ಸಿದ್ಧಾರೂಢರ ಸನ್ನಿಧಿಯಲ್ಲಿ ಸಂಸ್ಕೃತಿ ಅನಾವರಣ!

| Published : Nov 20 2025, 12:45 AM IST

ಸಾರಾಂಶ

ಕಾರ್ತಿಕೋತ್ಸವಕ್ಕೆ ರಾಜ್ಯ, ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಧರ್ಮ, ಜಾತಿ, ಭೇದವಿಲ್ಲದೆ ಆಗಮಿಸಿ ವಿವಿಧ ಸೇವಾ ಕಾರ್ಯ ಕೈಗೊಳ್ಳುತ್ತಾರೆ. ಅದರಂತೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹೊಳಲು ಗ್ರಾಮದ ಚೆನ್ನಬಸಪ್ಪ ನೆಗಳೂರ 20 ವರ್ಷದಿಂದ ಶ್ರೀಮಠದ ಆವರಣದಲ್ಲಿ ಬಣ್ಣ-ಬಣ್ಣದ ಚಿತ್ತಾರ ಬಿಡಿಸಿ ಅಜ್ಜನಿಗೆ ತಮ್ಮ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ.

ಅಜೀಜಅಹ್ಮದ್‌ ಬಳಗಾನೂರ

ಹುಬ್ಬಳ್ಳಿ:

ಲಕ್ಷಾಂತರ ಭಕ್ತರ ಆರಾಧ್ಯ ದೈವ ಹುಬ್ಬಳ್ಳಿ ಸಿದ್ಧಾರೂಢರ ಮಠದಲ್ಲಿ ಲಕ್ಷ ದೀಪೋತ್ಸವದ ಸಂಭ್ರಮ ಮನೆ ಮಾಡಿದ್ದು, ಶ್ರೀಮಠವು ಬಣ್ಣಬಣ್ಣದ ಚಿತ್ತಾರದಿಂದ ಅಲಂಕೃತಗೊಂಡಿದೆ. ಕಲಾವಿದ ಚೆನ್ನಬಸಪ್ಪ ನೆಗಳೂರ ಅವರ ಕುಂಚದಲ್ಲಿ ಅರ‍ಳಿದ ಬಗೆ ಬಗೆಯ ಚಿತ್ರಗಳು ಮೂಡಿದ್ದು ಭಕ್ತರ ಸೆಳೆಯುತ್ತಿದೆ.

15 ದಿನಗಳ ಮುಂಚೆ ಆಗಮನ:

ಗುರುವಾರ ಸಂಜೆ ನಡೆಯವ ಕಾರ್ತಿಕೋತ್ಸವಕ್ಕೆ ರಾಜ್ಯ, ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಧರ್ಮ, ಜಾತಿ, ಭೇದವಿಲ್ಲದೆ ಆಗಮಿಸಿ ವಿವಿಧ ಸೇವಾ ಕಾರ್ಯ ಕೈಗೊಳ್ಳುತ್ತಾರೆ. ಅದರಂತೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹೊಳಲು ಗ್ರಾಮದ ಚೆನ್ನಬಸಪ್ಪ ನೆಗಳೂರ 20 ವರ್ಷದಿಂದ ಶ್ರೀಮಠದ ಆವರಣದಲ್ಲಿ ಬಣ್ಣ-ಬಣ್ಣದ ಚಿತ್ತಾರ ಬಿಡಿಸಿ ಅಜ್ಜನಿಗೆ ತಮ್ಮ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿ ವರ್ಷವೂ ಲಕ್ಷ ದೀಪೋತ್ಸವದ 15 ದಿನ ಮುಂಚಿತವಾಗಿಯೇ ಶ್ರೀಮಠಕ್ಕೆ ಆಗಮಿಸುವ ಅವರು ಮಠದ ಆವರಣದಲ್ಲಿ ಕಲೆ, ಸಂಸ್ಕೃತಿಯ ಕುರಿತು ಕುಂಚದಲ್ಲಿ ಜೀವ ತುಂಬುತ್ತಾರೆ.

