ಸಾರಾಂಶ
ಕೃಷ್ಣ ಎನ್. ಲಮಾಣಿ
ಕನ್ನಡಪ್ರಭ ವಾರ್ತೆ ಹಂಪಿ (ಗಾಯತ್ರಿ ಪೀಠ ವೇದಿಕೆ)ಮಾರಮ್ಮನ ಜಾತ್ರೆ ದಿವಸಾ ಕೋಣ ಕಡಿಯೋ ಟೈಮಿನಲ್ಲಿ ಬೆಂಡು ಬತ್ತಾಸ್ ಸೇಲಾಗ್ ಹೋಯಿತು..
ಜಾಕಿ ಜಾಕಿ.. ಜಾಕಿ.. ಜಾಕಿ... ಜಾಕಿ... ಜಾಕಿ...ಜಾಕಿ... ಜಾಕಿ..ಜಾಕಿ ರಾಮ.. ಜಾಕಿ ಕೂಲಕು...ಜಾಕಿ..ಜಾಕಿ...
-ಗಾಯನವನ್ನು ವಿ. ಹರಿಕೃಷ್ಣ ಮತ್ತು ತಂಡ ಹಾಡುತ್ತಿದ್ದಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಹಂಪಿ ಉತ್ಸವದ ಪ್ರಧಾನ ವೇದಿಕೆ ಬಳಿ ಸೇರಿದ್ದ ಲಕ್ಷಾಂತರ ಪ್ರೇಕ್ಷಕರು ಪುನೀತ್ ಹಾಡಿಗೆ ಕೇಕೆ ಶಿಳ್ಳೆ ಹಾಕಿ ಕುಣಿದು ಕುಪ್ಪಳಿಸಿದರು.ಗಾಯಕ ವಿ. ಹರಿಕೃಷ್ಣ ಮತ್ತು ತಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರದ ಲಕ್ಸು ಸೋಪು ಹಾಕಿ ಜಳಕ ಮಾಡಿ, ಜಸ್ಟ್ ಬಂದೀನಿ..
ಇರಲಿ ಬಾ.. ಬಸಣ್ಣಿ ಬಾ.. ಬಜಾರು ನಮ್ದ್ ಇವತ್ತೂ ಬಸಣ್ಣಿ ಬಾ.. ಹಾಡನ್ನು ಹಾಡುತ್ತಿದ್ದಂತೆ ಪಡ್ಡೆ ಹುಡುಗರ ಗ್ಯಾಂಗ್ ಕುಣಿದು ಕುಪ್ಪಳಿಸಿತು.ಪವರ್ ಸ್ಟಾರ್ ಪುನೀತ್ ರಾಜಕುಮಾರ ಅಭಿನಯದ ದೊಡ್ಮನೆ ಹುಡುಗ ಚಿತ್ರದ ಯಾಕ್ ಹುಡ್ಗ ಮಯ್ಯಾಗ್ ಹೇಂಗ್ ಐತಿ, ನಾಕ್ ಜನುಮ ದಿಮಾಕುನಿಂದ ಐತಿ..
ಇಲ್ಲ ತ್ರಾಸ್ ಆಕೈತಿ, ಜೀವಕ್ ತ್ರಾಸ್ ಆಕೈತಿ.. ಹಾಡನ್ನು ವಿ. ಹರಿಕೃಷ್ಣ ಮತ್ತು ತಂಡ ಹಾಡುತ್ತಿದ್ದಂತೆ ಪುನೀತ್ ಅಭಿಮಾನಿಗಳು ಹೆಜ್ಜೆ ಹಾಕಿದರು.ದರ್ಶನ್ ಅಭಿನಯದ ಕ್ರಾಂತಿ ಚಿತ್ರದ ನಿನ್ ನೋಡೋಕ್ ಬಂದೀನಿ ಭಾವ.. ನನ್ನ ಸಿಸ್ಟರ್ ಭಾಯ್‌ಫ್ರೆಂಡ್ ನೀವ.. ಹಾಡಿಗೆ ಪ್ರೇಕ್ಷಕರು ಹೆಚ್ಚೆದ್ದು ಕುಣಿದರು.
