ಸಾರಾಂಶ
ಬೆಸ್ಕಾಂ (ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ) ಸಂಸ್ಥೆ ತನ್ನ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ಹೊಸ ವಿದ್ಯುತ್ ಸಂಪರ್ಕ ಪಡೆಯಲು ಸ್ಮಾರ್ಟ್ ಮೀಟರ್ ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ.
ಶ್ರೀಕಾಂತ್ ಎನ್. ಗೌಡಸಂದ್ರ
ಬೆಂಗಳೂರು
ಬೆಸ್ಕಾಂ (ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ) ಸಂಸ್ಥೆ ತನ್ನ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ಹೊಸ ವಿದ್ಯುತ್ ಸಂಪರ್ಕ ಪಡೆಯಲು ಸ್ಮಾರ್ಟ್ ಮೀಟರ್ ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ. ತನ್ಮೂಲಕ ವಿವಿಧ ದರ ಏರಿಕೆಗಳಿಂದ ತತ್ತರಿಸಿರುವ ಸಾರ್ವಜನಿಕರಿಗೆ ಇದೀಗ ವಿದ್ಯುತ್ ಮೀಟರ್ ದರ ಶೇ.400 ರಿಂದ ಶೇ.800 ರಷ್ಟು ಏರಿಕೆ ಮಾಡಿ ಹೊಸ ಶಾಕ್ ನೀಡಿದೆ.
ಜ.15 ರಿಂದ ಅನ್ವಯವಾಗುವಂತೆ ಬೆಸ್ಕಾಂ ವ್ಯಾಪ್ತಿಯಲ್ಲಿ ತೆಗೆದುಕೊಳ್ಳುವ ಎಲ್ಲಾ ತಾತ್ಕಾಲಿಕ ವಿದ್ಯುತ್ ಸಂಪರ್ಕಕ್ಕೂ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಲಾಗಿದೆ. ಇನ್ನು ಹೊಸ ಕಾಯಂ ಸಂಪರ್ಕಕ್ಕೂ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಿದ್ದು, ಪ್ರಿಪೇಯ್ಡ್ ಅಥವಾ ಪೋಸ್ಟ್ ಪೇಯ್ಡ್ ಎಂಬ ಆಯ್ಕೆ ನೀಡಿದೆ.
ಸಂಪರ್ಕವೇ ದುಬಾರಿ:
ಸಾಮಾನ್ಯ ಮೀಟರ್‌ಗಿಂತ ಹೊಸ ಮೀಟರ್ ಶೇ.400 ರಿಂದ 800 ರಷ್ಟು ದುಬಾರಿಯಾಗಿದ್ದು, ಜನಸಾಮಾನ್ಯರು ವಿದ್ಯುತ್ ಸಂಪರ್ಕ ಪಡೆಯುವುದೇ ದುಬಾರಿಯಾಗಿದೆ. ಸ್ಮಾರ್ಟ್ ಮೀಟರ್‌ಗೆ ಜನಸಾಮಾನ್ಯರಿಂದಲೂ ದುಬಾರಿ ಮೊತ್ತ ವಸೂಲಿ ಮಾಡುವ ಬೆಸ್ಕಾಂ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಸಿಂಗಲ್ ಫೇಸ್‌ನ ಒಂದು ಸಾಮಾನ್ಯ ಮೀಟರ್ ಬೆಲೆ ಕೇವಲ 980 ರು. ಇತ್ತು. ಇದೀಗ ಸಿಂಗಲ್ ಫೇಸ್ ಸ್ಮಾರ್ಟ್ ಮೀಟರ್‌ಗೆ ಜಿಎಸ್ಟಿ ಸೇರಿ 4,998 ರು. ಪಾವತಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಇನ್ನು 2450 ರು.ಗೆ ಸಿಗುತ್ತಿದ್ದ ಎಸ್‌ಪಿ-2 ಮೀಟರ್‌ಗೆ ಇದೀಗ ಸ್ಮಾರ್ಟ್ ಮೀಟರ್ ರೂಪದಲ್ಲಿ 8,880 ರು. ತೆರಬೇಕಾಗಿದೆ. ಕೇವಲ 3,450 ರು. ಇದ್ದ ಎಸ್‌ಪಿ-3 (3ಫೇಸ್) ಮೀಟರ್‌ಗೆ ಬರೋಬ್ಬರಿ 28,080 ರು. ಪಾವತಿಸಬೇಕಾಗಿದೆ. ಇದರಿಂದ ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ದಾವಣಗೆರೆ, ಚಿತ್ರದುರ್ಗ, ರಾಮನಗರ ಭಾಗದ ಗ್ರಾಮೀಣ ಭಾಗದ ಜನರಿಗೆ ಏ.1ರಿಂದ ಅನ್ವಯವಾಗುವ ವಿದ್ಯುತ್ ದರ ಏರಿಕೆ ಶಾಕ್‌ಗೆ ಮೊದಲೇ ಹೊಸ ಶಾಕ್ ನೀಡಿದೆ.
