ಮಂಡ್ಯ ನಗರದೊಳಗೆ ಅನಧಿಕೃತವಾಗಿ ತಲೆ ಎತ್ತುತ್ತಿರುವ ಬಡಾವಣೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ ದಿಟ್ಟ ಹೆಜ್ಜೆ ಇಡಲು ಮುಂದಾಗಿದೆ. ಪ್ರಾಧಿಕಾರದ ಅನುಮತಿಯಿಲ್ಲದೆ ರಚನೆಯಾಗುವ ಬಡಾವಣೆಗಳಲ್ಲಿರುವ ನಿವೇಶನಗಳನ್ನು ಖರೀದಿಸದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದೊಳಗೆ ಅನಧಿಕೃತವಾಗಿ ತಲೆ ಎತ್ತುತ್ತಿರುವ ಬಡಾವಣೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ ದಿಟ್ಟ ಹೆಜ್ಜೆ ಇಡಲು ಮುಂದಾಗಿದೆ. ಪ್ರಾಧಿಕಾರದ ಅನುಮತಿಯಿಲ್ಲದೆ ರಚನೆಯಾಗುವ ಬಡಾವಣೆಗಳಲ್ಲಿರುವ ನಿವೇಶನಗಳನ್ನು ಖರೀದಿಸದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ ಹೇಳಿದರು.

ನಗರದ ಸುತ್ತಮುತ್ತಲ ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯೊಳಗೆ ಒಟ್ಟು ೮ ಅನಧಿಕೃತ ಬಡಾವಣೆಗಳು ನಿರ್ಮಾಣಗೊಂಡಿರುವುದು ಕಂಡುಬಂದಿದೆ. ಪಣಕನಹಳ್ಳಿಯ ಸರ್ವೇ ನಂ.೨೫/೬, ಹೊಳಲು ಗ್ರಾಮದ ಸರ್ವೇ ನಂ.೪೮/೩, ಕಿರಗಂದೂರು ಗ್ರಾಮದ ೧೧೬/೧ಬಿ೨, ಮಂಡ್ಯದ ಸರ್ವೇ ನಂ.೨೫೫, ಗೋಪಾಲಪುರ ಗ್ರಾಮದ ೩೯/೪ಬಿ, ಗುತ್ತಲು ಗ್ರಾಮದ ಸರ್ವೇ ನಂ.೭೦೦ ಮತ್ತು ೭೦೧, ಕ್ಯಾತುಂಗೆರೆ ಗ್ರಾಮದ ಸರ್ವೇ ನಂ.೩೮/೪ ಮತ್ತು ೩೮/೯ ಹಾಗೂ ೪೫ರಲ್ಲಿ ಅನಧಿಕೃತ ಬಡಾವಣೆಗಳು ರಚನೆಯಾಗಿರುವುದಾಗಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅನಧಿಕೃತ ಬಡಾವಣೆಗಳಲ್ಲಿ ಸಾರ್ವಜನಿಕರು ಯಾವುದೇ ನಿವೇಶನಗಳನ್ನು ಖರೀದಿಸಬಾರದು. ಇಂತಹ ಬಡಾವಣೆಗಳ ರಚನೆಗೆ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಂಜೂರಾತಿ ಪಡೆದಿರುವುದಿಲ್ಲ. ಈ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಬ್ಯಾಂಕುಗಳಿಂದ ಸಾಲ ಸಿಗುವುದಿಲ್ಲ. ನಗರಸಭೆಯಿಂದ ಮೂಲ ಸೌಲಭ್ಯಗಳೂ ದೊರಕುವುದಿಲ್ಲ. ನಿವೇಶನಗಳನ್ನು ಖರೀದಿಸಿ ಸಂಕಷ್ಟಕ್ಕೆ ಒಳಗಾಗುವ ಬದಲು ಪ್ರಾಧಿಕಾರದಿಂದ ಮಂಜೂರಾತಿ ಪಡೆದು ರಚನೆಯಾಗಿರುವ ಬಡಾವಣೆಗಳಲ್ಲಿ ಮಾತ್ರ ನಿವೇಶನಗಳನ್ನು ಖರೀದಿಸುವಂತೆ ಮನವಿ ಮಾಡಿದರು.

