ಸಾರಾಂಶ
- ವಾರದೊಳಗೆ ಸ್ಪಂದಿಸದಿದ್ದರೆ ಪ್ರತಿಭಟನೆ: ಡಿಎಸ್‌ಎಸ್, ಪರಿಸರ ಸಂರಕ್ಷಣಾ ವೇದಿಕೆ ಎಚ್ಚರಿಕೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಹರಿಹರ ತಾಲೂಕಿನ ವಿವಿಧ ಗ್ರಾಮಗಳ ಪಟ್ಟಾಭೂಮಿ ಹಾಗೂ ಸರ್ಕಾರಿ ಜಮೀನುಗಳಲ್ಲಿ ಅಕ್ರಮ ಮಣ್ಣುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಒಂದು ವಾರದೊಳಗೆ ಅಕ್ರಮ ತಡೆಯದಿದ್ದರೆ, ಜಿಲ್ಲಾಡಳಿತ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ ಎಚ್ಚರಿಸಿದರು.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿಹರ ತಾಲೂಕಿನ ಹರ್ಲಾಪುರ, ಗುತ್ತೂರು, ಸಾರಥಿ, ಪಾಮೇನಹಳ್ಳಿ, ದೀಟೂರು, ಚಿಕ್ಕಬಿದರಿ, ಕರಲಹಳ್ಳಿ, ಬುಳ್ಳಾಪುರ, ಹಲಸಬಾಳು, ರಾಜನಹಳ್ಳಿ, ತಿಮ್ಲಾಪುರ, ಧೂಳೆಹೊಳೆ, ಇಂಗಳಗೊಂದಿ ಮತ್ತಿತರ ಗ್ರಾಮಗಳ ಪಟ್ಟಾ ಹಾಗೂ ಸರ್ಕಾರಿ ಜಮೀನುಗಳಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಿರಂತರ ನಡೆದಿದೆ ಎಂದು ದೂರಿದರು.
ತುಂಗಭದ್ರಾ ನದಿ ದಂಡೆಯ ಗ್ರಾಮಗಳಲ್ಲಿ 15-20 ಅಡಿ ಆಳದವರೆಗೆ ಜೆಸಿಬಿ, ಹಿಟಾಚಿ ಯಂತ್ರಗಳಿಂದ ಗುಂಡಿ ತೋಡಿಸಿ, ಅಕ್ರಮ ಮಣ್ಣು ಗಣಿಗಾರಿಕೆ ನಡೆಸಲಾಗುತ್ತಿದೆ. ಇದರಿಂದ ಪರಿಸರ ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಮಣ್ಣು ಗಣಿಗಾರಿಕೆಯಿಂದಾಗಿ ನದಿ ದಂಡೆಯ ಹಲವು ಗ್ರಾಮಗಳ ಸಾರ್ವಜನಿಕ ಬಂಡಿ ರಸ್ತೆ, ಕಾಲುದಾರಿಗಳೇ ಕಣ್ಮರೆಯಾಗಿವೆ ಎಂದು ಆರೋಪಿಸಿದರು.ನದಿತಟದ ಗ್ರಾಮಗಳ ರೈತರು, ಜನಸಾಮಾನ್ಯರು ದನ- ಕರುಗಳಿಗೆ ಮೈತೊಳೆಯಲು, ಬಟ್ಟೆ ತೊಳೆಯಲು, ಹಬ್ಬದ ದಿನಗಳಲ್ಲಿ ಗಂಗಾಪೂಜೆ ಮಾಡಲು ನದಿಗೆ ಹೋಗದಂತಹ ಸ್ಥಿತಿ ನಿರ್ಮಾಣವಾಗಿದೆ. ನದಿ ದಂಡೆಯ ಗ್ರಾಮಗಳ ಹಿಂದು- ಮುಸ್ಲಿಂ ಸಮುದಾಯಗಳ ರುದ್ರಭೂಮಿ, ಖಬರಸ್ಥಾನಗಳಲ್ಲಿ ಕೆಲವು ನಾಶವಾಗಿದ್ದರೆ, ಮತ್ತೆ ಕೆಲವು ಕಣ್ಮರೆಯಾಗುವ ಪರಿಸ್ಥಿತಿ ಮಣ್ಣು ಗಣಿಗಾರಿಕೆ ತಂದೊಡ್ಡಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಹಳೆ ಹರ್ಲಾಪುರದ ಹಿಂದು ರುದ್ರಭೂಮಿಯಲ್ಲಿ ಶವ ಸಂಸ್ಕಾರ ಮಾಡಲು ಸಾಧ್ಯವಿಲ್ಲದಂತಾಗಿದೆ. ಅದೇ ಗ್ರಾಮದ ಮುಸ್ಲಿಮರ ಖಬರಸ್ಥಾನಕ್ಕೆ ಹೋಗುವುದಕ್ಕೂ ದಾರಿ ಇಲ್ಲ. ರಾಜನಹಳ್ಳಿಯಲ್ಲಿ 2 ಎಕರೆ ಸರ್ಕಾರಿ ಜಮೀನಿನಲ್ಲಿ ಪರಿಶಿಷ್ಟ ಜನಾಂಗದ ರುದ್ರಭೂಮಿ ಕಾಣೆಯಾಗಿದೆ. ಗುತ್ತೂರು ಹಿಂದು ರುದ್ರಭೂಮಿ ಸಹ ಕಣ್ಮರೆಯಾಗಿದೆ. ಮುಸ್ಲಿಮರ ಖಬರಸ್ಥಾನ ನಾಶವಾಗುತ್ತಿದೆ ಎಂದು ಆರೋಪಿಸಿದರು.