ಅಜ್ಜನ ಭಕ್ತಿಗಾಗಿ:

ಪ್ರತಿ ವರ್ಷವೂ ಚೆನ್ನಬಸಪ್ಪ ನೆಗಳೂರ, ಒಂದೊಂದು ಧ್ಯೇಯವಾಕ್ಯದಡಿ ಚಿತ್ರ ಬಿಡಿಸುತ್ತಾರೆ. ಈ ಬಾರಿ ನೇಗಿಲುಯೋಗಿ ಕಲ್ಪನೆಯಡಿ ಚಿತ್ರ ಬಿಡಿಸಲಾಗಿದೆ. ಈ ಚಿತ್ರ ಬಿಡಿಸಲು ಬೇಕಾದ ಬಣ್ಣವನ್ನು ತಮ್ಮೂರಿನ ಭಕ್ತರು ಹಾಗೂ ಶ್ರೀಮಠದಿಂದ ಸಂಗ್ರಹಿಸುತ್ತಾರೆ. ಚಿತ್ರ ಬಿಡಿಸಲು ಹಣ ಪಡೆಯದೆ ಅಜ್ಜನ ಸೇವೆ ಮಾಡುತ್ತಿದ್ದಾರೆ. 15 ದಿನದಿಂದ ಶ್ರೀಮಠದಲ್ಲಿಯೇ ತಂಗಿರುವ ಕುಟುಂಬ ಚಿತ್ರ ಬಿಡಿಸುವ ಕಾರ್ಯ ಪೂರ್ಣಗೊಳಿಸಿದೆ. ಜತೆಗೆ ಪ್ರಸಾದ ಕೊಠಡಿಯಲ್ಲೂ ಸೇವಾ ಕಾರ್ಯದಲ್ಲಿ ನಿರತವಾಗಿದೆ.ನೇಗಲಯೋಗಿಯ ಆಕರ್ಷಣೆ...

100 ಅಡಿ ಉದ್ದದಲ್ಲಿ ಭೂಮಿ ಉಳುವುತ್ತಿರುವ ನೇಗಿಲಯೋಗಿಯ ಚಿತ್ರ ಬಿಡಿಸಿದ್ದು ಲಕ್ಷದೀಪೋತ್ಸವದ ಪ್ರಮುಖ ಆಕರ್ಷಣೆಯಾಗಿದೆ. ಭಕ್ತರನ್ನು ಸ್ವಾಗತಿಸಲು ಬಣ್ಣದಲ್ಲಿ ಅಕ್ಷರ ಬರೆಯಲಾಗಿದೆ. ಇದರೊಂದಿಗೆ ಬಗೆಬಗೆಯ ತೋರಣ, ವಿದ್ಯುತ್‌ ದೀಪಾಲಂಕಾರ, ಹೂವಿನ ಬಳ್ಳಿ, ಬೃಹದಾಕಾರದ ಆನೆ, ಚಿಗರಿ ಸೇರಿದಂತೆ ಹಲವು ಪ್ರಾಣಿಗಳ ಚಿತ್ರ ಕಾಣಬಹುದಾಗಿದೆ. ಹಣತೆ ಹಿಡಿದು ಮಠಕ್ಕೆ ಸ್ವಾಗತಿಸುವ ಪುಟ್ಟ ಮಕ್ಕಳು ಸೇರಿದಂತೆ ಹಣತೆ ಚಿತ್ರಗಳನ್ನು ಮಠದ ಆವರಣದಲ್ಲಿ ಚಿತ್ರಿಸಲಾಗಿದೆ.ಹಲವು ವರ್ಷಗಳಿಂದ ಶ್ರೀಮಠದಲ್ಲಿ ಬಣ್ಣದ ಚಿತ್ತಾರ ಬಿಡಿಸುವ ಚೆನ್ನಬಸಪ್ಪ ನೆಗಳೂರ ಅವರನ್ನು ನೋಡುತ್ತಿರುವೆ. ಪ್ರತಿ ವರ್ಷವೂ ಶ್ರೀಮಠಕ್ಕೆ ಆಗಮಿಸಿ ತಮ್ಮ ಸೇವೆ ಸಲ್ಲಿಸುತ್ತಾರೆ. ಇವರ ನಿಸ್ವಾರ್ಥ ಸೇವೆ ಇತರರಿಗೂ ಮಾದರಿ.

