ಸಂಸ್ಕಾರವಂತ ಯುವಕ, ಯುವತಿಯರು ದೇಶದ ಸಂಪತ್ತು: ಕಣ್ವಕುಪ್ಪೆ ನಾಲ್ವಡಿ ಶಾಂತಲಿಂಗ ಸ್ವಾಮೀಜಿ

| Published : Feb 26 2024, 01:34 AM IST

ಸಂಸ್ಕಾರವಂತ ಯುವಕ, ಯುವತಿಯರು ದೇಶದ ಸಂಪತ್ತು: ಕಣ್ವಕುಪ್ಪೆ ನಾಲ್ವಡಿ ಶಾಂತಲಿಂಗ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳಿಗೆ ಜಂಕ್ ಫುಡ್ ಬದಲು ಸಾತ್ವಿಕ ಆಹಾರ ಸೇವನೆಗೆ ಒತ್ತು ಕೊಟ್ಟು ಮಕ್ಕಳ ಬುದ್ಧಿ ಮತ್ತು ಮನಸ್ಸು ವಿಕಸಿತಗೊಳ್ಳುತ್ತದೆ. ವಿದ್ಯೆ-ಧ್ಯಾನ-ಶಕ್ತಿ ಹೊಂದಿದವರಿಗಿಂತಲೂ ಆರೋಗ್ಯವಂತ ಮತ್ತು ಸಂಸ್ಕಾರವಂತ ಯುವಕ, ಯುವತಿಯರು ದೇಶದ ಸಂಪತ್ತು. ದೇಶವು ಸಂಸ್ಕೃತಿ-ಸಂಸ್ಕಾರ-ಸಂಪ್ರದಾಯ-ವಿಶಿಷ್ಟ ಪರಂಪರೆ ಮತ್ತು ಆಧ್ಯಾತ್ಮಿಕತೆ ಮೂಲಕ ವಿಶ್ವಕ್ಕೆ ಗುರುವಾಗಿ ಮೆರೆದ ದೇಶವೆನಿಸಿದ್ದು ಇಂತಹ ಪುಣ್ಯಭೂಮಿಯಲ್ಲಿ ಜನಿಸಿದ್ದಕ್ಕಾಗಿ ನಾವೆಲ್ಲರೂ ಹೆಮ್ಮೆ ಪಡಬೇಕು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಆದಿತ್ಯ ಗುರುಕುಲಂ ಶಾಲೆಯಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುತ್ತಿರುವುದು ಅನುಕರಣೀಯ ಎಂದು ಜಗಳೂರು ತಾಲೂಕಿನ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತುಮ್ಮಿನಕಟ್ಟೆ ರಸ್ತೆಯ ಬಲಮುರಿ ಕ್ರಾಸ್‍ನಲ್ಲಿರುವ ಆದಿತ್ಯ ಗುರುಕುಲಂ ಶಾಲೆಯ ಮೊದಲನೇ ವರ್ಷದ ಶಾಲಾ ವಾರ್ಷಿಕೋತ್ಸವ ಆದಿತ್ಯ ಕಲಾ ಉತ್ಸವ ಸಮಾರಂಭ ಉದ್ಘಾಟಿಸಿ ಆರ್ಶೀವಚನ ನೀಡಿ ಸಮಾಜದಲ್ಲಿ ಯಾರಿಂದಲೂ ಅಪಕೀರ್ತಿಗೊಳಗಾಗದಂತೆ ಮಕ್ಕಳ ಬೆಳೆಸುವ ಕಾರ್ಯವಾಗಬೇಕಿದ್ದು, ಪೋಷಕರು ತಮ್ಮ ದೈನಂದಿನ ಒತ್ತಡದ ಬದುಕಿನಲ್ಲಿ ಪ್ರೀತಿ-ವಾತ್ಸಲ್ಯದಿಂದ ಮಕ್ಕಳ ಪಾಲನೆ-ಪೋಷಿಸಬೇಕು. ಕೆಲ ಸಮಯ ಮಕ್ಕಳ ವಿದ್ಯಾಭ್ಯಾಸದ ಕಡೆಗೂ ಗಮನಹರಿಸುವ ಜೊತೆಗೆ ಸಚ್ಚಾರಿತ್ರ್ಯ ಮಕ್ಕಳ ಸಮಾಜಕ್ಕೆ ಕೊಡುಗೆಯಾಗಿ ನೀಡಲು ಹೇಳಿದರು.

