ಪ್ರತಿಭೆ ಹೊರತರಲು ಸಾಂಸ್ಕೃತಿಕ ಉತ್ಸವಗಳು ವೇದಿಕೆ

| Published : Jan 05 2024, 01:45 AM IST

ಸಾರಾಂಶ

ಯಶವಂತ ಸರದೇಶಪಾಂಡೆ ನಾಟಕಗಳಲ್ಲಿ ಹಾಸ್ಯದ ಜತೆಗೆ ಸಮಾಜಕ್ಕೆ ಸಂದೇಶ ಕಾಣಬಹುದು. ವಿದ್ಯಾರ್ಥಿಗಳಿಗೆ ಅವರ ಪ್ರತಿಭೆ ಹೊರಹಾಕಲು ಇಂತಹ ವೇದಿಕೆ ಸಹಕಾರಿಯಾಗಿವೆ

ಧಾರವಾಡ: ಸಾಂಸ್ಕೃತಿಕ ಉತ್ಸವಗಳು ವಿದ್ಯಾರ್ಥಿಗಳ ಪ್ರತಿಭೆ ಹೊರ ತರಲು ಉತ್ತಮ ವೇದಿಕೆಗಳಾಗಿವೆ ಎಂದು ವಿಧಾನ ಪರಿಷತ್ ಸದಸ್ಯರು, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ಕರ್ನಾಟಕ ಕಲಾ ಕಾಲೇಜಿನ ಸ್ನಾತಕ ಮತ್ತು ಸ್ನಾತ್ತಕೊತ್ತರ ಪ್ರವಾಸೋದ್ಯಮ ಅಧ್ಯಯನ ವಿಭಾಗ ಮತ್ತು ಭಾರತ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಸೃಜನಾ ರಂಗಮಂದಿರದಲ್ಲಿ ಮೂರು ದಿನಗಳ ಹುಬ್ಬಳ್ಳಿ-ಧಾರವಾಡ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಸಾರ್ಥವಾಹ್ ಸಾಂಸ್ಕೃತಿಕ ಉತ್ಸವದಲ್ಲಿ ಸುಪರ್ ಸಂಸಾರ, ನಾಟಕಕ್ಕೆ ಚಾಲನೆ ನೀಡಿದ ಅವರು, ನಾಟಕ ವೀಕ್ಷಣೆ ಮಾಡುವದರಿಂದ ಮನುಷ್ಯನಿಗೆ ಮಾನಸಿಕ ನೆಮ್ಮದಿ ಸಿಗುತ್ತದೆ. ಯಶವಂತ ಸರದೇಶಪಾಂಡೆ ನಾಟಕಗಳಲ್ಲಿ ಹಾಸ್ಯದ ಜತೆಗೆ ಸಮಾಜಕ್ಕೆ ಸಂದೇಶ ಕಾಣಬಹುದು. ವಿದ್ಯಾರ್ಥಿಗಳಿಗೆ ಅವರ ಪ್ರತಿಭೆ ಹೊರಹಾಕಲು ಇಂತಹ ವೇದಿಕೆ ಸಹಕಾರಿಯಾಗಿವೆ ಎಂದರು.

ಮೊದಲನೇ ದಿನದ ಸಾರ್ಥವಾಹ ಕಾರ್ಯಕ್ರಮದ ಉದ್ಘಾಟನೆ ನಂತರ ರಸ ಪ್ರಶ್ನೆ, ಸ್ಕಿಟ್, ಭಾಷಣ ಸ್ಪರ್ಧೆ, ಕೋಲಾಜ್ ಸ್ಪರ್ಧೆಗಳು ಜರುಗಿದವು. ಮೊದಲನೆ ದಿನದ ಭಾಷಣ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಜೀವನದಲ್ಲಿ ಪುಸ್ತಕಗಳ ಮಹತ್ವ, ಬಾಲ ಕಾರ್ಮಿಕರು, ಶಿಕ್ಷಣದ ಮಹತ್ವ, ಭಾರತೀಯ ಕೃಷಿ, ಚಂದ್ರಯಾನ, ತಂತ್ರಜ್ಞಾನ ಮತ್ತು ಪರಿಸರ, ಮಹಿಳಾ ಸುರಕ್ಷಿತೆ ಕುರಿತು ಮಾತನಾಡಿದರು.

