ಹಂಪಿ ಬೈ ನೈಟ್‌ಗೆ ಕರೆಂಟ್‌ ಬಿಲ್‌ ಕಾರ್ಮೋಡ

| Published : Jun 03 2024, 12:30 AM IST

ಸಾರಾಂಶ

ದೇಶ, ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಹಂಪಿಯಲ್ಲಿ ಅನುಷ್ಠಾನಿಸಿದ ಹಂಪಿ ಬೈನೈಟ್‌ ಕಾರ್ಯಕ್ರಮಕ್ಕೆ ಸಂಬಂಧಿಸಿ ₹75 ಲಕ್ಷ ವಿದ್ಯುತ್‌ ಬಿಲ್‌ ಬಾಕಿ ಇದೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ದೇಶ, ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಹಂಪಿಯಲ್ಲಿ ಅನುಷ್ಠಾನಿಸಿದ ಹಂಪಿ ಬೈನೈಟ್‌ ಕಾರ್ಯಕ್ರಮಕ್ಕೆ ಸಂಬಂಧಿಸಿ ₹75 ಲಕ್ಷ ವಿದ್ಯುತ್‌ ಬಿಲ್‌ ಬಾಕಿ ಇದೆ. ಈ ಹಣ ಪಾವತಿ ಮಾಡದ ಹಿನ್ನೆಲೆಯಲ್ಲಿ ಮುಂದಿನ ವರ್ಷದ ಕಾರ್ಯಕ್ರಮಕ್ಕೆ ಕಾರ್ಮೋಡ ಕವಿದಿದೆ.

ಹಂಪಿ ಬೈ ನೈಟ್ ಕಾರ್ಯಕ್ರಮವನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿತ್ತು. ಬೆಂಗಳೂರು ಮೂಲದ ಇನ್ನೋವೇಟಿವ್‌ ಲೈಟಿಂಗ್ ಸಿಸ್ಟಂ ಸಂಸ್ಥೆ ಈ ಕಾರ್ಯಕ್ರಮವನ್ನು 2023ರ ಅಕ್ಟೋಬರ್‌ನಿಂದ 2024ರ ಮಾರ್ಚ್‌ ವರೆಗೆ ನಡೆಸಿದೆ. ಈ ಹಿಂದಿನ ಬಾಕಿ ಮೊತ್ತ ಸೇರಿ ₹75 ಲಕ್ಷ ಕರೆಂಟ್‌ ಬಿಲ್‌ ಪಾವತಿಸಬೇಕು ಎಂದು ಹೊಸಪೇಟೆಯ ಜೆಸ್ಕಾಂ ಕಚೇರಿ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ. ಒಂದು ವೇಳೆ ಈ ಹಣ ಪಾವತಿ ಮಾಡದಿದ್ದರೆ ಮುಂದಿನ ವರ್ಷ ವಿದ್ಯುತ್‌ ಸರಬರಾಜು ಕಡಿತಗೊಳಿಸಲಾಗುವುದು ಎಂದು ಜೆಸ್ಕಾಂ ಇಲಾಖೆಯ ಅಧಿಕಾರಿ ದಯಾನಂದ್‌ ತಿಳಿಸಿದರು.

ಹಂಪಿ ಬೈ ನೈಟ್‌ಗೆ ಕರೆಂಟ್ ಪ್ರಾಬ್ಲಂ: ಹಂಪಿಯ ಸ್ಮಾರಕಗಳನ್ನು ಬೆಳಕಿನ ಸಿಂಚನದಲ್ಲಿ ವೀಕ್ಷಿಸಲು ಹಂಪಿ ಬೈ ನೈಟ್‌ ಕಾರ್ಯಕ್ರಮ ರೂಪಿಸಲಾಗಿದೆ. ವಿರೂಪಾಕ್ಷೇಶ್ವರ ದೇಗುಲದ ರಥಬೀದಿಯ ಎದುರು ಬಸವಣ್ಣ ಮಂಟಪ ಬಳಿ ಈ ಕಾರ್ಯಕ್ರಮ ರೂಪಿಸಲಾಗಿದ್ದು, ಇದಕ್ಕೆ ಉತ್ತಮ ಸ್ಪಂದನೆ ದೊರೆತಿದೆ. ಒಂದು ವೇಳೆ ಈ ಮೊತ್ತ ಪಾವತಿಸದಿದ್ದಲ್ಲಿ ವಿನೂತನ ಯೋಜನೆ ಹಳ್ಳ ಹಿಡಿಯುವ ಸಾಧ್ಯತೆ ಇದೆ.