ಮಕ್ಕಳಿಗೆ ಜಂಕ್ ಫುಡ್ ಬದಲು ಸಾತ್ವಿಕ ಆಹಾರ ಸೇವನೆಗೆ ಒತ್ತು ಕೊಟ್ಟು ಮಕ್ಕಳ ಬುದ್ಧಿ ಮತ್ತು ಮನಸ್ಸು ವಿಕಸಿತಗೊಳ್ಳುತ್ತದೆ. ವಿದ್ಯೆ-ಧ್ಯಾನ-ಶಕ್ತಿ ಹೊಂದಿದವರಿಗಿಂತಲೂ ಆರೋಗ್ಯವಂತ ಮತ್ತು ಸಂಸ್ಕಾರವಂತ ಯುವಕ, ಯುವತಿಯರು ದೇಶದ ಸಂಪತ್ತು. ದೇಶವು ಸಂಸ್ಕೃತಿ-ಸಂಸ್ಕಾರ-ಸಂಪ್ರದಾಯ-ವಿಶಿಷ್ಟ ಪರಂಪರೆ ಮತ್ತು ಆಧ್ಯಾತ್ಮಿಕತೆ ಮೂಲಕ ವಿಶ್ವಕ್ಕೆ ಗುರುವಾಗಿ ಮೆರೆದ ದೇಶವೆನಿಸಿದ್ದು ಇಂತಹ ಪುಣ್ಯಭೂಮಿಯಲ್ಲಿ ಜನಿಸಿದ್ದಕ್ಕಾಗಿ ನಾವೆಲ್ಲರೂ ಹೆಮ್ಮೆ ಪಡಬೇಕು ಎಂದರು.

ಆದಿತ್ಯ ಗುರುಕುಲಂ ಶಾಲೆಯ ಅಧ್ಯಕ್ಷ ಜಿ.ಮರಿಗೌಡ ಮಾತನಾಡಿ ಕಳೆದ 15 ವರ್ಷಗಳ ಹಿಂದೆ ಶ್ರೀ ಸಾಯಿಗುರುಕುಲ ವಿದ್ಯಾಸಂಸ್ಥೆ ತೆರೆದು ಸಿಬಿಎಸ್ಇ ಪಠ್ಯಕ್ರಮದ ಶಿಕ್ಷಣ ನೀಡಿದ್ದು, ಹಿಂದಿನಿಂದಲೂ ಈ ಭಾಗದಲ್ಲಿ ಐ.ಸಿ.ಎಸ್.ಇ. ಪಠ್ಯಕ್ರಮದ ಶಾಲೆ ತೆರೆಯಬೇಕೆಂಬ ತುಡಿತವಿತ್ತು ಇದೀಗ ಆದಿತ್ಯ ಗುರುಕುಲಂ ಶಾಲೆ ತೆರೆದು ಈ ಕೊರತೆ ನೀಗಿಸಲು ಮುಂದಾಗಿದ್ದೇವೆ. ಮಕ್ಕಳ ಕಲಿಕೆಗಾಗಿ ವಿಭಿನ್ನ-ವಿನೂತನ ಪ್ರಯತ್ನ ಸಂಸ್ಥೆ ವತಿಯಿಂದ ಮಾಡುವ ನಿಟ್ಟಿನಲ್ಲಿ ಯೋಜನೆಗಳ ಹಮ್ಮಿಕೊಂಡಿದ್ದು ಪೋಷಕರ ಸಲಹೆ-ಸಹಕಾರ ನಮ್ಮ ಸಂಸ್ಥೆಯ ಮೇಲೆ ನಿರಂತರವಾಗಿರಲಿ ಎಂದು ಮನವಿ ಮಾಡಿದರು.