2ನೇ ದಿನ ಗುರುವಾರ ಸಾರ್ಥವಾಹ ಸಾಂಸ್ಕೃತಿಕ ಉತ್ಸವದಲ್ಲಿ ವಿದ್ಯಾರ್ಥಿಗಳಿಗೆ ಅಂತಿಮ ಸುತ್ತಿನ ರಸ ಪ್ರಶ್ನೆ, ಅಡುಗೆ ಸ್ಪರ್ಧೆ, ಚಿಕ್ಕಿ ರಂಗೋಲಿ, ತರಕಾರಿಗಳಲ್ಲಿ ಕೆತ್ತನೆ, ಡಿಜಿಟಲ್ ಪೊಸ್ಟರ್ ಮೇಕಿಂಗ್, ವಾಟರ್ ಕಲರ್ ಪೇಂಟಿಂಗ್ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಉತ್ಸವ ಭರಿತವಾಗಿ ಭಾಗವಹಿಸಿದ್ದರು.

ಅಡುಗೆ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಪೌಷ್ಟಿಕಾಂಶಯುಕ್ತ ಹೊಸ ರೀತಿಯ ಖಾದ್ಯಗಳಾದ ಕೇಕ್, ಬ್ರೇಡ್ ಸ್ಯಾಂಡ ವಿಚ್, ತರಕಾರಿ, ಹಣ್ಣು, ಬೇಳೆಕಾಳು ಬಳಸಿ ಆಹಾರ ಪದಾರ್ಥ ಸಿದ್ದಪಡಿಸಿ ಗಮನ ಸೆಳೆದರು. ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಈ ತರಹದ ಅಡುಗೆ ಸ್ಪರ್ಧೆಗಳಿಂದ ಹೊಸ ರೀತಿಯ ರುಚಿಯ ಖಾದ್ಯ ಮಾಡಲು ಪ್ರೇರಣೆ ದೊರೆಯುತ್ತದೆ ಎಂದು ಹುಬ್ಬಳ್ಳಿಯ ಜೆ.ಜೆ. ಕಾಮರ್ಸ್ ಕಾಲೇಜಿನ ವಿದ್ಯಾರ್ಥಿನಿ ಸೋನಾಲಿ ಹೇಳಿದರೆ, ಪ್ರಸ್ತುತ ಅಡುಗೆ ಮಾಡುವದು ಸೃಜನಶೀಲ ಕಲೆಯಾಗಿದೆ ಎಂದು ಮೃತ್ಯುಂಜಯ ಕಲಾ ಕಾಲೇಜಿನ ವಿದ್ಯಾರ್ಥಿನಿ ಅಲಿಯಾ ಅಭಿಪ್ರಾಯಪಟ್ಟರು.

ತಂತ್ರಜ್ಞಾನ ಆಧಾರಿತ ಇ-ಪೊಸ್ಟರ್ ಮೇಕಿಂಗ್ ಸ್ಪರ್ಧೆಗಳನ್ನು ಈ ಸಾಂಸ್ಕೃತಿಕ ಉತ್ಸವದಲ್ಲಿ ಆಯೋಜಿಸಿದ್ದು ವಿದ್ಯಾರ್ಥಿಗಳ ಕೌಶಲ್ಯ ಹೆಚ್ಚಿಸಲು ಸಹಕಾರಿಯಾಗಿದೆ ಎಂದು ಕರ್ನಾಟಕ ಕಾಲೇಜಿನ ಡ್ಯಾನಿಯಲ್ ಕೋರೆಬೈನಾ ಹೇಳಿದರು. ವಿಭಾಗದ ಸಂಯೋಜಕ ಡಾ.ಕೆ. ಜಗದೀಶ ಮತ್ತಿತರರು ಇದ್ದರು.