. ಕಾರ್ಟೂನುಗಳನ್ನು ನೋಡಿದರೂ ಮಕ್ಕಳು ಅದೇ ರೀತಿ ತಮ್ಮ ಸ್ವಭಾವ ಮಾತುಗಳನ್ನು ಪುನರಾವರ್ತನೆ ಮಾಡುವುದು ಪಾಲಕರ ಗಮನಕ್ಕೆ ಬಂದಿರಬಹುದು. ಇಂದಿನ ಡಿಜಿಟಲ್ ಭರಾಟೆಯಲ್ಲಿ ಉತ್ತಮ ಪುಸ್ತಕಗಳು ಕೇವಲ ಕಪಾಟುಗಳಲ್ಲಿ ಸಂಗ್ರಹಣೆಗೆ ಮಾತ್ರ ಸೀಮಿತಗೊಳ್ಳುತ್ತಿವೆ. ಮಾರುಕಟ್ಟೆಯ ಮತ್ತು ಜಾಹೀರಾತುಗಳ ಕೊರತೆಯೂ ಇದಕ್ಕೆ ಕಾರಣವಾಗಿರಬಹುದು. ಇದು ತೃತೀಯ ರಾಷ್ಟ್ರಗಳಲ್ಲಿ ಮಾತ್ರ ಇಂತಹ ಸನ್ನಿವೇಶ ಹೆಚ್ಚು ಕಾಣ ಸಿಗುತ್ತದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ನಮಗಿಂತ ಹೆಚ್ಚು ತಂತ್ರ ಜ್ಞಾನ ಆವಿಷ್ಕಾರಗಳು ಆಗಿದ್ದರೂ ಓದುವ, ಪುಸ್ತಕ ಖರೀದಿಸುವ ಹವ್ಯಾಸ ಕಡಿಮೆಯಾಗಿಲ್ಲ. ಅದರಲ್ಲೂ ಹಜಾರೆ ಶಿಕ್ಷಣ ಸಂಸ್ಥೆ ಇಂಥಹ ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಅವರು ತಿಳಿಸಿದರು.

ಡಿಡಿಪಿಐ ಬಿ.ಕೆ. ನಂದನೂರ ಮಾತನಾಡಿ, ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಯ ಬೇಕಾದರೆ ಮೊದಲು ಹೆತ್ತವರು ಸ್ವತಃ ಅಂತಹ ಮಾದರಿಯನ್ನು ಜೀವನದಲ್ಲಿ ತೋರ್ಪಡಿಸಬೇಕು. ಮನೆಯಲ್ಲಿ ಸಿರಿಯಲ್‌ಗಳನ್ನು ನೋಡುವುದನ್ನು ನಿಲ್ಲಿಸಿ ಓದಿನತ್ತ ಹೆತ್ತವರು ತೊಡಗಬೇಕು. ಮಕ್ಕಳಲ್ಲಿ ಹೆತ್ತವರ ದೊಡ್ಡವರ ಅಭ್ಯಾಸಗಳನ್ನು ಅವರು ಅನುಕರಣೆ ಮಾಡುವ ಸ್ವಭಾವ ಇರುತ್ತದೆ. ಓದುವುದರಿಂದ ಸಿಗುವ ಮಾನಸಿಕ ಸಂತೃಪ್ತಿ, ಜ್ಞಾನದ ಹೆಚ್ಚಳ, ವ್ಯಕ್ತಿತ್ವದ ನಿರ್ಮಾಣದ ಕುರಿತು ಮಕ್ಕಳ ಮುಂದೆ ಪ್ರಸ್ತುತ ಪಡಿಸಬೇಕು. ಇದರಿಂದ ಸಿಗುವ ಪ್ರಯೋಜನದ ಬಗ್ಗೆ ಮಕ್ಕಳಲ್ಲಿ ಜಿಜ್ಞಾಸೆ ಮೂಡಿ ಅಂತಹ ಭಾವನೆಗಳನ್ನು ಸೃಷ್ಟಿಸಲು ಪ್ರಯತ್ನ ಪಡಬೇಕು. ಪ್ರತಿ ಹಂತದಲ್ಲಿ ಮಗುವಿನ ಅಮೂಲಾಗ್ರ ಬದಲಾವಣೆಯಲ್ಲಿ ಶಿಕ್ಷಕರ ಜೊತೆಗೆ ಪಾಲಕರ ಪಾತ್ರ ಬಹು ಮುಖ್ಯವಾಗಿದೆ ಎಂದರು.ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಸಕ ಸಿದ್ದು ಸವದಿ ಮಾತನಾಡಿ, ಮಕ್ಕಳು ಬೆಳೆಯುವ ಹೊತ್ತಿಗೆ ಅವರಲ್ಲಿ ಪುಸ್ತಕ ಪ್ರೇಮವನ್ನು ಬೆಳೆಸಬೇಕು. ಅಂತಹ ವಾತಾವರಣವನ್ನು ಮನೆಯಲ್ಲಿ ನಿರ್ಮಾಣ ಮಾಡಬೇಕು. ಮಕ್ಕಳು ನಿದ್ದೆಗೆ ಜಾರುವುದಕ್ಕಿಂತ ಮುಂಚಿತವಾಗಿ ಪುಸ್ತಕಗಳ ಮೇಲೆ ಕಣ್ಣಾಡಿಸುವ ಪರಿಪಾಠ ಬಹಳ ಉತ್ತಮ ಎಂದರು.

