ಜಾತ್ರಾ ಮಹೋತ್ಸವಗಳಿಂದ ಸಂಸ್ಕೃತಿ ಜೀವಂತ

| Published : Oct 24 2024, 12:39 AM IST

ಸಾರಾಂಶ

ಜಾತ್ರಾ ಮಹೋತ್ಸವಗಳಿಂದ ಸಮಾಜದ ಜನರೊಟ್ಟಿಗೆ ಬೆರೆತು ಒಳ್ಳೆಯ ಸಾಮರಸ್ಯ ಜೀವನ ನಡೆಸಬಹುದಾಗಿದೆ.

ಧಾರವಾಡ:

ಜಾತ್ರಾ ಮಹೋತ್ಸವಗಳಿಂದ ನಮ್ಮ ಪರಂಪರೆ, ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಜೀವಂತವಾಗಿಡಲು ಸಹಕಾರಿಯಾಗಿದೆ. ಹಬ್ಬ ಹರಿದಿನ, ಜಾತ್ರೆಗಳಲ್ಲಿ ತನ್ನಿಂತಾನೆ ಮನಸ್ಸು ಉಲ್ಲಾಸಗೊಳ್ಳುತ್ತದೆ ಎಂದು ಪಾಲಿಕೆ ಸದಸ್ಯೆ ಅನಿತಾ ಚಳಗೇರಿ ಹೇಳಿದರು.

ಇಲ್ಲಿಯ ಕುಮಾರೇಶ್ವರ ನಗರದ ಕರಿಯಮ್ಮ ದೇವಿ ದೇವಸ್ಥಾನ ನಿರ್ವಹಣಾ ಸಂಘವು ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಏರ್ಪಡಿಸಿದ್ದ ಸಂಗೀತ ನೃತ್ಯೋತ್ಸವ ಉದ್ಘಾಟಿಸಿದ ಅವರು, ಜಾತ್ರಾ ಮಹೋತ್ಸವಗಳಿಂದ ಸಮಾಜದ ಜನರೊಟ್ಟಿಗೆ ಬೆರೆತು ಒಳ್ಳೆಯ ಸಾಮರಸ್ಯ ಜೀವನ ನಡೆಸಬಹುದಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರಿಯಮ್ಮ ದೇವಸ್ಥಾನ ನಿರ್ವಹಣಾ ಸಂಘದ ಅಧ್ಯಕ್ಷ ಪ್ರೊ. ಜಿ.ಎನ್.ವಿ. ಪಾಟೀಲ್, ದೇವಸ್ಥಾನದ ಉಗಮ, ಅದರ ಅಭಿವೃದ್ಧಿ ಕುರಿತು ವಿವರಿಸಿದರು. ಬಸವರಾಜ ಕೊಂಗವಾಡ, ಎಸ್.ಎಸ್. ನಿಗದಿ, ಎ.ವಿ. ಗೊಬ್ಬಣ್ಣವರ, ಜೆ.ವೈ. ತೋಟದ, ಪುಷ್ಪಾವತಿ ಚವ್ಹಾಣ, ಎಸ್.ಎಸ್. ಹೊಳೆಯಣ್ಣವರ ಇದ್ದರು. ಆಶಾ ನಾಯಕ ಪ್ರಾರ್ಥಿಸಿದರು, ಪ್ರಕಾಶ ಬಾಳಿಕಾಯಿ ಸ್ವಾಗತಿಸಿದರು, ಶಂಕರ ಗಸ್ತಿ ನಿರೂಪಿಸಿದರು, ನಂದಾ ಗುಳೇದಗುಡ್ಡ ವಂದಿಸಿದರು.

ನಂತರ ಜರುಗಿದ ಸಂಗೀತ ನೃತ್ಯೋತ್ಸವದಲ್ಲಿ ಡಾ. ಆನಂದಪ್ಪ ಜೋಗಿ ಅವರ ಜಾನಪದ ಗಾಯನ, ಡಾ. ಗುರುಬಸವ ಮಹಾಮನೆ ಹಾಗೂ ಮಾ. ಸಾತ್ವಿಕ ಮಹಾಮನೆ ಅವರ ವಯೋಲಿನ್ ಜುಗಲಬಂಧಿಯಲ್ಲಿ ಭಜನ್‌ಗಳನ್ನು ಪ್ರಸ್ತುತಪಡಿಸಿದರು. ವಿದುಷಿ ಭಾರ್ಗವಿ ಕುಲಕರ್ಣಿ, ಬಸವರಾಜ ಹೂಗಾರ, ಖುಶಿ ಡವಳಿ ಅವರ ಭಕ್ತಿ ಸಂಗೀತ ಕಾರ್ಯಕ್ರಮಕ್ಕೆ ತಬಲಾದಲ್ಲಿ ಮಳೆಮಲ್ಲೇಶ ಹೂಗಾರ, ಹಾರ್ಮೊನಿಯಂದಲ್ಲಿ ವಿನೋದ ಪಾಟೀಲ ಸಮರ್ಥ ಸಾಥ್ ನೀಡಿದರು.

ದರ್ಬಾರ್ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಗಾಯನ ಜರುಗಿತು, ಲಯ ಫೌಂಡೇಶನ್‌ದ ಹರ್ಷಿಕಾ ಮತ್ತು ವೇದಿಕಾ ಅವರಿಂದ ನೃತ್ಯ ಕಾರ್ಯಕ್ರಮ ಜರುಗಿದವು.

ಕಾರ್ಯದರ್ಶಿ ಜಿ.ಎಂ. ಹುಲ್ಲೂರ, ಪ್ರಭು ಹಿರೇಮಠ, ಡಾ. ಸಂಗಮೇಶ ಸವದತ್ತಿಮಠ, ಬಿ.ಎ. ಹಿರೇಮಠ, ಸಚಿನ ಉಂಡಾಳೆ, ಎನ್.ಜಿ. ವಾರಿ, ಎಂ.ಎಸ್. ರಾಣೆ, ರಾಜು ಚಂದನಕರ, ಎನ್.ಜಿ. ಅಮೋಗಿಮಠ ಹೊಸಮನಿ, ಆತ್ಮಾನಂದ ಕಬ್ಬೂರ, ಗುರುರಾಜ ಅಕ್ಕಿ ಇದ್ದರು.