ರಿಚಾರ್ಜ್ ಮಾಡಿಸದಿದ್ದರೆ ಪವರ್ ಕಟ್:
ಸ್ಮಾರ್ಟ್ ಮೀಟರ್ ನಿರ್ವಹಣೆ ಬಗ್ಗೆ ಬೆಸ್ಕಾಂ ಮಾರ್ಗಸೂಚಿ ಹೊರಡಿಸಿದ್ದು, ಪ್ರಿಪೇಯ್ಡ್ ಗ್ರಾಹಕರು ಕನಿಷ್ಠ 100 ರು. ಅಥವಾ ಒಂದು ವಾರದ ಸರಾಸರಿ ಬಳಕೆಗೆ ಸಮಾನವಾದ ಮೊತ್ತವನ್ನು ಕನಿಷ್ಠ ರಿಚಾರ್ಜ್ ಮಾಡಿಸಬೇಕು. ಗರಿಷ್ಠ ರಿಚಾರ್ಜ್‌ಗೆ ಯಾವುದೇ ಮಿತಿ ಇರುವುದಿಲ್ಲ. ಇದಲ್ಲದೆ ಮಾಸಿಕ ನಿಗದಿತ ಶುಲ್ಕವನ್ನು ತಿಂಗಳ ಮೊದಲ ದಿನವೇ ಕಡಿತ ಮಾಡಲಾಗುತ್ತದೆ. ಬ್ಯಾಲೆನ್ಸ್ ಶೂನ್ಯವಾದರೆ ಸಂಪರ್ಕ ಕಡಿತಗೊಳಿಸಲಾಗುತ್ತದೆ.ಈ ಬಗ್ಗೆ ಅಲರ್ಟ್ ಕೊಡಿಸಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆ ನಡುವೆಯೇ ವಿದ್ಯುತ್ ಸಂಪರ್ಕ ಕಟ್ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಹೀಗಾಗಿ ಎಎಂಐ ಸಾಫ್ಟ್‌ವೇರ್ ಮೂಲಕವೇ ಬೆಸ್ಕಾಂ ಸಂಪರ್ಕ ಕಡಿತ ಮಾಡಲಿದೆ.
ನಿರ್ವಹಣೆ ಶುಲ್ಕದ ಹೊರೆ:
ಈ ಮೀಟರ್‌ಗಳ ನಿರ್ವಹಣೆಗೆ ಎಎಂಐ (ಅಡ್ವಾನ್ಸ್ ಮೀಟರಿಂಗ್ ಇನ್‌ಫ್ರಾಸ್ಟ್ರಕ್ಚರ್) ಸಾಫ್ಟ್‌ವೇರ್ ನಿರ್ವಹಣೆಗೆ ಖಾಸಗಿ ಕಂಪೆನಿಗೆ ಬೆಸ್ಕಾ ಗುತ್ತಿಗೆ ನೀಡಿದ್ದು, ಇದಕ್ಕೆ ಪ್ರತಿ ತಿಂಗಳು 300 ರು. ನಿರ್ವಹಣಾ ಶುಲ್ಕ ಪಾವತಿಸಬೇಕಾಗಿದೆ. ಈ ಮೂಲಕ ಹೊಸ ಹೊರೆ ಶುರುವಾಗಲಿದೆ ಎಂದು ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸಿ.ರಮೇಶ್ ಆರೋಪಿಸಿದ್ದಾರೆ.
