ವಿಶ್ವ ಕೊಡವ ಸಮ್ಮೇಳನದಲ್ಲಿ ಸಾಂಸ್ಕೃತಿಕ ರಂಗು

| Published : Dec 31 2023, 01:30 AM IST

ವಿಶ್ವ ಕೊಡವ ಸಮ್ಮೇಳನದಲ್ಲಿ ಸಾಂಸ್ಕೃತಿಕ ರಂಗು
Share this Article
  • FB
  • TW
  • Linkdin
  • Email

ಸಾರಾಂಶ

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ವಿಶ್ವ ಕೊಡವ ಸಮ್ಮೇಳನ ಶನಿವಾರ ತೆರೆ ಕಂಡಿತು. ಸಮ್ಮೆಳನದಲ್ಲಿ ಕೊಡವರ ಸಂಪ್ರದಾಯ, ಸಾಂಸ್ಕೃತಿಕ ಶ್ರೀಮಂತಿಕೆ ಪ್ರದರ್ಶನಗೊಂಡಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕನೆಕ್ಟಿಂಗ್ ಕೊಡವಾಸ್ ಟ್ರಸ್ಟ್ ವತಿಯಿಂದ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ವಿಶ್ವ ಕೊಡವ ಸಮ್ಮೇಳನ (ಗ್ಲೋಬಲ್ ಕೊಡವ ಸಮ್ಮಿಟ್) ಶನಿವಾರ ಸಂಭ್ರಮದ ತೆರೆ ಕಂಡಿತು.ಕೊಡವ ಜನಾಂಗದ ಇತಿಹಾಸದಲ್ಲಿ ಪ್ರಪ್ರಥಮ ಪ್ರಯತ್ನ ಎಂಬಂತೆ ನಡೆದ ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು.

ಕೊಡಗು ಸೇರಿದಂತೆ ಜಗತ್ತಿನಾದ್ಯಂತ ಇರುವ ಜನಾಂಗದವರನ್ನು ಒಂದಾಗಿ ಬೆಸೆಯುವಂತೆ ಮಾಡುವುದು, ಕೊಡಗು ಜಿಲ್ಲೆಯೊಂದಿಗೆ ಕೊಡವರಿಗಿರುವ ಅವಿನಾಭಾವ ಸಂಬಂಧ, ವಿಶಿಷ್ಟವಾದ ಆಚಾರ- ವಿಚಾರ ಪದ್ಧತಿ, ಪರಂಪರೆಗಳನ್ನು ಈ ಹಿಂದಿನಂತೆ ಪೋಷಿಸಿ ಮುಂದಿನ ಪೀಳಿಗೆಗೂ ಪರಿಚಯಿಸಿ ಇದನ್ನು ಉಳಿಸಿ - ಬೆಳೆಸುವ ಪರಿಕಲ್ಪನೆಯೊಂದಿಗೆ ಕೊಡಗು ಜಿಲ್ಲಾ ಕೇಂದ್ರ ಮಂಜಿನ ನಗರಿ ಮಡಿಕೇರಿಯಲ್ಲಿ ಆಯೋಜಿಸಲಾಗಿದ್ದ ವಿಶ್ವ ಕೊಡವ ಸಮ್ಮೇಳನ ಆಕರ್ಷಿಸಿತು.