ತುಂಗಭದ್ರಾ ದಂಡೆಯ ಸಾಧು ಸಿದ್ದಪ್ಪಜ್ಜನ ಮಠ, ಗುತ್ತೂರು ಗ್ರಾಮ ದೇವತೆ ಶ್ರೀ ಉಡಿಸಲಮ್ಮ ದೇವಿಯ ಮೂಲ ದೇವಾಲಯ ಅಳಿವಿನಂಚಿನಲ್ಲಿದೆ. ಹರಿಹರ ತಾಲೂಕಿನ ಹತ್ತಾರು ಗ್ರಾಮಗಳ ಸ್ಥಿತಿ ಇದೇ ರೀತಿ ಆಗುತ್ತಿದೆ. ಗಣಿ ಮತ್ತು ಭೂ ವಿಜ್ಞಾನ, ಕಂದಾಯ, ಕೃಷಿ ಇಲಾಖೆ ಅನುಮತಿ ಪಡೆದು, ಏರಿ ಅಥವಾ ಕಲ್ಲುಗಳಿದ್ದರೆ 3 ಅಡಿ ಮಾತ್ರ ಜಮೀನು ಸಮತಟ್ಟ ಮಾಡಲು ಅವಕಾಶವಿದೆ. 3 ಅಡಿಗಿಂತ ಹೆಚ್ಚು ಮಣ್ಣು ತೆಗೆಸಿದರೆ ಅಂತಹ ಪಟ್ಟಾ ಜಮೀನುಗಳನ್ನು ಸರ್ಕಾರ ಭೂ ಕಂದಾಯ ಕಾಯ್ದೆ ಅನ್ವಯ ತನ್ನ ಸುಪರ್ದಿಗೆ ಪಡೆಯಲು ಅವಕಾಶವಿದೆ. ಆದರೂ, ತಾಲೂಕು, ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತಿವೆ ಎಂದು ಕುಂದುವಾಡ ಮಂಜುನಾಥ ಆರೋಪಿಸಿದರು.
ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಗಿರೀಶ ಎಸ್. ದೇವರಮನಿ ಮಾತನಾಡಿ, ಮಣ್ಣು ಗಣಿಗಾರಿಕೆ ಆರಂಭಿಸಲು ಪಟ್ಟಭದ್ರರು ಈಗಾಗಲೇ ವಿವಿಧ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು, ಮುಖಂಡರು, ಅಧಿಕಾರಿಗಳನ್ನು ಸಂಪರ್ಕಿಸಿ, ಅನೌಪಚಾರಿಕ ಅನುಮತಿ ಕೋರಿದ್ದಾರೆ. ಹಿಂದಿನ ಹತ್ತಾರು ವರ್ಷದಿಂದ ನಡೆಸಿದ ಅಕ್ರಮ ಮಣ್ಣು ಗಣಿಗಾರಿಕೆಯಿಂದ ಹರಿಹರ ತಾಲೂಕಿನ ಪರಿಸರವೇ ಹಾಳಾಗಿದೆ. ಈ ಸಲ ಮತ್ತೆ ಮಣ್ಣು ಗಣಿಗಾರಿಕೆಗೆ ಅಲಿಖಿತ ಅವಕಾಶ ನೀಡಿದ್ದಾರೆ. ಪರಿಣಾಮ ತಾಲೂಕಿನ ಭೌಗೋಳಿಕ ರಚನೆ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ ಎಂದರು.ಡಿಎಸ್‌ಎಸ್ ಹರಿಹರ ತಾಲೂಕು ಸಂಚಾಲಕ ಪಿ.ಜೆ. ಮಹಾಂತೇಶ, ಕೆ.ಪಿ. ಗೋಪಿನಾಥಾಚಾರ್, ಸುನೀಲ ಹೊಟ್ಟಿಗೇನಹಳ್ಳಿ, ಮಂಜುನಾಥ ಹಾಲವರ್ತಿ, ಶಿವಶಂಕರ ಇತರರು ಇದ್ದರು.
- - -ಟಾಪ್ ಕೋಟ್
ಹರಿಹರ ತಾಲೂಕಿನಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ವಿರುದ್ಧ ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಮಣ್ಣು ಗಣಿಗಾರಿಕೆ ತಡೆಯಲು ಡ್ರೋಣ್ ಕ್ಯಾಮೆರಾ ಮೂಲಕ ಕಣ್ಗಾವಲಿಡಬೇಕು. ಎಷ್ಟೇ ಒತ್ತಡ ಬಂದರೂ ಮಣ್ಣು ಗಣಿಗಾರಿಕೆಗೆ ಅವಕಾಶ ಕೊಡಬಾರದು. ಗಣಿಗಾರಿಕೆಗೆ ಸಹಕರಿಸುತ್ತಿರುವ ಹಿಂದಿನ, ಈಗಿನ ಇಲಾಖಾಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು- ಗಿರೀಶ ದೇವರಮನಿ, ಅಧ್ಯಕ್ಷ, ಪರಿಸರ ರಕ್ಷಣಾ ವೇದಿಕೆ
- - - -16ಕೆಡಿವಿಜಿ1: