ಕನ್ನಡಪ್ರಭ ವಾರ್ತೆ ಮಾಗಡಿ
ತಾಲೂಕಿನ ಚಕ್ರಬಾವಿಯಲ್ಲಿ ಬಿಡಿಸಿಸಿ ಬ್ಯಾಂಕ್ ನಕಲಿ ಚಿನ್ನ ಹಗರಣ ಹಾಗೂ ಚಕ್ರಬಾವಿ ವಿಎಸ್‌ಎಸ್‌ಎನ್ ಹಗರಣದ ಬಗ್ಗೆ ಶನಿವಾರ ನಡೆಯಬೇಕಿದ್ದ ಹಾಲಿ, ಮಾಜಿ ಶಾಸಕರ ಬಹಿರಂಗ ಚರ್ಚೆಗೆ ಪೊಲೀಸ್ ಅಧಿಕಾರಿಗಳು ತಡೆದು ಬಹಿರಂಗ ಚರ್ಚೆ ಆಗದಂತೆ ಕ್ರಮ ಕೈಗೊಳ್ಳಲಾಯಿತು.ಬಹಿರಂಗ ಚರ್ಚೆ ಹಿನ್ನೆಲೆಯಲ್ಲಿ ತಹಸೀಲ್ದಾರ್ ಶರತ್ ಕುಮಾರ್ ಅವರು ಶುಕ್ರವಾರ ರಾತ್ರಿ ಚಕ್ರಬಾವಿಯಲ್ಲಿ ಸೆಕ್ಷನ್ 144 ಅಡಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿತ್ತು. ಇದರೊಂದಿಗೆ ಬೆಳಗ್ಗೆಯೇ ಹಾಲಿ-ಮಾಜಿ ಶಾಸಕರನ್ನು ಪೊಲೀಸರು ತಡೆದಿದ್ದಾರೆ. ಭ್ರಷ್ಟಾಚಾರ ಆರೋಪಗಳ ಚರ್ಚೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದ್ದರೂ, ವಾಗ್ದಾಳಿಗಳು ಮುಂದುವರಿಯುತ್ತಲೇ ಇವೆ.
ಕುದೂರು ಬಿಡಿಸಿಸಿ ಬ್ಯಾಂಕ್‌ನಲ್ಲಿ ನಕಲಿ ಖಾತೆಗಳಲ್ಲಿ ಸುಮಾರು 4.5 ಕೋಟಿ ರು. ಮೌಲ್ಯದ ನಕಲಿ ಚಿನ್ನವನ್ನಿಟ್ಟು, ಚಿನ್ನ ಪರೀಕ್ಷೆ ಮಾಡುವ ಮಹಿಳೆ ಹಾಗೂ ಆಕೆಯ ಪತಿ ಹಣ ದುರುಪಯೋಗಪಡಿಸಿಕೊಂಡಿದ್ದ ಪ್ರಕರಣ ಕಳೆದ ವರ್ಷ ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರು ಆಗಿರುವ ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರ ಸಹೋದರ ಎಚ್.ಎನ್. ಅಶೋಕ ಅವರ ಕೈವಾಡವಿದೆ. ಜೊತೆಗೆ ನಕಲಿ ಚಿನ್ನ ಪ್ರಕರಣದ ಆರೋಪಿಯಾಗಿರುವ ಮಹಿಳೆಯ ಆಸ್ತಿ, ಅಶೋಕ ಅವರ ಪತ್ನಿ ಹೆಸರಿನಲ್ಲಿದೆ ಎಂದು ಮಾಜಿ ಶಾಸಕ ಎ. ಮಂಜುನಾಥ್ ಆರೋಪವಾಗಿದೆ.ಜೊತೆಗೆ 2013ರಲ್ಲಿ ಚಕ್ರಬಾವಿ ವಿಎಸ್‌ಎಸ್‌ಎನ್‌ನಿಂದ ಒಟ್ಟು 80 ಲಕ್ಷ ಹಣವನ್ನು ಅಂದಿನ ಚುನಾವಣೆಗಾಗಿ ಬಾಲಕೃಷ್ಣ ಅವರ ಸಹೋದರ ಅಶೋಕ ಬಳಸಿಕೊಳ್ಳಲು ಪ್ರಯತ್ನ ಪಟ್ಟಿದ್ದರು ಎಂಬ ಈ ಸಂಬಂಧ ಯಾವುದೇ ದೂರು ನೀಡಿಲ್ಲ. ಹಿಂದೆಯು 12 ಕೋಟಿ ರು.ಲೂಟಿ ಹೊಡೆಯಲಾಗಿದೆ ಎಂದೆಲ್ಲ 2025ರಲ್ಲಿ ಮಾಜಿ ಶಾಸಕ ಎ. ಮಂಜುನಾಥ್ ಅವರು ಮಾಡಿದ್ದ ಗಂಭೀರ ಆರೋಪವು ಈಗ ಹಾದಿ ರಂಪ-ಬೀದಿ ರಂಪವಾಗಿ ಪರಿಣಮಿಸಿದೆ.
ಹೈಡ್ರಾಮಕ್ಕೆ ಬ್ರೇಕ್!
