ನೀರಾವರಿ ಫೀಡರ್‌ಗಳ ಮೂಲಕ ಸಂಜೆ 6 ರಿಂದ ಬೆಳಗ್ಗೆ 6 ಗಂಟೆವರೆಗೆ ಸಿಂಗಲ್‌ ಫೇಸ್‌ ವಿದ್ಯುತ್‌ ಪೂರೈಕೆ : ಬೆಸ್ಕಾಂ

| N/A | Published : Feb 17 2025, 01:33 AM IST / Updated: Feb 17 2025, 06:01 AM IST

ಸಾರಾಂಶ

 ತೋಟದ ಮನೆಗಳಿಗೆ ರಾತ್ರಿ ವೇಳೆ ನೀಡುತ್ತಿದ್ದ ಸಿಂಗಲ್‌ ಫೇಸ್‌ ವಿದ್ಯುತ್‌ ಪೂರೈಕೆ ನಿಲ್ಲಿಸಿದ್ದ ಬಗ್ಗೆ ವಿವಿಧ ಜಿಲ್ಲೆಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ನೀರಾವರಿ ಫೀಡರ್‌ಗಳ ಮೂಲಕ ಸಂಜೆ 6 ರಿಂದ ಬೆಳಗ್ಗೆ 6 ಗಂಟೆವರೆಗೆ ಸಿಂಗಲ್‌ ಫೇಸ್‌ ವಿದ್ಯುತ್‌ ಪೂರೈಕೆ  - ಬೆಸ್ಕಾಂ ಸ್ಪಷ್ಟ 

 ಬೆಂಗಳೂರು : ಬೆಸ್ಕಾಂ ವ್ಯಾಪ್ತಿಯಲ್ಲಿನ ತೋಟದ ಮನೆಗಳಿಗೆ ರಾತ್ರಿ ವೇಳೆ ನೀಡುತ್ತಿದ್ದ ಸಿಂಗಲ್‌ ಫೇಸ್‌ ವಿದ್ಯುತ್‌ ಪೂರೈಕೆ ನಿಲ್ಲಿಸಿದ್ದ ಬಗ್ಗೆ ವಿವಿಧ ಜಿಲ್ಲೆಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ನೀರಾವರಿ ಫೀಡರ್‌ಗಳ ಮೂಲಕ ಸಂಜೆ 6 ರಿಂದ ಬೆಳಗ್ಗೆ 6 ಗಂಟೆವರೆಗೆ ಸಿಂಗಲ್‌ ಫೇಸ್‌ ವಿದ್ಯುತ್‌ ಪೂರೈಕೆ ಮಾಡುವುದಾಗಿ ಬೆಸ್ಕಾಂ ಸ್ಪಷ್ಟಪಡಿಸಿದೆ.

ಬೆಸ್ಕಾಂ ವ್ಯಾಪ್ತಿಯಲ್ಲಿನ ತೋಟದ ಮನೆಗಳಿಗೆ ಕೃಷಿ ಪಂಪ್‌ಸೆಟ್‌ಗಳಿಗೆ ಅನುವಾಗುವಂತೆ ನಿಗದಿತ ಅವಧಿಯಷ್ಟು ಮೂರು ಫೇಸ್‌ ವಿದ್ಯುತ್‌ ಪೂರೈಸಲಾಗುತ್ತಿತ್ತು. ಉಳಿದಂತೆ ರಾತ್ರಿ ವೇಳೆ ತೋಟದ ಮನೆಗಳಿಗೆ ತೊಂದರೆ ಆಗದಂತೆ ನಿರಂತರವಾಗಿ ನೀರಾವರಿ ಫೀಡರ್‌ ಮೂಲಕವೇ ಸಿಂಗಲ್‌ ಫೇಸ್‌ ವಿದ್ಯುತ್‌ ಪೂರೈಸಲಾಗುತ್ತಿತ್ತು. ಆದರೆ, ಇತ್ತೀಚೆಗೆ ಸಿಂಗಲ್‌ ಫೇಸ್‌ ವಿದ್ಯುತ್‌ಗೆ ಕಂಡನ್ಸರ್‌ ಹಾಕಿ ಕೃಷಿ ಪಂಪ್‌ಸೆಟ್‌ ಚಾಲೂ ಮಾಡುತ್ತಿದ್ದಾರೆ ಎಂಬ ನೆಪ ನೀಡಿ ಬೆಸ್ಕಾಂ ರಾತ್ರಿ ವೇಳೆ ವಿದ್ಯುತ್‌ ಪೂರೈಕೆ ಸ್ಥಳಗಿತಗೊಳಿಸಿತ್ತು.