ಕನೆಕ್ಟಿಂಗ್ ಕೊಡವಾಸ್ ಟ್ರಸ್ಟ್‌ ಪರಿಕಲ್ಪನೆಯ ಚೊಚ್ಚಲ ವಿಶ್ವ ಕೊಡವ ಸಮ್ಮೇಳನ, ಆಯೋಜಕರ ಪ್ರಯತ್ನಕ್ಕೆ ಜನಾಂಗದ ಜನರು ಬೆಂಬಲ ವ್ಯಕ್ತಪಡಿಸುವದರೊಂದಿಗೆ ನಿರೀಕ್ಷಿತ ಯಶಸ್ಸು ಕಂಡಿತು. ಎರಡು ದಿನಗಳ ಕಾಲ ನಡೆದ ಸಮ್ಮೇಳನ ನಾನಾ ಸಮಾವೇಶ, ಸಾಂಸ್ಕೃತಿಕ ಕಾರ್ಯಕ್ರಮ, ಸ್ಪರ್ಧಾ ಕಾರ್ಯಕ್ರಮದೊಂದಿಗೆ ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮದ ಅಂಗವಾಗಿ ಎರಡನೇ ದಿನವಾದ ಶನಿವಾರ ಸಾಂಪ್ರದಾಯಿಕ ನೃತ್ಯ ಹಾಗೂ ಹಾಡು ಸ್ಪರ್ಧೆ ನಡೆಯಿತು. ಮೈದಾನದ ವಿವಿಧೆಡೆ ಕೊಡವ ಸಾಂಪ್ರದಾಯಿಕ ನೃತ್ಯ ಸ್ಪರ್ಧೆ ನಡೆಯಿತು. ಕೊಡವ ಯುವತಿಯರು ಉಮ್ಮಾತ್ತಾಟ್ ಸ್ಪರ್ಧೆಯಲ್ಲಿ ಮಿಂಚಿದರೆ, ಕೊಡವ ಯುವಕರು, ಪುರುಷರು ಬೊಳಕಾಟ್, ಕೋಲಾಟ್‌ನಲ್ಲಿ ಅಚ್ಚುಕಟ್ಟಾಗಿ ಪ್ರದರ್ಶನ ನೀಡಿದರು. ಸ್ಪರ್ಧಾ ಕಾರ್ಯಕ್ರಮವನ್ನು ಹಲವು ಮಂದಿ ವೀಕ್ಷಿಸಿ ಪ್ರೋತ್ಸಾಹ ನೀಡುವ ದೃಶ್ಯವೂ ಕಂಡು ಬಂತು.

ಕೊಡವರ ಆಚಾರ, ವಿಚಾರ, ಪದ್ಧತಿ, ಪರಂಪರೆಯ ವಿಷಯವಾಗಿ ಸಾಂಸ್ಕೃತಿಕ ಸಮಾವೇಶವೂ ನಡೆಯಿತು. ಗಣ್ಯರು ನಾನಾ ವಿಷಯಕ್ಕೆ ಸಂಬಂಧಿಸಿದ ವಿಚಾರ ಮಂಡನೆ ಮಂಡಿಸಿದರು. ಇದರ ನಡುವೆ ಕ್ರೀಡಾಪಟುಗಳಿಗೆ ಸ್ಪೂರ್ತಿ ತುಂಬುವ ಸಲುವಾಗಿ ತೀತಮಾಡ ಅರ್ಜುನ್ ದೇವಯ್ಯ ಮತ್ತು ಮೆ.ಜನರಲ್ ಮುಕ್ಕಾಟಿರ ದೇವಯ್ಯ ಅವರಿಂದ ಕ್ರೀಡಾ ಸಮಾವೇಶ ನಡೆಯಿತು. ಅಲ್ಲದೇ ನಾಗರೀಕ ಸೇವೆ ಮತ್ತು ಡಿಫೆನ್ಸ್ ಸಮಾವೇಶ, ಎಲ್ಲಾ ಕೊಡವ ಸಮಾಜಗಳ ಅಧ್ಯಕ್ಷರ ಸಮಾವೇಶ, ಗನ್ ಸಮಾವೇಶವೂ ನಡೆಯಿತು. ಸಮಾರೋಪ ಸಮಾರಂಭದಲ್ಲಿ ಗಣ್ಯರು, ದೇಶ ತಕ್ಕರು ಹಾಗೂ ಕೊಡವ ಸಮಾಜದ ಪ್ರಮುಖರು ಪಾಲ್ಗೊಂಡಿದ್ದರು. ಡಿಜೆ ನೈಟ್ ಮೂಲಕ ಕಾರ್ಯಕ್ರಮ ಕೊನೆಗೊಂಡಿತು. ಸಾವಿರಾರು ಮಂದಿ ಡಿಜೆ ನೈಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.