ಸಾರಾಂಶ
ಕನ್ನಡಪ್ರಭ ವಾರ್ತೆ ಚಡಚಣ
ಧರ್ಮ, ಸಂಸ್ಕೃತಿಯ ಆಚರಣೆ ಮೂಲಕ ಪ್ರತಿಯೊಬ್ಬರೂ ಭಾರತದ ಭವ್ಯ ಪರಂಪರೆಯನ್ನು ಉಳಿಸಲು ಪಣ ತೊಡಬೇಕು ಎಂದು ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಕರೆ ನೀಡಿದರು.ತಾಲೂಕಿನ ಜಿಗಜೇವಣಿ ಗ್ರಾಮದಲ್ಲಿ ಸತ್ಯ ಸದ್ಗುರು ಸತ್ಯಪ್ಪ ಮಹಾರಾಜರ 5ನೇ ಪುಣ್ಯಸ್ಮರಣೆ ನಿಮಿತ್ತ ಹಮ್ಮಿಕೊಂಡಿದ್ದ ಧರ್ಮಸಭೆ ಹಾಗೂ ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ನಾಡಿನಲ್ಲಿ ವಿವಿಧತೆಯಲ್ಲೂ ಏಕತೆಯನ್ನು ಕಾಣಬಹುದಾಗಿದೆ. ಇಲ್ಲಿ ಸರ್ವ ಜನಾಂಗದವರೂ ಪ್ರೀತಿ, ಸಹಬಾಳ್ವೆಯಿಂದ ಬದುಕನ್ನು ನಡೆಸುತ್ತಿರುವುದು ಅಭಿಮಾನದ ಸಂಗತಿ. ನಮ್ಮ ಬದುಕಿಗೆ ಸಂಪತ್ತಿಗಿಂತ ಸಂಸ್ಕಾರ ಮುಖ್ಯ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕಾಗಿದೆ. ಜೀವನದಲ್ಲಿ ಧೈರ್ಯ ಮತ್ತು ಚಲನಶೀಲತೆ ಮುಖ್ಯ. ಆಧುನಿಕ ದಿನಗಳಲ್ಲೂ ಧರ್ಮಾಚರಣೆ ಮೈಗೂಡಿಸಿಕೊಂಡು ನಮ್ಮ ದೇಶದ ಭವ್ಯ ಪರಂಪರೆಯನ್ನು ಉಳಿಸಲು ಪ್ರಯತ್ನಿಸುತ್ತಿರುವ ಜನರೇ ಧನ್ಯರು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ತಡವಲಗಾದ ರಾಚೋಟೇಶ್ವರ ಶಿವಾಚಾರ್ಯರು ಮಾತನಾಡಿ, ಎಷ್ಟೇ ಸಂಪತ್ತಿದ್ದರೂ ಮಾನವೀಯ ಮೌಲ್ಯವಿಲ್ಲದ ಜೀವನ ನಿರರ್ಥಕವಾದದ್ದು. ನಮ್ಮ ಜೀವನ ಕೇವಲ ಹಣದಿಂದ ಸಾಗುವ ದೋಣಿಯಲ್ಲ. ಅದಕ್ಕೆ ಮಾನವೀಯತೆ ಎಂಬ ನಾವಿಕ, ದಾನ, ಧರ್ಮ ಎಂಬ ಹುಟ್ಟುಗಳು ಕೂಡ ಅಗತ್ಯವಾಗಿ ಬೇಕಾಗಿವೆ ಎಂದು ಹೇಳಿದರು. ಹಣದಿಂದ ಅಧಿಕಾರ ಸಿಗಬಹುದು. ಆದರೆ, ಗೌರವ ಸಿಗಬೇಕೆಂದರೆ ಧರ್ಮಾಚರಣೆಯೇ ಮುಖ್ಯ ಎಂದು ತಿಳಿಸಿದರು.
ಆಲಮೇಲದ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, ಭರವಸೆಯೇ ಬದುಕಿನ ಜೀವ ಜಲ. ಅದನ್ನು ಬತ್ತಲು ಬಿಡಬಾರದು. ಬುದ್ಧಿವಂತಿಕೆ, ಪರಿಶ್ರಮಗಳು ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಜೀವನದಲ್ಲಿ ಹಣದ ಕೊರತೆ ಇದ್ದರೂ ಗುಣದ ಕೊರತೆ ಇರಬಾರದು. ಬದುಕು ಬದಲಾಗಬೇಕಾದರೆ ಬದುಕುವ ದಾರಿ ಮೊದಲು ಬದಲಾಗಬೇಕು. ಗೆದ್ದ ವ್ಯಕ್ತಿಗೆ ಚಪ್ಪಾಳೆ ತಟ್ಟುವುದಕ್ಕಿಂತ ಬಿದ್ದ ವ್ಯಕ್ತಿಯನ್ನು ಕೈ ಹಿಡಿದು ಮೇಲೆತ್ತುವವರು ದೊಡ್ಡವರಾಗುತ್ತಾರೆ ಎಂದು ಹೇಳಿದರು.ಜಿಗಜೇವಣಿ ಮುಪ್ಪಿನಾರ್ಯ ಶಿವಾಚಾರ್ಯರು, ಮಾಳಕವಠೆ ಗುರು ಪಂಚಾಕ್ಷರಿ ಶಿವಾಚಾರ್ಯರು, ಹತ್ತಳ್ಳಿ ಗುರುಪಾದೇಶ್ವರ ಶಿವಾಚಾರ್ಯರು, ಬೀಳಗಿ ಶಿವಾನಂದ ದೇವರು, ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ಸಂಗನಬಸವ ಶಿವಾಚಾರ್ಯರು, ಇಂಚಗೇರಿ ರುದ್ರಮುನಿ ಶಿವಾಚಾರ್ಯರು, ತದ್ದೇವಾಡಿ ಗುರುಚಂದ್ರಶೇಖರ ಶಿವಾಚಾರ್ಯರು, ಬೆನಕನಹಳ್ಳಿಯ ವೀರಲಿಂಗೇಶ್ವರ ಶಿವಾಚಾರ್ಯರು, ಜೈನಾಪುರದ ರೇಣುಕಾ ಶಿವಾಚಾರ್ಯರು, ಮುಳವಾಡದ ಸಿದ್ದಲಿಂಗ ಸ್ವಾಮೀಜಿ, ಇಂಚಗೇರಿ ರುದ್ರಮುನಿ ಸ್ವಾಮೀಜಿ, ಗೋಕಾಕದ ರಾಚೋಟಿ ಸ್ವಾಮೀಜಿ ಸೇರಿ ಹಲವು ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು. ಸಂಸದ ರಮೇಶ ಜಿಗಜಿಣಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಬಿರಾದಾರ, ಗ್ರಾಮದ ಹಾಗೂ ಸಮಾಜದ ಮುಖಂಡರು ಇತರರಿದ್ದರು. ಈ ವೇಳೆ ರಾಜಕುಮಾರ್ ದೈವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.