ಮಹಮದರ ಸಂದೇಶ ಹೆಚ್ಚು ಪ್ರಚಾರ ಮಾಡಬೇಕಿತ್ತು

| Published : Oct 21 2024, 12:30 AM IST / Updated: Oct 21 2024, 12:31 AM IST

ಸಾರಾಂಶ

ಭಾರತದಲ್ಲಿ ಸುಮಾರು 25 ಕೋಟಿ ಜನ ಸಂಖ್ಯೆ ಇರುವ ಇಸ್ಲಾಂ ಧರ್ಮದ ಜನರಿದ್ದಾರೆ

ಕನ್ನಡಪ್ರಭ ವಾರ್ತೆ ಮೈಸೂರು

ಭಾರತದಂತಹ ವೈವಿಧ್ಯಮಯ ಸಾಂಸ್ಕೃತಿಕ ಜೀವನದಲ್ಲಿ ಇಸ್ಲಾಂ ಮತ್ತು ಮಹಮ್ಮದರ ಧರ್ಮದ ಸಂದೇಶವನ್ನು ಸ್ಥಳೀಯ ಭಾಷೆಗೆ ಅನುವಾದಿಸಿ ಪ್ರಚಾರ ಮಾಡಬೇಕಿತ್ತು. ಆಗ ಮಹಮ್ಮದ್ ಅವರ ಬಗ್ಗೆ ವಿರೋಧಿ ಧೋರಣೆ ಹೊಂದಿದ್ದವರು ಕೂಡ ಮಾತನಾಡುತ್ತಿರಲಿಲ್ಲ ಎಂದು ಚಿಂತಕ ಬಂಜಗೆರೆ ಜಯಪ್ರಕಾಶ್ ಹೇಳಿದರು.

ನಗರದ ಕಲಾಮಂದಿರದಲ್ಲಿ ಜಮಾತೆ ಇಸ್ಲಾಮಿ ಹಿಂದ್ ಮೈಸೂರು ಶಾಖೆ ವತಿಯಿಂದ ವಲಯ ಸಂಚಾಲಕ ಅಬ್ದುಲ್ ಸಲಾಂ ನೇತೃತ್ವದಲ್ಲಿ ಪ್ರವಾದಿ ಮಹಮ್ಮದ್ ಬದುಕಿನ ಚಿತ್ರಣವನ್ನು ಪ್ರಸ್ತುತ ಪಡಿಸುವ ಸಾರ್ವಜನಿಕ ಸೀರತ್ ಸಮಾವೇಶದಲ್ಲಿ ಅವರು ಪ್ರವಾದಿ ಮಹಮ್ಮದ್ ಲೇಖನ ಸಂಕಲನ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಪ್ರವಾದಿ ಮಹಮ್ಮದ್ ರ ಜೀವನ ಸಂದೇಶ ತಿಳಿಸುವ ಈ ಪುಸ್ತಕದಲ್ಲಿ ಅವರ ಕಾಲಘಟ್ಟದಲ್ಲಿ ಎದಿರುಸಿದ ಘಟನೆಗಳು ಒಟ್ಟಾರೆಯಾಗಿ ಬಹುಮುಖ ಪ್ರತಿಭೆ ಆಗಿರುವ ಮಹಮ್ಮದ್ ಪೈಗಂಬರ್ ಅವರು ಧಾರ್ಮಿಕ ಮುಖಂಡರಾಗಿ ಬೆಳೆದು ಬಂದ ಚಿತ್ರಣ ಕಟ್ಟಿಕೊಟ್ಟಿರುವುದಾಗಿ ಅವರು ಹೇಳಿದರು.