ರಾಜಶ್ರೀ ಬೀಡಿ, ಶಿಕ್ಷಕಿ, ಶ್ರೀಮಠದ ಭಕ್ತೆನಮ್ಮ ಅಜ್ಜಂದಿರು ಸಹ ಶ್ರೀಮಠದ ಭಕ್ತರು. ನಾನು ಚಿಕ್ಕವನಿದ್ದಾಗ ನಮ್ಮ ಅಜ್ಜನೊಂದಿಗೆ ಶ್ರೀಮಠಕ್ಕೆ ಬರುತ್ತಿದ್ದೆ. ಅಜ್ಜನಿಗೆ ಏನಾದರೂ ಸೇವೆ ಸಲ್ಲಿಸಬೇಕು ಎಂದುಕೊಂಡು 20 ವರ್ಷಗಳಿಂದ ಕುಟುಂಬ ಸಮೇತನಾಗಿ ಲಕ್ಷದೀಪೋತ್ಸವದಲ್ಲಿ ಪಾಲ್ಗೊಂಡು ಸೇವೆ ಸಲ್ಲುಸುತ್ತಿದ್ದೇವೆ. ಇದರಿಂದ ನನಗೆ ಒಳಿತಾಗಿದೆ.

ಚೆನ್ನಬಸಪ್ಪ ನೆಗಳೂರ, ಸಿದ್ಧಾರೂಢರ ಮಠದಲ್ಲಿ ಚಿತ್ರ ಬಿಡಿಸುವ ಕಲಾವಿದ

ಇಂದು ಲಕ್ಷ ದೀಪೋತ್ಸವಕಾರ್ತಿಕ ಮಾಸದ ನಿಮಿತ್ತ ಇಲ್ಲಿನ ಶ್ರೀಸಿದ್ಧಾರೂಢ ಸ್ವಾಮಿಗಳ ಮಠದಲ್ಲಿ ನ. 20ರಂದು ಸಂಜೆ 6.30ಕ್ಕೆ 32ನೇ ವರ್ಷದ ಲಕ್ಷ ದೀಪೋತ್ಸವ ಕಾರ್ಯಕ್ರಮ ನೆರವೇರಲಿದೆ. ಶ್ರೀಮಠದ ಟ್ರಸ್ಟ್ ಕಮಿಟಿ ಮುಖ್ಯ ಆಡಳಿತಾಧಿಕಾರಿ ಹಾಗೂ ಧಾರವಾಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಬಿ.ಎಸ್. ಭಾರತಿ ಅವರು ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡುವರು. ಈ ವೇಳೆ ವಿವಿಧ ಮಠಾಧೀಶರು, ಟ್ರಸ್ಟ್‌ ಕಮಿಟಿಯ ಸದಸ್ಯರು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಹಾಗೂ ಗೋವಾ ಸೇರಿದಂತೆ ರಾಜ್ಯದ ವಿವಿಧ ರಾಜ್ಯಗಳಿಂದ 50 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈಗಾಗಲೇ ಲಕ್ಷ ದೀಪೋತ್ಸವಕ್ಕೆ ಬೇಕಾದ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದ್ದು, ಶ್ರೀಮಠವು ವಿದ್ಯುತ್‌ ದೀಪಗಳಿಂದ ಝಗಮಗಿಸುತ್ತಿದೆ. ಮಠದ ಆವರಣದಲ್ಲಿ ಬಿಡಿಸಿದ ರಂಗೋಲಿ ಮೇಲೆ ಭಕ್ತರು ಹಣತೆ ಇಟ್ಟು ದೀಪ ಬೆಳೆಗಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಭಕ್ತರಿಗೆ ಪ್ರಸಾದ ವಿತರಣೆ, ವಸತಿಗೆ ಸಮಸ್ಯೆಯಾಗದಂತೆ ಶ್ರೀಮಠದ ಟ್ರಸ್ಟ್‌ ಅಗತ್ಯ ಕ್ರಮಕೈಗೊಂಡಿದೆ. ಸಂಜೆ 6.30ರಿಂದ ಮಧ್ಯರಾತ್ರಿ 1ರ ವರೆಗೆ ಲಕ್ಷದೀಪೋತ್ಸವ ಅದ್ಧೂರಿಯಾಗಿ ನಡೆಯಲಿದೆ.