ನಿಯಮಬಾಹಿರವಾಗಿ ತಲೆಎತ್ತುತ್ತಿರುವ ಬಡಾವಣೆಗಳಲ್ಲಿ ರಸ್ತೆಗೆ ೩೦ ಅಡಿ ಜಾಗವನ್ನು ಮೀಸಲಿಡದೆ, ಸಾರ್ವಜನಿಕ ಉದ್ದೇಶಗಳಿಗೆ ಜಾಗವನ್ನು ಕಾಯ್ದಿರಿಸದೆ ಪೂರ್ಣ ಪ್ರಮಾಣದಲ್ಲಿ ನಿವೇಶನಗಳನ್ನು ಅಭಿವೃದ್ಧಿಪಡಿಸಿರುತ್ತಾರೆ. ಈ ಮಾದರಿಯಲ್ಲಿ ರಚನೆಯಾಗುವ ಬಡಾವಣೆಗಳಿಗೆ ಮುಡಾದಿಂದ ಮಂಜೂರಾತಿ ದೊರಕುವುದಿಲ್ಲ. ಇಂತಹ ಕಡೆಗಳಲ್ಲಿ ಕಡಿಮೆ ದರಕ್ಕೆ ನಿವೇಶನಗಳು ಸಿಗಲಿವೆ ಎಂಬ ಕಾರಣಕ್ಕೆ ನಿವೇಶನ ಖರೀದಿಸಿದರೆ ಮುಂದೆ ಸಾರ್ವಜನಿಕರು ನಾನಾ ರೀತಿಯ ಸಂಕಷ್ಟ ಎದುರಿಸಬೇಕಾದ ಸಾಧ್ಯತೆಗಳಿರುತ್ತವೆ ಎಂದು ಎಚ್ಚರಿಸಿದರು.

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನಧಿಕೃತ ಬಡಾವಣೆಗಳನ್ನು ಗುರುತಿಸಿ ಆ ಬಡಾವಣೆಗಳಲ್ಲಿರುವ ನಿವೇಶನಗಳನ್ನು ಖರೀದಿಸದಂತೆ ಸಾರ್ವಜನಿಕರಿಗೆ ನಿರ್ದೇಶನ ನೀಡಲಾಗುವುದು. ಆ ಬಡಾವಣೆಗಳ ಸರ್ವೆ ನಂಬರ್‌ಗಳನ್ನು ಉಪ ನೋಂದಣಾಧಿಕಾರಿಗಳಿಗೆ ಪತ್ರ ಮುಖೇನ ಕಳುಹಿಸಿಕೊಟ್ಟು, ಇವುಗಳಲ್ಲಿರುವ ನಿವೇಶನಗಳು ನೋಂದಣಿಯಾಗದಂತೆ ತಡೆಹಿಡಿಯಬೇಕೆಂದು ತಿಳಿಸಲಾಗುವುದು. ಒಮ್ಮೆ ನಮ್ಮ ನಿರ್ದೇಶನವನ್ನು ಮೀರಿ ನಿವೇಶನ ನೋಂದಣಿ ಮಾಡಿದರೆ ಅದಕ್ಕೆ ಉಪ ನೋಂದಣಾಧಿಕಾರಿಗಳೇ ಹೊಣೆಗಾರರಾಗಬೇಕಾಗುತ್ತದೆ ಎಂದು ಸೂಚಿಸಿರುವುದಾಗಿಯೂ ಹೇಳಿದರು.