ಇದೇ ಸಂದರ್ಭದಲ್ಲಿ ಕೃಷಿ, ವ್ಯಾಪಾರ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಪ್ರಸಕ್ತ ವರ್ಷದ ಸಂಸ್ಥೆಯ ವತಿಯಿಂದ ನೀಡುವ ಪದ್ಮಾವತಿ ಪುರಸ್ಕಾರ ನೀಡಿ ಗೌರವಿಸಿದರು.

ಸಮಾರಂಭದ ಘನ ಅಧ್ಯಕ್ಷತೆಯನ್ನು ಜವಳಿ ವರ್ತಕ ಗಣಪತರಾವ ಹಜಾರೆ ವಹಿಸಿದ್ದರು. ಅಧ್ಯಕ್ಷತೆಯನ್ನು ಚಡಚಣದ ಹೆಸರಾಂತ ಜವಳಿ ವ್ಯಾಪಾರಿ ಬಾಹುಬಲಿ ಮುತ್ತೀನ ಸಹೋದರರು ವಹಿಸಿದ್ದರು. ಪದ್ಮಾವತಿ ಹಜಾರೆ, ಬಿಇಒ ಎ. ಕೆ. ಬಸನ್ನವರ, ಪ್ರೊ.ಬಸವರಾಜ ಕೊಣ್ಣೂರ, ರಾಜು ನಂದೆಪ್ಪನವರ, ಸಿದ್ದು ಕೊಣ್ಣೂರ, ಪ್ರಸನ್ನ ಹಜಾರೆ, ಪ್ರವೀಣ ಹಜಾರೆ, ಪ್ರಶಾಂತ ಹಜಾರೆ, ಪ್ರದೀಪ ಹಜಾರೆ, ಉದಯ ಹಜಾರೆ, ಸಂತೋಷ ಹಜಾರೆ, ಆಡಳಿತಾಧಿಕಾರಿ ಭಾರತಿ ತಾಳಿಕೊಟಿ, ಪ್ರಾಚಾರ್ಯ ಬಸವರಾಜ ಕಲಾದಗಿ, ಶ್ರೀಶೈಲ ಕುಂಬಾರ, ಸತೀಶ ಬೆಳಗಲ್ಲ ಸೇರಿದಂತೆ ಅನೇಕರಿದ್ದರು.

--

ಕೋಟ್‌

ಮಕ್ಕಳಿಗಾಗಿ ಖರೀದಿಸುವ ಆಟಿಕೆಗಳಲ್ಲಿ ವಿವಿಧ ಮನರಂಜನಾ ಪುಸ್ತಕಗಳನ್ನು ಖರೀದಿಸಬೇಕು. ಜೊತೆಗೆ ಅವರ ಹೆಸರಲ್ಲಿಯೇ ಮ್ಯಾಗ್ಜಿನ್‌ಗಳನ್ನು, ಮತ್ತೀತರ ಪುಸ್ತಕಗಳನ್ನು ತರಿಸುವುದು, ಗ್ರಂಥಾಲಯಗಳಿಗೆ ಕರೆದುಕೊಂಡು ಹೋಗುವುದನ್ನು ಪಾಲಕರು ಮಾಡಿದಾಗ ಮಾತ್ರ ಮಕ್ಕಳಲ್ಲಿ ಓದುವ ಮತ್ತು ಸಾಧನೆ ಮಾಡಬೇಕೆಂಬ ಹಂಬಲ ಮನದಿಂದ ಮೂಡಿ ಬರಲು ಸಾಧ್ಯ.

-ಸಿದ್ದು ಸವದಿ, ಶಾಸಕ