ನಟ ಅರ್ಜುನ್ ಗೌಡ ಮಾತನಾಡಿ ಉತ್ತಮ ಉದ್ದೇಶಗಳಿಗಾಗಿ ಸತ್ಕಾರ್ಯಗಳ ಮಾಡಿದರೆ ಉದ್ದೇಶಗಳು ಈಡೇರುತ್ತವೆ, ಮಕ್ಕಳಿಗೆ ವಿದ್ಯೆ ಕೊಡುವ ಕೆಲಸ ದೇವರ ಕೆಲಸವಾಗಿದ್ದು ಶಿಕ್ಷಕರು ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಎಂದು ಸಲಹೆ ನೀಡಿದರು.

ಸಂಸ್ಥೆಯ ಆಡಳಿತಾಧಿಕಾರಿ ದಯಾನಂದ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿ ನೆಲವಾಗಿದ್ದ ಹೊಲವನ್ನು ಶಾಲೆಯಾಗಿ ಪರಿವರ್ತಿಸಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ಈಗಾಗಲೇ 130ಕ್ಕೂ ಹೆಚ್ಚು ಮಕ್ಕಳು ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಪೋಷಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಮನವಿ ಮಾಡಿದರು.

ಕೋವಿಡ್ ಸಂದರ್ಭದಲ್ಲಿ ಚಲನಚಿತ್ರ ನಟ ಅರ್ಜುನ್ ಗೌಡ ಆಂಬ್ಯುಲೆನ್ಸ್ ಖರೀದಿಸಿ 300ಕ್ಕೂ ಹೆಚ್ಚು ಶವಗಳ ಅಂತಿಮ ಸಂಸ್ಕಾರ ಮಾಡಿದ್ದರು. 31ಕ್ಕೂ ಹೆಚ್ಚು ಬಾರಿ ಕೋವಿಡ್ ಟೆಸ್ಟ್‍ಗೊಳಗಾಗಿದ್ದರೂ ಸೋಂಕು ತಗಲದೇ ತಮ್ಮ ಸಮಾಜಸೇವೆ ಮುಂದುವರಿಸಿದ್ದರು ಇಂತಹವರ ಕರೆಸಿ ಮಕ್ಕಳಿಗೆ ಪ್ರೇರಣೆ ಸಿಗುವಂತಾಗಲಿ ಎಂಬ ಸದುದ್ದೇಶದಿಂದ ಅವರನ್ನು ಆಹ್ವಾನಿಸಲಾಗಿದೆ ಎಂದು ವಿವರಿಸಿದರು.

ಪ್ರಾಂಶುಪಾಲರಾದ ಪರಮೇಶಿ ವಾರ್ಷಿಕ ವರದಿ ವಾಚನ ಮಾಡಿದರು. ಲಿಟ್ಲ್ ಚಾಂಪ್ಸ್ ಗುರುಕುಲಂ ಸಂಸ್ಥೆಯ ವ್ಯವಸ್ಥಾಪಕರಾದ ಪೃಥ್ವಿರಾಜ್ ಬಾದಾಮಿ, ಹನುಮಸಾಗರ ಗ್ರಾಪಂ ಅಧ್ಯಕ್ಷೆ ಶೃತಿ ಮಂಜುನಾಥ್ ಮಾತನಾಡಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೂರೆಗೊಂಡವು. ಪ್ರತಿಭಾನ್ವಿತ ಮಕ್ಕಳ ಸನ್ಮಾನಿಸಲಾಯಿತು.