ಸಾರಾಂಶ
ಹೊನ್ನಾವರ: ತಾಲೂಕಿನ ಗುಣವಂತೆಯ ಯಕ್ಷಾಂಗಣದಲ್ಲಿ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ದ್ವಿತೀಯ ದಿನದ ಸಭಾ ಕಾರ್ಯಕ್ರಮವನ್ನು ಭಾನುವಾರ ಸಾಂಪ್ರದಾಯಿಕ ಯಕ್ಷಗಾನ ಪದ್ಯದೊಂದಿಗೆ ದೀಪ ಬೆಳಗಿಸಿ ಉದ್ಘಾಟಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಕೃಷ್ಣಮೂರ್ತಿ ಮಂಜರು ಮಾತನಾಡಿ, ಯಕ್ಷಗಾನ ಒಂದು ಮಹಾ ಕಲೆ. ಇದನ್ನು ರಕ್ಷಿಸಿ, ಉಳಿಸಿ, ಬೆಳೆಸಿದ ಕೀರ್ತಿ ಈ ಮಂಡಳಿಗೆ ಸಲ್ಲುತ್ತದೆ. ಯಾವ ರೀತಿ ನೆರಳು ಮತ್ತು ಹಣ್ಣುಗಳನ್ನು ವೃಕ್ಷ ಕೊಡುತ್ತದೆಯೋ, ಅದೇ ರೀತಿ ಈ ನಾಟ್ಯೋತ್ಸವ ಸಮಾಜಕ್ಕೆ ಸಾಂಸ್ಕೃತಿಕ ನೆರಳನ್ನು ಮತ್ತು ಪಾರಂಪರಿಕ ಕಲೆಗಳ ವೈಭವವನ್ನು ನೀಡುತ್ತದೆ ಎಂದರು.ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿಯನ್ನು ಖ್ಯಾತ ಭಾಗವತರಾದ ವಿದ್ವಾನ್ ಗಣಪತಿ ಭಟ್ಟರಿಗೆ ನೀಡಿ ಪುರಸ್ಕರಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಗಣಪತಿ ಭಟ್ಟರು ಮಾತನಾಡಿ, ಶ್ರೇಷ್ಠ ಕಲಾವಿದರ ಹೆಸರಿನಲ್ಲಿ ಕೊಡಮಾಡಿದ ಪ್ರಶಸ್ತಿ ಶ್ರೇಷ್ಠವಾದದ್ದು ಮತ್ತು ಮೌಲ್ಯವನ್ನು ಹೊಂದಿರುವಂಥದ್ದು ಎಂದರು.
ಪ್ರತಿ ಸಾಧಕನಿಗೆ ಸಾಧನೆ, ಸಿದ್ದಿ ಮತ್ತು ಅದೃಷ್ಟದ ನೆಲೆಯಲ್ಲಿ ಸಮಾಜಮುಖಿ ಪುರಸ್ಕಾರಗಳು ದೊರೆಯುತ್ತದೆ. ಈ ಪ್ರಶಸ್ತಿಯಿಂದ ಜವಾಬ್ದಾರಿ ಹೆಚ್ಚಿದೆ ಎಂಬ ಭಾವದೊಂದಿಗೆ ಪ್ರೀತಿಯಿಂದ ಸ್ವೀಕರಿಸುತ್ತೇನೆ ಎಂದರು.ಅಖಿಲ ಹವ್ಯಕ ಮಹಾಸಭಾ ಬೆಂಗಳೂರು ಅಧ್ಯಕ್ಷ ಡಾ.ಗಿರಿಧರ್ ಕಜೆ ಕಲಾಪೋಷಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಧರ್ಮದ ಕಾರ್ಯವನ್ನು ಮಾಡಿದ ಪ್ರತಿ ಕುಟುಂಬವು ನಿರಂತರವಾಗಿ ಮುಂದುವರೆಯುತ್ತದೆ. ಈ ಮೇಳ ಸಮಾಜಕ್ಕೆ ಸಂಸ್ಕೃತಿ, ಸಂಸ್ಕಾರದ ಪಾಠ ನೀಡಿದೆ. ನೂರಾರು ಕಲಾವಿದರಿಗೆ ಆಶ್ರಯ ನೀಡಿದ ಹೆಮ್ಮೆ ಈ ಮೇಳಕ್ಕಿದೆ ಎಂದರು.
