ಸಾಂಸ್ಕೃತಿಕ ಕಾರ್ಯಕ್ರಮಗಳು ಅವಶ್ಯಕ

| Published : Nov 21 2025, 02:00 AM IST

ಸಾರಾಂಶ

ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಕಡ್ಡಾಯವಾಗಿ ಭಾಗವಹಿಸುವ ಮೂಲಕ ನಾಡಿಗೆ ಕೀರ್ತಿ ತರಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಅಶೋಕ್ ಕುಮಾರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿರಾ

ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಕಡ್ಡಾಯವಾಗಿ ಭಾಗವಹಿಸುವ ಮೂಲಕ ನಾಡಿಗೆ ಕೀರ್ತಿ ತರಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಅಶೋಕ್ ಕುಮಾರ್ ತಿಳಿಸಿದರು.

ಅವರು ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕಿನ ಪ ಪೂ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು. ಸಿರಾ ಸೀಮೆ ಸಾಹಿತ್ಯ, ಜಾನಪದ, ಸಂಗೀತ, ರಂಗಕಲೆ, ಯಕ್ಷಗಾನ ಬಯಲಾಟ, ಜಾನಪದ ಕಾವ್ಯ, ಜುಂಜಪ್ಪನ ಕಾವ್ಯ, ನಮ್ಮ ಶಿರಾಕ್ಕೆ ಮುಕುಟ ಪ್ರಾಯವಾಗಿದೆ. ಸಾಹಿತ್ಯದಲ್ಲಿ ನಾಡೋಜ ಬರಗೂರು ರಾಮಚಂದ್ರಪ್ಪ ಅವರು ಶಿರಾ ಸೀಮೆಯ ಸಾಹಿತ್ಯ ಮತ್ತು ಸಿನಿಮಾ ಸೊಗಡನ್ನು ಅಂತಾರಾಷ್ಟೀಯ ಮಟ್ಟಕ್ಕೆ ಎತ್ತರಿಸಿದ್ದಾರೆ. ಶಿಕ್ಷಣ ಎಂದರೆ ನಾಲ್ಕು ಕೋಣೆಗಳ ನಡುವೆ ಅಂಕಾಧಾರಿತವಾಗಿ ಕಲಿಯುವುದಷ್ಟೆ ಅಲ್ಲ. ಇದರ ಜೊತೆಗೆ ಸಾಹಿತ್ಯ, ಸಂಗೀತ, ಜಾನಪದ ಹಾಡು, ಜಾನಪದ ನೃತ್ಯ, ಪ್ರಬಂಧ, ಚರ್ಚಾಸ್ಪರ್ಧೆ, ರಸಪ್ರಶ್ನೆ ಏಕಪಾತ್ರಾಭಿನಯ, ಸ್ಪರ್ಧೆಗಳು, ಎನ್ಎಸ್ಎಸ್, ಸೇವಾದಳ, ರೆಡ್ ಕ್ರಾಸ್, ಕ್ರೀಡೆ ಇವೇ ಮುಂತಾದವುಗಳು ನಿಮ್ಮನ್ನು ಸಮಾಜದಲ್ಲಿ ಸರ್ವತೋಮುಖವಾಗಿ ಬೆಳೆಯಲು ಕಾರಣವಾಗುವವು ಎಂದರು.

ಪ್ರಾಂಶುಪಾಲರಾದ ಚಂದ್ರಯ್ಯಬೆಳವಾಡಿ ಮಾತನಾಡಿ ,ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸಭಾಕಂಪನ ನಿವಾರಿಸಿ ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಸಹಕಾರಿಯಾಗಿವೆ. ಬಹುತ್ವ ಭಾರತದಲ್ಲಿ ಹೇಗೆ ಬದುಕಬೇಕೆಂಬುದನ್ನು ತಿಳಿಸುತ್ತವೆ. ಸಾಹಿತ್ಯ, ಕಲೆಗಳು ನಮ್ಮಲ್ಲಿ ಸಹಬಾಳ್ವೆ ಮೂಡಿಸುವಂತಾಗಬೇಕೆಂದರು.

ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಭಾನುಪ್ರಕಾಶ್, ವಿಶ್ರಾಂತ ಪ್ರಾಂಶುಪಾಲ ಚಂದ್ರಶೇಖರ ರೆಡ್ಡಿ, ಪ್ರಾಂಶುಪಾಲರಾದ ಧನಶಂಕರ, ಜೈರಾಂ, ರಂಗರಾವ್, ಈರಣ್ಣ, ವಸಂತಕುಮಾರ್ ಹಾಗೂ ಉಪನ್ಯಾಸಕರಾದ ಮೆಣಸಗಿ, ಸತೀಶ್ ಕುಮಾರ್, ಆಯ್ತಾರಲಿಂಗಪ್ಪ, ಶಿವಶಂಕರ್ ಸೇರಿದಂತೆ ಹಲವರು ಹಾಜರಿದ್ದರು.