ಮಕ್ಕಳಿಗೆ ಸಂಸ್ಕಾರ, ಮೌಲ್ಯಯುತ ಶಿಕ್ಷಣ ಬಹುಮುಖ್ಯ-ದಾನಮ್ಮನವರ

| Published : Jan 20 2025, 01:30 AM IST

ಸಾರಾಂಶ

ರಾಷ್ಟ್ರದ ಸಂಪತ್ತಾದ ಇಂದಿನ ಮಕ್ಕಳಿಗೆ ಶ್ರದ್ಧೆ, ಸಂಸ್ಕೃತಿ, ಸಂಸ್ಕಾರ ಮತ್ತು ಮೌಲ್ಯಯುತ ಶಿಕ್ಷಣ ನೀಡುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

ಹಾವೇರಿ: ರಾಷ್ಟ್ರದ ಸಂಪತ್ತಾದ ಇಂದಿನ ಮಕ್ಕಳಿಗೆ ಶ್ರದ್ಧೆ, ಸಂಸ್ಕೃತಿ, ಸಂಸ್ಕಾರ ಮತ್ತು ಮೌಲ್ಯಯುತ ಶಿಕ್ಷಣ ನೀಡುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

ತಾಲೂಕಿನ ಅಗಡಿ ಗ್ರಾಮದ ಜಂಗಮ ಸುಕ್ಷೇತ್ರ ಪ್ರಭುಸ್ವಾಮಿ ಮಠದ ಉಭಯ ಪೂಜ್ಯರ ಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸುಮಾರು 625ಕ್ಕೂ ಅಧಿಕ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತಿರುವ ಅಗಡಿ ಸುಕ್ಷೇತ್ರ ಪಾವನ ತಾಣ. ಶ್ರೀ ಪ್ರಭುಸ್ವಾಮಿ ಮಠದ ಕಾರ್ಯ ಶ್ಲಾಘನೀಯವಾದದ್ದು. ಶ್ರೀಮಠದ ಜಮೀನನ್ನು ಸರ್ಕಾರಿ ಆಸ್ಪತ್ರೆ, ವಿದ್ಯುತ್ ಹಾಗೂ ಇತ್ಯಾದಿ ಇಲಾಖೆಗಾಗಿ ದಾನ ಮಾಡಿದ್ದು ವಿಶೇಷ ಕಾರ್ಯ ಎಂದರು.ಶ್ರೀಮಠದ ಗುರುಸಿದ್ದ ಸ್ವಾಮೀಜಿ ಮಾತನಾಡಿ, ಶ್ರೀಮಠದ ಅಭಿರುದ್ದಿ ಕಾರ್ಯಗಳನ್ನು ವಿವರಿಸಿದರು.ಅಧ್ಯಕ್ಷತೆ ವಹಿಸಿದ್ದ ಬೆಳ್ಳಟ್ಟಿ ಮಠದ ಬಸವರಾಜ ಸ್ವಾಮೀಜಿ ಮಾತನಾಡಿ, ಗುರುಸಿದ್ಧ ಮಹಾಸ್ವಾಮಿಗಳ ಪ್ರತಿ ಕಾರ್ಯಕ್ರಮ ವಿಶೇಷತೆಗಳಿಂದ ಕೂಡಿದೆ. ಭಕ್ತರೆಲ್ಲರಿಗೂ ಹರ್ಷ, ಉತ್ಸಾಹ ತುಂಬುವಂತಿರುತ್ತವೆ. ಹಾಗಾಗಿ ಅಗಡಿ ಮತ್ತು ಗುತ್ತಲ ಭಕ್ತರು ಗುರುಸಿದ್ದ ಶ್ರೀಗಳ ಪಟ್ಟಾಧಿಕಾರ ಮಹೋತ್ಸವವನ್ನು ಅತ್ಯಂತ ಅದ್ಧೂರಿಯಾಗಿ ಆಚರಿಸಲು ಕಂಕಣಬದ್ಧರಾಗಬೇಕು ಎಂದರು.ಹತ್ತಿಮತ್ತೂರಿನ ನಿಜಗುಣ ಸ್ವಾಮೀಜಿ, ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು.

ಇದೇ ಸಂದರ್ಭದಲ್ಲಿ ಶಿರಹಟ್ಟಿ ಜಗದ್ಗುರು ಫಕ್ಕೀರ ಸಿದ್ದರಾಮ ಸ್ವಾಮೀಜಿಗಳಿಗೆ ಶಂಭಣ್ಣ ಗುರುಸಿದ್ದಯ್ಯ ನಿರ್ವಾಣಿಮಠ ಕುಟುಂಬದವರಿಂದ ತುಲಾಭಾರ ಸೇವೆ ಜರುಗಿತು. ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಯಲ್ಲಪ್ಪ ಮಣ್ಣೂರ್, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯದರ್ಶಿ ಡಾ. ಗಂಗಯ್ಯ ಕುಲಕರ್ಣಿ, ಪ್ರದೀಪ ಸಾಲಗೇರಿ, ಗಣೇಶ ಅರೇಮಲ್ಲಾಪುರ, ನಾಗರಾಜ ಬಸಗೆಣ್ಣಿ ಇತರರು ಇದ್ದರು. ಮಾಂತೇಶ ಬೆಳವಗಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.