ಸಾರಾಂಶ
ಕನ್ನಡಪ್ರಭ ವಾರ್ತೆ ನಾಲತವಾಡ
ನಾಲತವಾಡ ನಾಡಿನಲ್ಲಿ ಒಂದಾಗಿ ಬಾಳುವ ಸಂಸ್ಕೃತಿ ಇದೆ, ಸಾಮರಸ್ಯ ನಮ್ಮ ಊರಿನ ಹೆಗ್ಗಳಿಕೆ. ನಿಜವಾದ ಧರ್ಮ ನಾಲತವಾಡದಲ್ಲಿ ಕಾಣಿಸಿಕೊಳ್ಳುತ್ತದೆ. ಇಲ್ಲಿ ಯಾವುದೇ ಭೇದಭಾವವಿಲ್ಲ ಎಂದು ಕೆಎಸ್‌ಡಿಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್ ನಾಡಗೌಡ ಅಪ್ಪಾಜಿ ಹೇಳಿದರು.ಪಟ್ಟಣದ ಬಸವೇಶ್ವರ ವೃತ್ತದ ಬಳಿ ಅಲ್ ಮದದ್ ಫೌಂಡೇಷನ್‌ನಿಂದ ಈದ್ ಮೀಲಾದ್ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಭಾವೈಕ್ಯತೆಯ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಲಿಯುಗದಲ್ಲಿ ವೈಜ್ಞಾನಿಕವಾಗಿ ವಿಚಾರ ಮಾಡಿದರೆ ಪ್ರತಿಯೊಬ್ಬರು ಅಂಗಾಂಗ ಒಂದೇ ತರಹ ಇರುತ್ತದೆ. ಆದರೆ ದೇವರ ಹೆಸರಿನಲ್ಲಿ ಶೋಷಣೆ, ಅಸಮಾನತೆ ನಡೆಯುತ್ತವೆ. ಧರ್ಮ ಅಥವಾ ರಾಜಕೀಯದ ಹೆಸರಿನಲ್ಲಿ ನಡೆಯುವ ದೌರ್ಜನ್ಯಕ್ಕೆ ವಿರೋಧವಾಗಿ ನಿಂತವರೇ ಇತಿಹಾಸದಲ್ಲಿ ಹೆಸರು ಮಾಡುತ್ತಾರೆ. ಎಲ್ಲರೂ ಸುಖ-ಶಾಂತಿಯಿಂದ ಬದುಕಬೇಕಾದರೆ ಕಾಯಕವೇ ಕೈಲಾಸ ಎಂಬ ನಂಬಿಕೆ ಮರೆಯಬಾರದು. ಕಾಯಕದಲ್ಲಿ ತಲ್ಲೀನರಾಗುವ ಮೂಲಕ ದೇವರ ಧ್ಯಾನ ಸಾಧ್ಯ. ಈ ದೇಶಕ್ಕೆ ಯಾವ ಧರ್ಮದವರೇ ಬಂದರೂ, ಅವರು ಇಲ್ಲಿನ ಸಂಸ್ಕೃತಿಯನ್ನು ಒಪ್ಪಿಕೊಂಡೇ ಬದುಕಿದ್ದಾರೆ. ನಾವೂ ಅದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.ಆಲಮೇಲದ ಮಲ್ಲಿಬೊಮ್ಮ ಶ್ರೀಗಳು ಆಶೀರ್ವಚನ ನೀಡಿ, ನಾಲತವಾಡ ನಾಡು ಭಾವೈಕ್ಯತೆಯ ನಾಡಾಗಿದೆ.ಎಲ್ಲರ ಮನಸ್ಸುಗಳನ್ನು ಕೂಡಿ ಕಟ್ಟುವಂತಹ ಕೆಲಸವಾಗಬೇಕು. ದೇಶದಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತ್, ಶಿಖ್, ಬೌದ್ಧ, ಅಸ್ಪೃಶ್ಯರು ಇದ್ದಾರೆ. ಈ ದೇಶದಲ್ಲಿ ಹಿಂದುಗಳಿಗೆ ಭಗವದ್ಗೀತೆ, ಶಾಸ್ತ್ರ-ಪುರಾಣ ಇದೆ, ಮುಸ್ಲಿಂರಿಗೆ ಕುರಾನ್ ಇದೆ. ಎಲ್ಲದರ ಮೂಲ ಪ್ರೀತಿಯೇ. ದೇವರು ಎಂದರೆ ದೇಹವಿಲ್ಲದ, ರೂಪವಿಲ್ಲದವ, ಬಣ್ಣ-ಉಡುಪುಗಳನ್ನು ನಾವು ಕಲ್ಪಿಸಿಕೊಂಡದ್ದು. ಮನುಷ್ಯ ದೊಡ್ಡವನಲ್ಲ, ಮಾನವೀಯತೆಯೇ ದೊಡ್ಡದು ಎಂಬ ಸಂದೇಶ ನೀಡಿದರು.