ಈ ಹೈಡ್ರಾಮದ ಭಾಗವಾಗಿ ಚಕ್ರಬಾವಿ ಗ್ರಾಮವು ಪೊಲೀಸ್ ಕಣ್ಗಾವಲಿಗೆ ಒಳಪಟ್ಟಿತು. ಮಾಗಡಿ ಡಿವೈಎಸ್ಪಿ ರವಿ ನೇತೃತ್ವದಲ್ಲಿ 150ಕ್ಕೂ ಹೆಚ್ಚು ಪೊಲೀಸರು ಬಿಗಿ ಭದ್ರತೆಯನ್ನು ಕೈಗೊಂಡಿದ್ದರು. ಬಹಿರಂಗ ಚರ್ಚೆಗೆ ಗ್ರಾಮದೊಳಗೆ ಪ್ರವೇಶಿಸಲು ಮುಂದಾದ ಶಾಸಕ ಎಚ್.ಸಿ. ಬಾಲಕೃಷ್ಣ ಹಾಗೂ ಅವರ ಸಹೋದರ ಅಶೋಕ್ ಅವರನ್ನು ಪೊಲೀಸರು ಹಲಸಬೆಲೆ ಗೇಟ್ ಬಳಿಯೇ ತಡೆದು ನಿಲ್ಲಿಸಿದರು.
ಇನ್ನೊಂದೆಡೆ, ಮಾಜಿ ಶಾಸಕ ಎ. ಮಂಜುನಾಥ್ ಅವರು ಚರ್ಚೆಗೆ ತೆರಳಲು ಮುಂದಾದಾಗ ಮಾಗಡಿಯ ಜೆಡಿಎಸ್ ಕಚೇರಿಯಲ್ಲೇ ಪೊಲೀಸರು ಅವರನ್ನು ತಡೆದು ನಿಲ್ಲಿಸಿದರು. ಕಾರು ಹತ್ತಿ ಚಕ್ರಭಾವಿಯತ್ತ ಹೊರಡಲು ಸಿದ್ಧವಾಗಿದ್ದ ಮಂಜುನಾಥ್ ಅವರಿಗೆ ದಿಗ್ಬಂಧನ ವಿಧಿಸಿ ಕಚೇರಿಯಲ್ಲೇ ಕೂರಿಸಲಾಯಿತು. ಈ ವೇಳೆ ಪೊಲೀಸರ ನಡೆಯನ್ನು ಖಂಡಿಸಿ ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.ಸದ್ಯಕ್ಕೆ ಪೊಲೀಸರ ಮಧ್ಯಸ್ಥಿಕೆಯಿಂದ ಬಹಿರಂಗ ಸಂಘರ್ಷಕ್ಕೆ ವಿರಾಮ ಬಿದ್ದಿದ್ದರೂ, ಭ್ರಷ್ಟಾಚಾರದ ಆರೋಪದ ಕಿಚ್ಚು ಮಾತ್ರ ತಣ್ಣಗಾಗಿಲ್ಲ. ಈವರೆಗೂ ವೈಯಕ್ತಿಕ ಆರೋಪಗಳಿಗೆ ಪಂಥಾಹ್ವಾನ ನೀಡಿ ಚರ್ಚೆಗಿಳಿದಿರುವ ಹಾಲಿ-ಮಾಜಿ ಶಾಸಕರು, ಅಭಿವೃದ್ಧಿ ಕಾರ್ಯಗಳಿಗೆ ಒಮ್ಮೆಯೂ ಚರ್ಚೆಗೆ ಸವಾಲೆಸೆದಿಲ್ಲ ಎನ್ನುವುದು ಮತದಾರರ ಬೇಸರಕ್ಕೆ ಕಾರಣವಾಗಿದೆ.ಪ್ರತಿನಿತ್ಯ ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಮಾಜಿ ಶಾಸಕರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು, ಇಲ್ಲವಾದರೆ ಬಹಿರಂಗ ಚರ್ಚೆಗೆ ನಮಗೆ ಅವಕಾಶ ನೀಡಬೇಕು "ಎಚ್.ಸಿ.ಬಾಲಕೃಷ್ಣ , ಶಾಸಕ
ಬಹುಕೋಟಿ ಹಗರಣದ ಎಲ್ಲ ದಾಖಲೆಗಳು ನನ್ನ ಬಳಿ ಇವೆ. ಅದನ್ನು ಬಹಿರಂಗಪಡಿಸುತ್ತೇನೆ. ಶನಿವಾರ ನಡೆಸಬೇಕಿದ್ದ ಚರ್ಚೆಗೆ ಪೊಲೀಸರ ಮೂಲಕ ತಡೆ ಹಿಡಿಯಲಾಗಿದೆ. ನಾನು ಹಾಗೂ ನನ್ನ ಸಹಾಯಕರಿಬ್ಬರೇ ಚರ್ಚೆಗೆ ಬರುವುದಾಗಿ ಹೇಳಿದ್ದರೂ, ರಾತ್ರೋರಾತ್ರಿ ಸೆಕ್ಷನ್ 144 ವಿಧಿಸಲಾಗಿದೆ. ಶಾಸಕರು ನನ್ನ ಕೈ ಹಿಡಿದು ಆರೋಪಗಳನ್ನು ಸಾಬೀತು ಮಾಡು ಎನ್ನುವ ಬದಲು, ತಮ್ಮ ತಪ್ಪು ಮುಚ್ಚಿಕೊಳ್ಳಲು ಪೊಲೀಸರನ್ನು ಬಳಸಿಕೊಂಡಿದ್ದಾರೆ.ಎ. ಮಂಜುನಾಥ್ ಶಾಸಕ