6000 ಪ್ರವಾಸಿಗರಿಂದ ವೀಕ್ಷಣೆ: ಇನ್ನೋವೇಟಿವ್‌ ಲೈಟಿಂಗ್ ಸಿಸ್ಟಂ ಸಂಸ್ಥೆ ಒಬ್ಬರಿಗೆ ₹500ರಂತೆ ಟಿಕೆಟ್‌ ದರ ವಿಧಿಸಿ ಹಂಪಿಯ ವಿರೂಪಾಕ್ಷೇಶ್ವರ ದೇವಾಲಯದ ರಥಬೀದಿಯ ಎದುರು ಬಸವಣ್ಣ ಮಂಟಪದ ಬಳಿ ಪ್ರದರ್ಶನ ನಡೆಸಿದೆ. ಇನ್ನು ಐದು ವರ್ಷದವರೆಗೆ ಮಕ್ಕಳಿಗೆ ಉಚಿತ ಪ್ರವೇಶ ಇದ್ದು, ಐದರಿಂದ 10 ವರ್ಷದವರೆಗೆ ₹200 ಟಿಕೆಟ್‌ ದರ ವಿಧಿಸಿತ್ತು. 2023ರ ಅಕ್ಟೋಬರ್‌ದಿಂದ 2024ರ ಮಾರ್ಚ್‌ವರೆಗೆ ದೇಶ, ವಿದೇಶಿ ಸೇರಿ 6000 ಪ್ರವಾಸಿಗರು ವೀಕ್ಷಿಸಿದ್ದಾರೆ.

ಮೆಚ್ಚುಗೆ ಗಳಿಸಿದ ಕಾರ್ಯಕ್ರಮ: ಜಿ-20 ಶೃಂಗಸಭೆ ವೇಳೆ ವಿದೇಶಿ ಪ್ರತಿನಿಧಿಗಳು ಈ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಪ್ರಶಂಸೆ ವ್ಯಕ್ತವಾದ ಬಳಿಕವಷ್ಟೇ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಹಂಪಿ ಉತ್ಸವ, ಕರ್ನಾಟಕ ಸಂಭ್ರಮ ವೇಳೆ ಮಾತ್ರ ಪ್ರದರ್ಶನ ರದ್ದುಪಡಿಸಲಾಗಿತ್ತು. ಉಳಿದಂತೆ ನಿತ್ಯ ಪ್ರದರ್ಶನ ನಡೆಸಲಾಗಿತ್ತು.

ಹಂಪಿ ಬೈ ನೈಟ್ ಕಾರ್ಯಕ್ರಮದ ವಿದ್ಯುತ್‌ ಬಿಲ್‌ ಪಾವತಿ ಕುರಿತು ಪರಿಶೀಲಿಸಲಾಗುವುದು. ಪ್ರವಾಸೋದ್ಯಮ ಇಲಾಖೆ ಜತೆ ಚರ್ಚಿಸುತ್ತೇವೆ ಎನ್ನುತ್ತಾರೆ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಂಗನಾಥ.

ಹಂಪಿ ಬೈ ನೈಟ್‌ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆತಿದೆ. ಇದನ್ನು 6000 ಪ್ರವಾಸಿಗರು ವೀಕ್ಷಿಸಿದ್ದಾರೆ. ಮುಂದಿನ ವರ್ಷವೂ ಕಾರ್ಯಕ್ರಮ ನಡೆಸಲಾಗುವುದು. ಕರೆಂಟ್‌ ಬಿಲ್‌ ಬಾಕಿ ಬಗ್ಗೆ ನನಗೆ ತಿಳಿದಿಲ್ಲ. ನಮ್ಮ ಪಾಲಿನ ಬಿಲ್‌ ಪಾವತಿ ಮಾಡಿದ್ದೇವೆ ಎನ್ನುತ್ತಾರೆ ಇನ್ನೋವೇಟಿವ್‌ ಲೈಟಿಂಗ್ ಸಿಸ್ಟಂ ಸಂಸ್ಥೆ ಸಿಇಒ ಕೃಷ್ಣ ಕುಮಾರ.