ದರ್ಶನ್ ಅಭಿನಯದ ಕಾಟೇರ ಚಿತ್ರದ ನೋಡ್ತಾ, ನೋಡ್ತಾ ಆಗ್ಹೋಗೈತಿ ಶ್ಯಾನೇ ಪೀರುತಿ..ಪಕ್ಕದಲ್ಲಿ ಇದ್ರೇ ನಿನೇ ಶಿವಾ ನಾನೇ ಪಾರ್ವತಿ.. ಹಾಡಿಗೂ ಜನ ಕುಣಿದರು.
ಪುನೀತ್ ರಾಜಕುಮಾರ ಅಭಿನಯದ ರಾಜಕುಮಾರ ಚಿತ್ರದ ಬೊಂಬೆ ಹೇಳುತ್ತೈತೇ ಮತ್ತೆ ಹೇಳುತ್ತೈತೆ ನೀನೇ ರಾಜಕುಮಾರ.. ಹಾಡಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಜನೋಸ್ತೋಮ ಭಾವುಕರಾದರು.ಈ ಹಾಡಿನೊಂದಿಗೆ ವಿ. ಹರಿಕೃಷ್ಣ ಮತ್ತು ತಂಡವದವರ ಸಂಗೀತ ಸುಧೆ ಕಾರ್ಯಕ್ರಮ ಮುಕ್ತಾಯಗೊಂಡಿತು. ರಾತ್ರಿ 1 ಗಂಟೆ 10 ನಿಮಿಷದವರೆಗೆ ನಡೆದ ಕಾರ್ಯಕ್ರಮದಲ್ಲಿ ಜನೋಸ್ತೋಮ ಕಿಕ್ಕಿರಿದು ತುಂಬಿತ್ತು. ಲಕ್ಷಾಂತರ ಸಂಖ್ಯೆಯಲ್ಲಿ ಜನದಟ್ಟಣೆ ಇದ್ದುದ್ದರಿಂದ ಟ್ರಾಫಿಕ್ ಜಾಮ್ ನಿಯಂತ್ರಣಕ್ಕಾಗಿ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಒಂದು ಗಂಟೆ ಹತ್ತು ನಿಮಿಷದ ಬಳಿಕ ಕಾರ್ಯಕ್ರಮ ಮುಂದುವರಿಸಲು ಅನುವು ಮಾಡಿಕೊಡಲಿಲ್ಲ. ಹಾಗಾಗಿ ಬೊಂಬೆ ಹೇಳುತ್ತೈತಿ ಮತ್ತೆ ಹೇಳುತ್ತೈತಿ ಹಾಡಿನೊಂದಿಗೆ ಕಾರ್ಯಕ್ರಮ ಅಂತ್ಯಗೊಂಡಿತು. ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ತಂಡದ ಇಂದು ನಾಗರಾಜ, ಸಂತು ವೆಂಕಿ, ವಾಣಿ ಹರಿಕೃಷ್ಣ, ಹೇಮಲತಾ ಹಾಡುಗಳನ್ನು ಹಾಡಿದರು.
ಈ ಮಧ್ಯೆ ಹಾಸ್ಯ ಕಲಾವಿದರಾದ ಗೋಬ್ರ, ಜಗ್ಗ, ಹರೀಶ, ಸುಷ್ಮಾ ಹಾಸ್ಯದೊಂದಿಗೆ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು. ಕೋಲ್ಕತದ ಗೋಲ್ಡನ್ ಗರ್ಲ್ಸ್ ತಂಡದವರಿಂದ ವಿಶೇಷ ನೃತ್ಯ ನಡೆಯಿತು. ನಟಿಯರಾದ ಹೇಮಲತಾ, ಐಶ್ವರ್ಯ ನಿರೂಪಣೆ ಮಾಡಿದರು.