ವಿವೇಕಾನಂದನಗರ ಬಡಾವಣೆಯಲ್ಲಿರುವ ನಿವೇಶನಗಳು, ಮನೆಗಳು ಖಾತೆ, ಮಾರಾಟವಾಗದಿರುವುದಕ್ಕೆ ಪ್ರಕರಣ ಸಿಬಿಐನಲ್ಲಿರುವುದೇ ಕಾರಣವಾಗಿದೆ. ಸಿಬಿಐ ಎಲ್ಲಾ ಕಡತಗಳನ್ನು ತನಿಖೆಗಾಗಿ ಕೊಂಡೊಯ್ದಿದೆ. ೧೦ ವರ್ಷಗಳಾದರೂ ತನಿಖೆ ಇನ್ನೂ ಮುಗಿದಿಲ್ಲ. ಪರಿಣಾಮ ಬಡಾವಣೆಯಲ್ಲಿ ಯಾವುದೇ ಅಭಿವೃದ್ಧಿಯನ್ನು ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಡಾ ವ್ಯಾಪ್ತಿಗೆ ಬರುವ ಮೂವರು ಶಾಸಕರ ನಿಯೋಗ ಸಿಬಿಐ ಅಧಿಕಾರಿಗಳನ್ನು ಭೇಟಿಯಾಗಿ ಪ್ರಕರಣಕ್ಕೆ ಸಂಬಂಧಿಸಿದ ನಿವೇಶನಗಳನ್ನು ಹೊರತುಪಡಿಸಿ ಉಳಿದ ನಿವೇಶನಗಳ ಕಡತಗಳನ್ನು ವಾಪಸ್ ನೀಡುವಂತೆ ಕೋರಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಆಯುಕ್ತ ಕೃಷ್ಣಕುಮಾರ್ ಮಾತನಾಡಿ, ಮಂಡ್ಯದಲ್ಲಿ ಮುಡಾ ವತಿಯಿಂದ ಹೊಸ ಬಡಾವಣೆಗಳ ನಿರ್ಮಾಣಕ್ಕೆ ಹಸಿರು ವಲಯ ಹೆಚ್ಚಾಗಿರುವುದು ಪ್ರಮುಖ ಅಡ್ಡಿಯಾಗಿದೆ. ರೈತರಿಂದ ಜಮೀನು ಖರೀದಿಗೆ ಮುಂದಾದರೆ ಒಂದು ನಿವೇಶನಕ್ಕೆ ತಗುಲುವ ವೆಚ್ಚವನ್ನು ಒಂದು ಗುಂಟೆ ಜಮೀನಿಗೆ ಪರಿಹಾರ ಕೇಳುತ್ತಾರೆ. ಅವರಿಂದ ಜಮೀನು ಪಡೆದು ಬಡಾವಣೆಗಳನ್ನು ಅಭಿವೃದ್ಧಿಪಡಿಸುವುದು ಕಷ್ಟವಾಗಲಿದೆ. ಅದಕ್ಕಾಗಿ ಬಡಾವಣೆ ರಚನೆಯಂತಹ ಕಾರ್ಯ ಕೈಗೆತ್ತಿಕೊಳ್ಳುವುದು ಕಷ್ಟವಾಗುತ್ತಿದೆ. ರೈತರು ಬಡಾವಣೆ ರಚನೆಗೆ ಮುಡಾ ಜೊತೆ ಸಹಕರಿಸಲು ಮುಂದೆ ಬಂದರೆ ಬ್ಯಾಂಕ್‌ನಿಂದ ಸಾಲ ಪಡೆದಾದರೂ ಬಡಾವಣೆ ನಿರ್ಮಾಣ ಮಾಡುವುದಾಗಿ ತಿಳಿಸಿದರು.

ನಗರ ಹಾಗೂ ಗ್ರಾಮಾಂತರ ಪ್ರದೇಶ ವ್ಯಾಪ್ತಿಯೊಳಗೆ ಎಷ್ಟು ಅನಧಿಕೃತ ಬಡಾವಣೆಗಳಿವೆ ಎಂಬ ಬಗ್ಗೆ ಪಟ್ಟಿಯೊಂದನ್ನು ಸಿದ್ಧಪಡಿಸಲಾಗುವುದು. ಅವೆಲ್ಲದರ ಪಟ್ಟಿಯನ್ನು ಫ್ಲೆಕ್ಸ್ ಮಾಡಿಸಿ ಉಪ ನೋಂದಣಾಧಿಕಾರಿ ಕಚೇರಿ ಎದುರು ಪ್ರದರ್ಶಿಸಲಾಗುವುದು. ಆ ಮೂಲಕ ಜನರಲ್ಲಿ ಮುಡಾ ಅನುಮೋದನೆ ಇಲ್ಲದ ನಿವೇಶನಗಳನ್ನು ಖರೀದಿಸದಂತ ತಿಳಿವಳಿಕೆ, ಜಾಗೃತಿ ಮೂಡಿಸಲಾಗುವುದು ಎಂದರು.

ಮುಡಾದಲ್ಲಿ ಕೆರೆ ಅಭಿವೃದ್ಧಿ ಶುಲ್ಕ ೧.೭೩ ಕೋಟಿ ರು. ಇದೆ. ಈ ಹಣದಿಂದ ಕೋಣನಹಳ್ಳಿ ಕೆರೆಯನ್ನು ಸಮಗ್ರ ಅಭಿವೃದ್ಧಿಪಡಿಸಲಾಗುವುದು. ಈ ಸಂಬಂಧ ಶೀಘ್ರದಲ್ಲೇ ಟೆಂಡರ್ ಕರೆದು ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಗೋಷ್ಠಿಯಲ್ಲಿ ಟೌನ್ ಪ್ಲಾನಿಂಗ್ ಮ್ಯಾನೇಜರ್ ಪ್ರವೀಣ್, ಮುಡಾ ಸದಸ್ಯರಾದ ಮಹೇಶ್, ಕಾರ್ತಿಕ್, ಕಮಲಾರಾಜು ಇದ್ದರು.