ಏನಿದು ಸ್ಮಾರ್ಟ್ ಮೀಟರ್?:
ಕೇಂದ್ರ ಸರ್ಕಾರವು ಕೇಂದ್ರ ವಿದ್ಯುತ್ ನೀತಿ-2019ರ ಅಡಿ ಎಲ್ಲಾ ಮೀಟರ್‌ಗಳನ್ನು ಸ್ಮಾರ್ಟ್ ಮೀಟರ್ ಆಗಿ ಬದಲಾಯಿಸಿ ಪ್ರಿಪೇಯ್ಡ್ ಮಾಡಬೇಕು. ಮೊಬೈಲ್‌ನಂತೆ ಮೊದಲು ಗ್ರಾಹಕರು ಹಣ ಪಾವತಿಸಿ ರೀಚಾರ್ಜ್ ಮಾಡಿ ಆ ಮೊತ್ತದಷ್ಟು ವಿದ್ಯುತ್ ಮಾತ್ರ ಬಳಸಬೇಕು. ಪ್ರಾಥಮಿಕವಾಗಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಈ ಮೀಟರ್ ಕಡ್ಡಾಯಗೊಳಿಸಬೇಕು ಎಂದು ಹೇಳಿತ್ತು.
ಕೆಇಆರ್‌ಸಿ ನೀಡಿದ್ದ ಗಡುವಿನಂತೆ ಫೆ.15 ರಿಂದ ಬೆಸ್ಕಾಂ ವ್ಯಾಪ್ತಿಯ ಎಂಟೂ ಜಿಲ್ಲೆಗಳಲ್ಲಿ ಹೊಸ ಸಂಪರ್ಕಕ್ಕೆ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಲಾಗಿದೆ. ತಾತ್ಕಾಲಿಕ ಸಂಪರ್ಕಕ್ಕೆ ಸ್ಮಾರ್ಟ್ ಜತೆಗೆ ಪ್ರಿಪೇಯ್ಡ್ ಪಾವತಿ ವ್ಯವಸ್ಥೆ ಕಡ್ಡಾಯಗೊಳಿಸಲಾಗಿದೆ.
ಸಿದ್ಧತೆ ಇಲ್ಲದೆ ಅನಗತ್ಯ ಚಾಲನೆ:
ಪ್ರಿಪೇಯ್ಡ್ ಮೀಟರ್‌ಗಳನ್ನು ಅಳವಡಿಸಿದರೆ ಎಎಂಐ ತಂತ್ರಾಂಶ ಮೂಲಕವೇ ಸಂಪರ್ಕ ನೀಡುವ ಕಡಿತಗೊಳಿಸುವ ಹಾಗೂ ಮೀಟರ್ ರೀಡ್ ಮಾಡುವ ವ್ಯವಸ್ಥೆ ಆಗಬೇಕು. ಆದರೆ, ಇಂತಹ ಯಾವುದೇ ಸಿದ್ಧತೆಯನ್ನೂ ಬೆಸ್ಕಾಂ ಮಾಡಿಕೊಂಡಿಲ್ಲ. ಹೊಸ ಮೀಟರ್‌ಗೆ ಅರ್ಜಿ ಸಲ್ಲಿಸಿದರೆ ಮೀಟರ್ ಕೂಡ ಬರುತ್ತಿಲ್ಲ. ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ವ್ಯವಸ್ಥೆಯಿಂದ ಯೋಜನೆಯ ಮೂಲ ಉದ್ದೇಶವೇ ಈಡೇರುತ್ತಿಲ್ಲ. ಹೀಗಿದ್ದರೂ ತರಾತುರಿಯಾಗಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಕೇರಳ, ಆಂಧ್ರ, ತೆಲಂಗಾಣದಲ್ಲಿ ಡೆಮೋ ಮಾಡುತ್ತಿದ್ದರೆ ರಾಜ್ಯದಲ್ಲಿ ಏಕಾಏಕಿ ಅನುಷ್ಠಾನಗೊಳಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.ಈಗಲೇ 3-ಫೇಸ್ ಸ್ಮಾರ್ಟ್ ಮೀಟರ್ ಲಭ್ಯವಿಲ್ಲ
ಯೋಜನೆಗೆ ಚಾಲನೆ ನೀಡಿದ ಎರಡೇ ವಾರದಲ್ಲಿ 3-ಫೇಸ್ ಸ್ಮಾರ್ಟ್ ಮೀಟರ್ ಪೂರೈಕೆ ಸ್ಥಗಿತಗೊಂಡಿದೆ. ಹಣ ಪಾವತಿಸಿ ಕಾಯುತ್ತಿದ್ದರೂ ಸ್ಮಾರ್ಟ್ ಮೀಟರ್ ಲಭ್ಯವಾಗುತ್ತಿಲ್ಲ. ಸಾಫ್ಟ್‌ವೇರ್‌ನಲ್ಲೂ ತೀವ್ರ ಸಮಸ್ಯೆಯಾಗಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.
ಮೀಟರ್ ಮಾದರಿಹಳೇ ದರಸ್ಮಾರ್ಟ್ ಮೀಟರ್ ದರಸಿಂಗಲ್ ಫೇಸ್ ಮೀಟರ್ - 950 ರು.4,998 ರು. ಎಸ್ಪಿ-2 ಮೀಟರ್2,400 ರು.9,000 ರು.ತ್ರಿಫೇಸ್ ಮೀಟರ್ (ಎಲ್‌ಟಿ ಸಿಟಿ)2,500 ರು.28,000 ರು.
ಸದ್ಯದಲ್ಲೇ ರಾಜ್ಯಾದ್ಯಂತ ವಿಸ್ತರಣೆ ಇತ್ತೀಚೆಗೆ ಇಂಧನ ಇಲಾಖೆ ಸಚಿವ ಕೆ.ಜೆ.ಜಾರ್ಜ್ ನೇತೃತ್ವದಲ್ಲಿ ಸಭೆ ನಡೆಸಿದ್ದು ಬೆಸ್ಕಾಂನಲ್ಲಿ ಜಾರಿಗೆ ತರುತ್ತಿರುವ ದರವನ್ನೇ ರಾಜ್ಯದ ಇತರೆ ಎಸ್ಕಾಂಗಳ ವ್ಯಾಪ್ತಿಯಲ್ಲೂ ಜಾರಿ ಮಾಡಬೇಕು. ಏಕರೂಪ ದರ ನೀತಿ ಅನ್ವಯವಾಗಬೇಕು ಎಂದು ನಿರ್ಧಾರ ಮಾಡಲಾಗಿದೆ. ಅದರಂತೆ ಸದ್ಯದಲ್ಲೇ ಇತರೆ ಎಸ್ಕಾಂಗಳಲ್ಲೂ ಸದ್ಯದಲ್ಲೇ ಸ್ಮಾರ್ಟ್ ಮೀಟರ್ ಕಡ್ಡಾಯವಾಗಲಿದ್ದು, ಈ ಬಗ್ಗೆ ಎಸ್ಕಾಂಗಳು ಕೆಇಆರ್‌ಸಿಗೂ ಪ್ರಮಾಣಪತ್ರ ಸಲ್ಲಿಕೆ ಮಾಡಿವೆ.