ಸಾರಾಂಶ
ಹೊಸಪೇಟೆ: ನಗರದ ಪುನೀತ್ ರಾಜ್‌ಕುಮಾರ ಜಿಲ್ಲಾ ಕ್ರೀಡಾಂಗಣದಲ್ಲಿ ಫೆ. 27ರಂದು ಬಸವಣ್ಣ ಹಾಗೂ ಅಂಬೇಡ್ಕರ್ ಅವರ ಕುರಿತು 25 ಗಾಯನಗಳ ಧ್ವನಿಸುರುಳಿ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ 50 ಸಾವಿರ ಜನರು ಆಗಮಿಸುವ ನಿರೀಕ್ಷೆ ಇದೆ ಎಂದು ಸಂತೋಷ ಲಾಡ್ ಫೌಂಡೇಷನ್‌ನ ಸಂಚಾಲಕ ಹಾಗೂ ಮಾಜಿ ಎಂಎಲ್‌ಸಿ ಕೆಎಸ್‌ಎಲ್ ಸ್ವಾಮಿ ತಿಳಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾನವತಾವಾದಿ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ರಾಜ್ಯ ಸರ್ಕಾರ ಘೊಷಣೆ ಮಾಡಿದ ಹಿನ್ನೆಲೆಯಲ್ಲಿ ಹಾಗೂ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಮಹತ್ವ ತಿಳಿಸಲು ಗೀತೆಗಳ ಮೂಲಕ ಜನಮಾನಸಕ್ಕೆ ತಲುಪಿಸಬೇಕು. ಅಂಬೇಡ್ಕರ್ ಹಾಗೂ ಬಸವಣ್ಣ ಅವರ ತತ್ವ-ಸಿದ್ಧಾಂತಗಳು ಪ್ರಸ್ತುತ ಅವಶ್ಯಕತೆ ಇದೆ ಎಂದರು.ಈ ಕಾರ್ಯಕ್ರಮ ಪಕ್ಷಾತೀತ ಹಾಗೂ ರಾಜಕೀಯೇತರ ಆಗಿದೆ. ಇದು ಶಕ್ತಿ ಪ್ರದರ್ಶನ ಕಾರ್ಯಕ್ರಮವಲ್ಲ. ಸಾಂಸ್ಕೃತಿಕ ಕಾರ್ಯಕ್ರಮ ಆಗಿದೆ. ಹಾಗಾಗಿ ಮಾಜಿ ಸಚಿವ ಆನಂದ ಸಿಂಗ್ ಅವರನ್ನು ಕೂಡ ಆಹ್ವಾನ ಮಾಡುತ್ತೇವೆ. ಉಭಯ ಜಿಲ್ಲೆಗಳ ಶಾಸಕರು ಹಾಗೂ ಮಾಜಿ ಶಾಸಕರು ಕೂಡ ಭಾಗವಹಿಸಲಿದ್ದಾರೆ ಎಂದರು.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಜನ್ಮದಿನದ ನಿಮಿತ್ತ ಈ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ಕೊಡಬೇಕು ಎಂದು ಶಕ್ತಿ ಪ್ರದರ್ಶನ ಮಾಡಲಾಗುತ್ತಿಲ್ಲ. ಅವರು ಈಗ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಆಗಿದ್ದಾರೆ. ಹಾಗಾಗಿ ವಿಜಯನಗರ ಜಿಲ್ಲಾ ಉಸ್ತುವಾರಿ ಆಗಲು ವೇದಿಕೆ ಸಿದ್ಧ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಇಲ್ಲ. ಅವರಿಗೆ ಎಲ್ಲ ಪಕ್ಷದಲ್ಲೂ ಸ್ನೇಹಿತರಿದ್ದಾರೆ. ಹಾಗಾಗಿ ಪಕ್ಷಾತೀತವಾಗಿ ರಾಜಕಾರಣಿಗಳನ್ನು ಕೂಡ ಆಹ್ವಾನಿಸಲಾಗುವುದು ಎಂದರು.ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವರಾದ ಸಂತೋಷ್ ಲಾಡ್, ಜಮೀರ್ ಅಹಮದ್ ಖಾನ್, ಬಿ. ನಾಗೇಂದ್ರ, ಶಾಸಕರು ಹಾಗೂ ಮಾಜಿ ಶಾಸಕರು ಭಾಗವಹಿಸಲಿದ್ದಾರೆ. ನಾಗೇಂದ್ರ ಪ್ರಸಾದ್ ಅವರ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ಇರಲಿದೆ. ಉದ್ಘಾಟನಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮವೂ ಇರಲಿದೆ. 40 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗುತ್ತಿದೆ. ಜನರಿಗೆ ಊಟದ ವ್ಯವಸ್ಥೆಗೆ 40 ಕೌಂಟರ್‌ಗಳನ್ನು ತೆರೆಯಲಾಗುತ್ತಿದೆ. ಕುಡಿಯುವ ನೀರಿನ ವ್ಯವಸ್ಥೆ ಕೂಡ ಮಾಡಲಾಗುತ್ತಿದೆ. ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗದಂತೆ ಎಲ್ಲ ಮುನ್ನೆಚ್ಚರಿಕಾ ಕ್ರಮ ಕೂಡ ವಹಿಸಲಾಗುತ್ತಿದೆ ಎಂದರು.
ಮುಖಂಡರಾದ ಮುಂಡರಗಿ ನಾಗರಾಜ, ಎ. ಮಾನಯ್ಯ, ವೀರಸ್ವಾಮಿ, ಎಚ್‌ಎನ್‌ಎಫ್ ಮಹಮ್ಮದ್ ಇಮಾಮ್ ನಿಯಾಜಿ, ವಿನಾಯಕ ಶೆಟ್ಟರ್, ಹೊನ್ನೂರಸಾಬ್, ಕೆ. ಬಡಾವಲಿ, ಎನ್. ವೆಂಕಟೇಶ ಮತ್ತಿತರರು ಇದ್ದರು.