ಇಸ್ಲಾಂ ಧರ್ಮದ ಬಗ್ಗೆ ತಿಳಿಸಿಕೊಡುವ ಹಲವು ಲೇಖನಗಳು ಬಂದಿದೆ. ಕುರಾನ್ ಕೂಡ ಕನ್ನಡದಲ್ಲಿ ಬಂದಿದೆ. ಭಾರತದಲ್ಲಿ ಸುಮಾರು 25 ಕೋಟಿ ಜನ ಸಂಖ್ಯೆ ಇರುವ ಇಸ್ಲಾಂ ಧರ್ಮದ ಜನರಿದ್ದಾರೆ. ಭಾರತದಂತ ಬಹು ಸಂಸ್ಕೃತಿಯ ನಾಡಿನಲ್ಲಿ ಇಸ್ಲಾಂ ಧರ್ಮದ ಬಗ್ಗೆ ಹೆಚ್ಚು ಪ್ರಚಾರ ಮಾಡಿದ್ದರೆ, ಮಹಮ್ಮದ್ ಅವರ ಬಗ್ಗೆ ವಿರೋಧಿ ಧೋರಣೆ ಹೊಂದಿದ್ದವರು ಕೂಡ ಮಾತನಾಡುತ್ತಿರಲಿಲ್ಲ ಎಂದರು.

ಅರಬ್ ನಲ್ಲಿ ಹೆಣ್ಣು ಮಕ್ಕಳ ಜೀವಂತ ಹೂಳುವ ಪರಿಸ್ಥಿತಿ ಇತ್ತು. ಈ ಪದ್ಧತಿಯನ್ನು ಸಂಪೂರ್ಣ ನಿಷೇಧ ಹೇರಲಾಯಿತು. ಬಹುಪತ್ನಿತ್ವ ಆ ಕಾಲಗಟ್ಟದಲ್ಲಿ ನೈತಿಕತೆ ಹೊಂದಿತ್ತು. ಜಾತಿ ವ್ಯವಸ್ಥೆ ಮತ್ತು ವರ್ಣ ವ್ಯವಸ್ಥೆಯಲ್ಲಿ ಅವಮಾನಗೊಂಡವರು ಅಸ್ಪೃಶ್ಯತೆ ಹೋಗಲಾಡಿಸಲು ದಲಿತರು, ಹಿಂದುಳಿದ ವರ್ಗದ ಜನರು ಹೆಚ್ಚಾಗಿ ಇಸ್ಲಾಂ ಧರ್ಮಕ್ಕೆ ಸೇರಿಕೊಂಡರು. ಅಕ್ರಮವಾಗಿ ಸೇರಿಕೊಂಡಿದ್ದಲ್ಲ. ಸನಾತನ ಧರ್ಮದಲ್ಲಿ ಕುಲಕಸುಬಿಗೆ ಅಂಟಿಕೊಳ್ಳಬೇಕಿತ್ತು, ಕುಲ ನಿಬಂಧನೆ ಹೇರಲಾಗಿತ್ತು ಎಂದರು.

ಸೆಂಟ್ಫಿಲೋಮಿನಾ ಚರ್ಚ್ ನ ಧರ್ಮಗುರು ಸ್ಟೇನಿ ಡಿ. ಅಲ್ಮೆಡಾ ಮಾತನಾಡಿ, ಶಾಂತಿಯನ್ನು ದೇಶದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿ ಪ್ರವಾದಿಗಳು ಸಾರಿದ್ದಾರೆ ಎಂದರು.

ಹಿರಿಯ ಲೇಖಕ ಮಹಮ್ಮದ್ ಕಿಂಞು ಮಾತನಾಡಿ, ಪ್ರವಾದಿ ಮಹಮ್ಮದ್ ಅವರ ಬದುಕು ಸಂದೇಶ ತಿಳಿಸುವ ಮೂಲಕ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡುವ ಕಾರ್ಯಕ್ರಮ ನಡೆಸುತ್ತಿದ್ದೇವೆ. ಧರ್ಮದ ಹೆಸರಲ್ಲಿ ದ್ವೇಷ, ವಿಭಜನೆಯನ್ನು ಸೃಷ್ಟಿಸುವ ಕಾಲಘಟ್ಟದಲ್ಲಿ ಇದ್ದೇವೆ. ಆದ್ದರಿಂದ ಜಮಾತೆ ಇಸ್ಲಾಂ ಪ್ರವಾದಿಗಳ ಬದುಕು ಸಂದೇಶಗಳನ್ನು ಪ್ರಚಾರ ಮಾಡುತ್ತದೆ. ಅವರ ಸಂದೇಶ ನಿಜವಾದ ಬೆಳಕನ್ನು ಸಾರುತ್ತದೆ ಎಂದರು.