ಪರೀಕ್ಷೆ ಸಮಯ ಹತ್ತಿರವಾದಾಗ ಬೆಸ್ಕಾಂ ತೆಗೆದುಕೊಂಡ ವೈಜ್ಞಾನಿಕ ನಡೆಗಳ ಬಗ್ಗೆ ವಿವಿಧ ಜಿಲ್ಲೆಗಳಲ್ಲಿ ಬೆಸ್ಕಾಂ ಕಚೇರಿಗಳ ಎದುರು ರೈತರು ಪ್ರತಿಭಟನೆ ನಡೆಸಿದರು. ಓವರ್‌ ಲೋಡ್‌ ಎಂಬ ಸುಳ್ಳು ನೆಪ ನೀಡಿ ಅನಗತ್ಯವಾಗಿ ರೈತರಿಗೆ ಕಿರುಕುಳ ನೀಡಲಾಗುತ್ತಿದೆ. ಕಂಡನ್ಸರ್‌ ಹಾಕಿಕೊಂಡು ನಡೆಸುವವರಿಗೆ ಸಮಸ್ಯೆ ಮಾಡುತ್ತಿಲ್ಲ. ಜನಸಾಮಾನ್ಯರಿಗೆ ಸಮಸ್ಯೆ ಮಾಡುತ್ತಿದ್ದೀರಿ ಎಂದು ಕಿಡಿ ಕಾರಿದ್ದರು.

ವಿದ್ಯುತ್‌ ಪೂರೈಕೆಗೆ ಬದ್ಧ: ಈ ಹಿನ್ನೆಲೆಯಲ್ಲಿ ಭಾನುವಾರ ಪತ್ರಿಕಾ ಹೇಳಿಕೆ ನೀಡಿರುವ ಬೆಸ್ಕಾಂ ಸಂಸ್ಥೆಯು, ರೈತರ ಪಂಪ್ ಸೆಟ್ ಗಳಿಗೆ ಹಗಲಿನ ವೇಳೆ 4 ಗಂಟೆಗಳ ಕಾಲ ಹಾಗೂ ರಾತ್ರಿ ವೇಳೆ 3 ಗಂಟೆಗಳ ಕಾಲ ಮೂರು ಫೇಸ್ ವಿದ್ಯುತ್ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿನ ಮನೆಗಳಿಗೆ ನಿರಂತರ ಜ್ಯೋತಿ ಫೀಡರ್ ಮೂಲಕ ದಿನದ 24 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ.

ಇದನ್ನು ಹೊರತುಪಡಿಸಿ ನೀರಾವರಿ ಫೀಡರ್‌ಗಳ ಮೂಲಕ ತೋಟದ ಮನೆಗಳಿಗೆ ಗೃಹೊಪಯೋಗಿ ಬಳಕೆಗೆ ಮಾತ್ರ ಹಾಗೂ ಅಲ್ಲಿ ವಾಸಿಸುವ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿ ಗಮನದಲ್ಲಿರಿಸಿಕೊಂಡು ಸಿಂಗಲ್ ಫೇಸ್ ವಿದ್ಯುತ್ ಅನ್ನು ಸಂಜೆ 6 ರಿಂದ ಬೆಳಗ್ಗೆ 6ರವರೆಗೆ (ಮೂರು ಗಂಟೆಗಳ ಮೂರು ಫೇಸ್ ವಿದ್ಯುತ್ ಹೊರತಾಗಿ) ಫೀಡರ್‌ಗಳಿಗೆ ಓಪನ್ ಡೆಲ್ಟಾ ಮೂಲಕ ನೀಡಲಾಗುವುದು.

ಆದರೆ ರಾತ್ರಿ ವೇಳೆ ಕೆಲವರು ಸಿಂಗಲ್ ಫೇಸ್ ಕೃಷಿ ಪಂಪ್ ಸೆಟ್‌ಗಳನ್ನು ನೀರಾವರಿ ಫೀಡರ್‌ಗಳ ಮೂಲಕ ಬಳಸುತ್ತಿರುವುದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಆದ್ದರಿಂದ ಈ ಸಮಯದಲ್ಲಿ (ಸಂಜೆ 6 ರಿಂದ ಬೆಳಗ್ಗೆ 6ರವರೆಗೆ) ಸಿಂಗಲ್ ಫೇಸ್ ಕೃಷಿ ಪಂಪ್ ಸೆಟ್‌ಗಳನ್ನು ಬಳಸದಂತೆ ರೈತರಿಗೆ ಮನವಿ ಮಾಡುವುದಾಗಿ ಬೆಸ್ಕಾಂ ಹೇಳಿದೆ.