ಮಂಡ್ಯದಲ್ಲಿ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಪ್ರತಿಭಟನೆ

| Published : Sep 10 2024, 01:45 AM IST

ಮಂಡ್ಯದಲ್ಲಿ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಜಿಲ್ಲೆಯಲ್ಲಿ ನಡೆಯುವ ಎಲ್ಲಾ ರೀತಿಯ ಸರ್ಕಾರಿ ಕಾರ್ಯಕ್ರಮ, ಜಯಂತಿ, ಸಮಾವೇಶ, ಸಮ್ಮೇಳನ, ಉತ್ಸವಗಳಲ್ಲಿ ಸ್ಥಳೀಯ ಕಲಾವಿದರಿಗೆ ಮೊದಲ ಆದ್ಯತೆ ನೀಡಬೇಕು. ಕಲಾವಿದರಿಂದ ಅರ್ಜಿ ಆಹ್ವಾನಿಸುವ ಬದಲು ಕಲಾವಿದರು, ಕಲಾತಂಡಗಳ ಪಟ್ಟಿ ಮಾಡಿ ಎಲ್ಲರಿಗೂ ಸಮಾನಾಂತರವಾಗಿ ಕಾರ್ಯಕ್ರಮ ನೀಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಗಗನಚುಕ್ಕಿ ಜಲಪಾತೋತ್ಸವ ಹಾಗೂ ಶ್ರೀರಂಗಪಟ್ಟಣ ದಸರಾ ಮಹೋತ್ಸವದಲ್ಲಿ ಸ್ಥಳೀಯ ಕಲಾವಿದರನ್ನು ಕಡೆಗಣಿಸಿರುವುದನ್ನು ಖಂಡಿಸಿ ಕಲಾವಿದರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ವಿವಿಧ ಕಲಾ ಪ್ರಕಾರಗಳ ಕಲಾವಿದರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹಬ್ಬ, ಜಯಂತಿ, ಸಮ್ಮೇಳನ ಹಾಗೂ ಉತ್ಸವಗಳಲ್ಲಿ ಜಿಲ್ಲೆಯ ಕಲಾವಿದರನ್ನು ಕಡೆಗಣಿಸಿ ಇವೆಂಟ್ಸ್ ಮ್ಯಾನೇಜ್ಮೆಂಟ್‌ಗಳಿಗೆ ಕಾರ್ಯಕ್ರಮಗಳನ್ನು ಒಪ್ಪಿಸುವ ಮೂಲಕ ಅನ್ಯಾಯ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಜಿಲ್ಲೆಯಲ್ಲಿ ನಡೆಯುವ ಎಲ್ಲಾ ರೀತಿಯ ಸರ್ಕಾರಿ ಕಾರ್ಯಕ್ರಮ, ಜಯಂತಿ, ಸಮಾವೇಶ, ಸಮ್ಮೇಳನ, ಉತ್ಸವಗಳಲ್ಲಿ ಸ್ಥಳೀಯ ಕಲಾವಿದರಿಗೆ ಮೊದಲ ಆದ್ಯತೆ ನೀಡಬೇಕು. ಕಲಾವಿದರಿಂದ ಅರ್ಜಿ ಆಹ್ವಾನಿಸುವ ಬದಲು ಕಲಾವಿದರು, ಕಲಾತಂಡಗಳ ಪಟ್ಟಿ ಮಾಡಿ ಎಲ್ಲರಿಗೂ ಸಮಾನಾಂತರವಾಗಿ ಕಾರ್ಯಕ್ರಮ ನೀಡಬೇಕು. ಸಂಭಾವನೆ ವಿಚಾರದಲ್ಲಿ ಶೋಷಣೆ ತಪ್ಪಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿವಿಧ ಕಲಾ ಪ್ರಕಾರಗಳಿಗೆ ನೀಡುತ್ತಿರುವ ಸಂಭಾವನೆ ಕ್ರಮ ಅನುಸರಿಸಿ ಸಂಭಾವನೆ ನೀಡಬೇಕು. ಕಾರ್ಯಕ್ರಮ ನಡೆದ 15 ದಿನದ ಒಳಗಾಗಿ ಸಂಭಾವನೆ ನೀಡಬೇಕು. ಕಲಾ ಪ್ರದರ್ಶನದ ವೇಳೆ ಕಲಾವಿದರಿಗೆ ಕುಡಿಯುವ ನೀರು, ಊಟ, ವಸತಿ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದರು.

ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಕಲಾವಿದರಿಗೆ ನೀಡುವ ಸ್ಥಾನಮಾನ ಗೌರವವನ್ನು ಸ್ಥಳೀಯ ಕಲಾವಿದರಿಗೂ ನೀಡುವುದು. ಕಲಾವಿದ, ಕಲಾತಂಡಗಳನ್ನು ನೇರ ಸಂಪರ್ಕಿಸಿ ಕಾರ್ಯಕ್ರಮ ನೀಡುವ ಮೂಲಕ ಮಧ್ಯವರ್ತಿ ಹಾವಳಿ ತಪ್ಪಿಸಬೇಕು. ಜಿಲ್ಲೆಯ ಜನಪ್ರತಿನಿಧಿಗಳು ವಿಶೇಷ ಪ್ರೋತ್ಸಾಹ ನೀಡುವ ಮೂಲಕ ರಾಜ್ಯ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಉತ್ಸವಗಳಿಗೆ ಜಿಲ್ಲೆಯ ಕಲಾವಿದರನ್ನು ಶಿಫಾರಸು ಮಾಡುವುದು. ಶಾಮಿಯಾನ, ಧ್ವನಿ ವರ್ದಕ, ದೀಪಾಲಂಕಾರ, ವಸ್ರಲಂಕಾರ, ಪೌರಾಣಿಕ, ಸಾಮಾಜಿಕ ಡ್ರಾಮಾ ಸೀನರಿ ಮಾಲೀಕರು ಕಲಾವಿದರಿಗೆ ಜೀವನ ಭದ್ರತೆ ಇಲ್ಲದೆ ಇರುವುದರಿಂದ ಇವರಿಗೆ ಹೆಚ್ಚು ಉತ್ತೇಜನ ನೀಡಬೇಕು ಎಂದು ಒತ್ತಾಯಿಸಿದರು.

ಕಲಾವಿದರಾದ ಸಂತೆ ಕಸಲಗೆರೆ ಬಸವರಾಜು, ಹನಿಯಂಬಾಡಿ ಶೇಖರ್, ಎಚ್‌.ಪಿ.ವೈರಮುಡಿ, ತಗ್ಗಹಳ್ಳಿ ವೆಂಕಟೇಶ್, ಸಿ.ಕುಮಾರಿ, ಲಂಕೇಶ್, ಕಾರಸವಾಡಿ ಮಹದೇವ, ಕೃಷ್ಣೇಗೌಡ, ಸುರೇಶ್, ಬೂದನೂರು ಸ್ವಾಮಿ ಭಾಗವಹಿಸಿದ್ದರು.