ಸಾರಾಂಶ
ಬೀದರ್‌ನ ಪಾಪನಾಶ ದೇಗುಲದಲ್ಲಿ ಮಹಾ ಶಿವರಾತ್ರಿ ನಿಮಿತ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಟ್ಯಶ್ರೀ ನೃತ್ಯಾಲಯದ ಕಲಾವಿದರು ಆಕರ್ಷಕ ನೃತ್ಯ ಪ್ರದರ್ಶಿಸಿದರು.
ಕನ್ನಡಪ್ರಭ ವಾರ್ತೆ ಬೀದರ್
ಮಹಾ ಶಿವರಾತ್ರಿ ನಿಮಿತ್ತ ಇಲ್ಲಿಯ ಪಾಪನಾಶ ದೇಗುಲದಲ್ಲಿ ಹಮ್ಮಿಕೊಂಡಿದ್ದ ‘ಸಾಂಸ್ಕೃತಿಕ ಸಂಜೆ’ ಕಾರ್ಯಕ್ರಮದಲ್ಲಿ ನಾಟ್ಯಶ್ರೀ ನೃತ್ಯಾಲಯದ ಕಲಾವಿದರು ಸಾಂಸ್ಕೃತಿಕ ವೈಭವ ಸೃಷ್ಟಿಸಿದರು.ನೃತ್ಯಾಲಯದ ಅಧ್ಯಕ್ಷೆಯೂ ಆದ ಕಲಾವಿದೆ ರಾಣಿ ಸತ್ಯಮೂರ್ತಿ ನಿರ್ದೇಶನದಲ್ಲಿ ಒಂದೂವರೆ ತಾಸು ಗಣೇಶ ಸ್ತುತಿ, ಗಣೇಶ ವಂದನೆ, ಗೋಕರ್ಣ ಕ್ಷೇತ್ರ ಮಹಾತ್ಮೆ ನೃತ್ಯ ರೂಪಕ, ಭಕ್ತಿ ಗೀತೆ, ಭರತ ನಾಟ್ಯ, ವಚನ ನೃತ್ಯ, ಭಾಂಗಡಾ ನೃತ್ಯ ಮೊದಲಾದ ಕಲಾ ಪ್ರದರ್ಶನ ನೀಡಿದರು.
ಜಾಗರಣೆಯಲ್ಲಿ ತೊಡಗಿದ್ದ ಭಕ್ತರು ಕಲಾ ವೈಭವಕ್ಕೆ ಮನ ಸೋತರು. ಕರತಾಡನ ಮಾಡಿ ಕಲಾವಿದರನ್ನು ಹುರಿದುಂಬಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ಖ್ಯಾತ ಸಂಗೀತ ಕಲಾವಿದೆ ರೇಖಾ ಅಪ್ಪಾರಾವ್ ಸೌದಿ ಅವರು, ನಾಟ್ಯಶ್ರೀ ನೃತ್ಯಾಲಯ 16 ವರ್ಷಗಳಿಂದ ಪಾಪನಾಶ ದೇಗುಲದಲ್ಲಿ ಶಿವರಾತ್ರಿ ವೇಳೆ ಭರತನಾಟ್ಯ ಹಾಗೂ ಜಾನಪದ ನೃತ್ಯ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಅಂಚೆ ಕಚೇರಿಯ ಅಂಚೆ ಪಾಲಕಿ ಮಂಗಲಾ ಭಾಗವತ್ ಮಾತನಾಡಿ, ಮಹಿಳಾ ದಿನಾಚರಣೆ ಹಾಗೂ ಮಹಾ ಶಿವರಾತ್ರಿ ಒಟ್ಟಿಗೆ ಬಂದಿರುವುದು ಮಹಿಳೆಯರ ಸಂಭ್ರಮ ಇಮ್ಮಡಿಗೊಳಿಸಿದೆ. ಮಹಿಳೆಯರು ಪ್ರಯತ್ನಪಟ್ಟರೆ ಎಲ್ಲ ಕ್ಷೇತ್ರಗಳಲ್ಲೂ ಯಶಸ್ಸು ಗಳಿಸಬಹುದು ಎಂದು ತಿಳಿಸಿದರು.ಪಾಪನಾಶ ಮಹಾದೇವ ಟ್ರಸ್ಟ್ ಅಧ್ಯಕ್ಷ ಚಂದ್ರಕಾಂತ ಶೆಟಕಾರ್, ನಾಟ್ಯಶ್ರೀ ನೃತ್ಯಾಲಯದ ನಿರ್ದೇಶಕ ಸತ್ಯಮೂರ್ತಿ ಮತ್ತಿತರರು ಇದ್ದರು. ಬಸವರಾಜ ಮೂಲಗೆ ನಿರೂಪಿಸಿದರು.