ಜಗತ್ತಿನ ಎಲ್ಲಾ ಸಮಸ್ಯೆಗಳ ಮೂಲಕ ಕಾರಣ ಜನಾಂಗೀಯತೆ, ಅಂದರೆ ನಾನು ನಿನಗಿಂತ ಶ್ರೇಷ್ಠ ಎನ್ನುವುದು. ಇಸ್ರೇಲ್ ನವರು ನಮ್ಮಜೀವಕ್ಕೆ ಇರುವ ಬೆಲೆ ಪ್ಯಾಲೇಸ್ಟೇನ್ ನವರ ಜೀವಕ್ಕೂ ಅಷ್ಟೇ ಬೆಲೆ ಇದೆ ಎನ್ನುವುದನ್ನು ಇವತ್ತಿಗೂ ಒಪ್ಪಿಕೊಳ್ಳಲ್ಲ. ಅಸಮಾನತೆ ಇಲ್ಲದ ಸಮಾನ ಗೌರವ ಆಗಿತ್ತು ಪ್ರವಾದಿ ಮುಹಮ್ಮದ್ ಅವರ ಸಮಾಜ. ದೇವರ ಹೆಸರಲ್ಲಿ ಯಾರೂ ಯಾರನ್ನೂ ಕೂಡ ಮೋಸ ಮಾಡುವುದು ಸಾಧ್ಯವಿಲ್ಲ. ದೇವರ ಹೆಸರಲ್ಲಿ ಶೋಷಣೆ ಮಾಡುವುದು ಸುಲಭದ ಕೆಲಸ ಎಂದರು.

ಶಾಸಕ ತನ್ವೀರ್ ಸೇಠ್‌ ಮಾತನಾಡಿ, ಇಂದಿನ ಸನ್ನಿವೇಶದಲ್ಲಿ ಇಂತಹ ಕಾರ್ಯಕ್ರಮ ಹೆಚ್ಚು ಆಯೋಜನೆ ಆಗಬೇಕು. ಜಾತಿ ವ್ಯವಸ್ಥೆ ಯಾರೂ ಅರ್ಜಿ ಹಾಕಿಕೊಂಡು ಹುಟ್ಟಿ ಬಂದಿಲ್ಲ. ಪ್ರವಾದಿಗಳು ಒಂದು ಕೋಮಿಗಾಗಿ ಅಲ್ಲ ಮಾನವ ಕುಲಕ್ಕೆ ಸಂಬಂಧಿಸಿದ್ದು. ಪ್ರವಾದಿಗಳ ಜೀವನ ಶೈಲಿ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಗಿದಾಗ ಸಮಸ್ಯೆಗಳು ಉಂಟಾಗುವುದಿಲ್ಲ ಎಂದು ಅವರು ಹೇಳಿದರು.

ಶಾಸಕ ಕೆ. ಹರೀಶ ಗೌಡ, ಜಮಾತೆ ಇಸ್ಲಾಂ ಹಿಂದ್ ನ ಕರ್ನಾಟಕ ರಾಜ್ಯ ಕಾರ್ಯದರ್ಶಿ ಜನಾಬ್ ಮಹಮ್ಮದ್ ಕುಂಇ್ಹಿ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕೊಡ್ಲಿಪೇಟೆ, ಸುಯೋಗ್ ಆಸ್ಪತ್ರೆಯ ಡಾ.ಎಸ್.ಪಿ. ಯೋಗಣ್ಣ, ಸವಿತಾ ಪ. ಮಲ್ಲೇಶ್, ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ, ಸಿದ್ದಿಖ್, ಡಾ. ಸಯೈದ್ ಶಕಿಬುರ್ ರೆಹಮಾನ್ ಮತ್ತಿತರರು ಇದ್ದರು.