ಪ್ರವಚನಕಾರ ಶಾಮಿದ್ ಅಲಿ ಹಿರೇಮನ್ನಾಪೂರ ಮಾತನಾಡಿ, ಸಹಾಯ ಮಾಡುವಾಗ ಧರ್ಮವನ್ನು ನೋಡುವುದಲ್ಲ, ಮನುಷ್ಯತ್ವ ನೋಡಬೇಕು ಎಂದು ಮಹಮ್ಮದ್ ಪೈಗಂಬರರು ಹೇಳಿದ್ದಾರೆ. ಜಗತ್ತಿನ ಸೃಷ್ಟಿಕರ್ತ ಒಬ್ಬನೇ ದೇವರು, ಆ ದೇವರಿಗೆ ಹುಟ್ಟು ಇಲ್ಲ, ಸಾವು ಇಲ್ಲ, ಹಸಿವು ಇಲ್ಲ, ನಿದ್ರೆ ಇಲ್ಲ ಎಂಬ ಸಂದೇಶ ಪೈಗಂಬರ್ ನೀಡಿದ್ದಾರೆ. ಇದೇ ಸಂದೇಶವನ್ನು ಬಸವಣ್ಣನವರೂ ನೀಡಿದ್ದಾರೆ, ಜಗತ್ತಿನಲ್ಲಿ ಇರುವವರು ಎಲ್ಲರು ನನ್ನ ಸಹೋದರರು ಎಂದು ಅವರು ಹೇಳಿದ್ದಾರೆ. ಧರ್ಮದಲ್ಲಿ ಅನುಮಾನಗಳು ಕಳಚಬೇಕಾದರೆ ಹಬ್ಬಗಳಲ್ಲಿ ಪರಸ್ಪರ ಸೇರಿ ಸೌಹಾರ್ದಯುವಾಗಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಹೇಳಿದರು.ಮನಗೂಳಿಯ ವೀರಶಾಂತಿ ಶ್ರೀಗಳು, ಮಹ್ಮದ ಅಯಾಜ ಫೈಜಿಯಾಬಾದಿ ಪ್ರವಾದಿ ಜೀವನ ಚರಿತ್ರೆ ಕುರಿತು ಮಾತನಾಡಿದರು. ಅಂಜುಮನ್ ಅಧ್ಯಕ್ಷ ಲಾಳೇಮಶಾಕ ಅವಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈದ್ ಮಿಲಾದ್ ಪ್ರಯುಕ್ತ ಹಮ್ಮಿಕೊಂಡ ರಕ್ತದಾನ ಶೀಬಿರದಲ್ಲಿ ಪಾಲ್ಗೊಂಡ ಜನರಿಗೆ ಬ್ಯಾಗ್ ಹಾಗೂ ಪ್ರಶಸ್ತಿ ಪತ್ರ ವಿತರಿಸಿದರು, ಬಸವರಾಜ ಹಾದಿಮನಿ ನಿರೂಪಿಸಿದರು. ಮೌಲಾನಾ ಮಹ್ಮದ ಇಸ್ಮಾಯಿಲ್ ಮುಲ್ಲಾ ಕುರಾನ್ ಪಠಿಸಿದರು.ಈ ವೇಳೆ ಗುರುಪ್ರಸಾದ ದೇಶಮುಖ, ಅಮರ ದೇಶಮುಖ, ಪಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಇಲಕಲ್, ಉಪಾಧ್ಯಕ್ಷ ಬಸವರಾಜ ಗಂಗನಗೌಡರ, ಅಂಜುಮನ್ ಅಧ್ಯಕ್ಷ ಲಾಳೇಮಶಾಕ ಅವಟಿ, ಉಪಾಧ್ಯಕ್ಷ ಬಾಷಾಸಾಬ ತೆಗ್ಗಿನಮನಿ, ಮುಸ್ಲಿಂ ಮುಖಂಡರಾದ ಅಬ್ದುಲ್ ಗನಿ ಖಾಜಿ, ಇಬ್ರಾಹಿಂ ಮುಲ್ಲಾ, ಅಯ್ಯುಬ್ ಮನಿಯಾರ ಸೇರಿದಂತೆ ಹಲವರು ಭಾಗವಹಿಸಿದ್ದರು.ಪೋಟೋ:22ಎನ್.ಎಲ್ಟಿ1 ಸ್ಥಳಿಯ ಬಸವೇಶ್ವರ ವೃತ್ತದ ಬಳಿ ರವಿವಾರ ಸಾಯಂಕಾಲ ಈದ ಮೀಲಾದ ಪ್ರಯುಕ್ತ ಹಮ್ಮಿಕೊಂಡ ಭಾವೈಕ್ಯತೆ ಪ್ರವಚನವನ್ನು ಕೆಎಸ್‌ಡಿಎಲ್ ನಿಗಮದ ಅಧ್ಯಕ್ಷ, ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಸಸಿಗೆ ನೀರು ಹಾಕುವ ಮೂಲಕ ಚಾಲನೇ ನೀಡಿದರು.