ಕಲಾಪೋಷಕ ಪ್ರಶಸ್ತಿ ಪಡೆದ ಇನ್ನೋರ್ವ ಸಾಧಕ ಪ್ರದೀಪಕುಮಾರ ಕಲ್ಕೂರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಈ ಮೇಳದೊಂದಿಗೆ ನಾಲ್ಕು ದಶಕಗಳ ಸಂಬಂಧ ಇಟ್ಟುಕೊಂಡಿದ್ದೇನೆ. ಈ ಕ್ಷೇತ್ರ ಕಲಾ ಕ್ಷೇತ್ರವಾಗಿದೆ. ಈ ಸಾನಿಧ್ಯ ಪವಿತ್ರವಾಗಿದೆ. ಸಮಾಜ ಭಾಷಾ ಶುದ್ಧತೆಯನ್ನು, ಜೀವನ ಶುದ್ಧತೆಯನ್ನು ಹೆಚ್ಚಿಸಿಕೊಳ್ಳಬೇಕಾದಲ್ಲಿ ಯಕ್ಷಗಾನದೊಂದಿಗೆ ಸಂಬಂಧ ಬೆಳೆಸಿಕೊಳ್ಳಬೇಕು ಎಂದರು.ರಾಷ್ಟ್ರೀಯ ನಾಟ್ಯೋತ್ಸವ ಸಮಾನ ಸ್ವೀಕರಿಸಿ ಮಾತನಾಡಿದ ಲೇಖಕಿ ಭುವನೇಶ್ವರಿ ಹೆಗಡೆ ಮಾತನಾಡಿ, ಸ್ತ್ರೀವೇಷದ ರೀತಿ, ನೀತಿಯನ್ನು ಗಜಾನನ ಹೆಗಡೆಯವರ ಸಂಪರ್ಕದಿಂದ, ಮಾತಿನಲ್ಲಿ ಧೈರ್ಯ ತುಂಬುಕೊಳ್ಳುವ ಸಾಹಸವನ್ನು ಮಹಾಬಲ ಹೆಗಡೆಯವರಿಂದಲೂ, ಆತ್ಮೀಯತೆಯ ಭಾವವನ್ನು ಶಂಭು ಹೆಗಡೆಯವರಿಂದಲೂ ಕಲಿತು ನಾನು ಈ ಸ್ಥಾನಕ್ಕೆ ಬಂದಿದ್ದೇನೆ ಎಂದರು.
ಆಂಧ್ರಪ್ರದೇಶದ ದ್ರಾವಿಡ ವಿಶ್ವವಿದ್ಯಾನಿಲಯದ ಡಿನ್ ಆಗಿರುವ ಪ್ರೊಫೆಸರ್ ಎಂ.ಎನ್. ವೆಂಕಟೇಶ, ಡಾ.ಮಿಲನ್ ಕುಲಕರ್ಣಿ, ನರಸಿಂಹ ಹೆಗಡೆ ಮಾತನಾಡಿದರು. ಕಾರ್ಯಧ್ಯಕ್ಷರಾದ ಲಕ್ಷ್ಮೀನಾರಾಯಣ ಕಾಶಿ ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಹೆಗಡೆ ವಂದಿಸಿದರು. ಎಲ್.ಎಂ. ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ವಿದುಷಿ ವಿಧಾಲಾಲ್ ಅವರಿಂದ ಕಥಕ್ ನೃತ್ಯ ಮತ್ತು ಡಾ. ವಿದ್ಯಾಭೂಷಣ, ಬೆಂಗಳೂರು ಅವರಿಂದ ಭಕ್ತಿ ಸಂಗೀತ ನಡೆಯಿತು.