2025ರ ಹೊಸಿನಲ್ಲಿ ನಿಂತು ತಿರುಗಿ ನೋಡಿದರೆ ಚಿತ್ರರಂಗದ ಚಿತ್ರ ಅಷ್ಟೇನೂ ವರ್ಣರಂಜಿತವಾಗಿಲ್ಲ ಎಂದು ಗೊತ್ತಾಗುತ್ತದೆ ಎಂಬ ವಿಷಾದದ ಟಿಪ್ಪಣಿಯೊಂದಿಗೆ ಚಿತ್ರೋದ್ಯಮದ ಸಮೀಕ್ಷೆಯನ್ನು ಮುಗಿಸಬೇಕಾಗಿ ಬಂದಿದೆ.

2025ರ ಹೊಸಿನಲ್ಲಿ ನಿಂತು ತಿರುಗಿ ನೋಡಿದರೆ ಚಿತ್ರರಂಗದ ಚಿತ್ರ ಅಷ್ಟೇನೂ ವರ್ಣರಂಜಿತವಾಗಿಲ್ಲ ಎಂದು ಗೊತ್ತಾಗುತ್ತದೆ ಎಂಬ ವಿಷಾದದ ಟಿಪ್ಪಣಿಯೊಂದಿಗೆ ಚಿತ್ರೋದ್ಯಮದ ಸಮೀಕ್ಷೆಯನ್ನು ಮುಗಿಸಬೇಕಾಗಿ ಬಂದಿದೆ. ಅತಿ ಹೆಚ್ಚು ಸಂಖ್ಯೆಯ ಚಿತ್ರಗಳು ಬಿಡುಗಡೆಯಾಗಿವೆ. ಅತಿ ಕಡಿಮೆ ಗೆಲುವನ್ನು ಕಂಡ ವರ್ಷ ಇದು. ವರ್ಷದ ಕೊನೆಗೆ ಒಂದರ ಹಿಂದೊಂದರಂತೆ ಮೂರು ಸ್ಟಾರ್ ಸಿನಿಮಾಗಳು ತೆರೆ ಕಂಡರೂ ಯಶಸ್ಸು ಅಡ್ಡಗೋಡೆಯ ಮೇಲಿನ ದೀಪ.

ಇವೆಲ್ಲದರ ನಡುವೆಯೇ ಚಿತ್ರರಂಗ ಹಲವು ಅನಪೇಕ್ಷಿತ ಸಂಗತಿಗಳಿಗೆ ಸಾಕ್ಷಿಯಾಯಿತು.

1. ವಿಮರ್ಶೆಗೆ ಕಡಿವಾಣ:

ಡೆವಿಲ್ ಚಿತ್ರದ ಮೂಲಕ ಹೊಸ ಸಂಪ್ರದಾಯವೊಂದು ಕನ್ನಡದಲ್ಲಿ ಆರಂಭವಾಯಿತು. ಸಿನಿಮಾಗಳಿಗೆ ಕೆಟ್ಟ ವಿಮರ್ಶೆ ಬರೆಯದಂತೆ ಚಿತ್ರತಂಡ ನ್ಯಾಯಾಲಯದಿಂದ ಆದೇಶ ತಂದು ಚಿತ್ರರಸಿಕರ ಕೈ ಕಟ್ಟಿಹಾಕುವ ಪ್ರಯತ್ನ ಮಾಡಿತು. ಇದನ್ನು ಮಾರ್ಕ್ ಮತ್ತು 45 ಚಿತ್ರಗಳು ಮುಂದುವರಿಸಿದವು. ಈ ಮೂಲಕ ಎಷ್ಟೇ ದೊಡ್ಡ ಸಿನಿಮಾ ಆದರೂ ಪ್ರೇಕ್ಷಕರ ಅಭಿಪ್ರಾಯಕ್ಕೆ ಅಂಜುತ್ತದೆ ಅನ್ನುವುದನ್ನು ತೋರಿಸಿಕೊಟ್ಟಿತು. ಕಲಾವಿದರು ಮತ್ತು ನಿರ್ಮಾಪಕರು ಈ ಮಟ್ಟಿಗಿನ ಭಯವನ್ನು ಹೊಂದುವಂತೆ ಮಾಡಿದ ಖ್ಯಾತಿ ಸೋಷಿಯಲ್ ಮೀಡಿಯಾದ ವಿಮರ್ಶಕರಿಗೆ ಸೇರಬೇಕು. ಈ ನಿರ್ಧಾರದ ಕುರಿತೂ ಸೋಷಿಯಲ್ ಮೀಡಿಯಾ ಚರ್ಚಿಸಿತು. ಪ್ರೇಕ್ಷಕರ ಅಭಿಪ್ರಾಯ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗಿದೆ ಎಂದು ಅನೇಕರು ಚಿತ್ರತಂಡದ ನಿರ್ಧಾರವನ್ನು ಟೀಕಿಸಿದರು.

2. ವರ್ಷಾಂತ್ಯದ ವಿವಾದ:

ಸಿನಿಮಾಗಳಿಗಿಂತ ಹೆಚ್ಚು ಚರ್ಚೆಯಾದದ್ದು ವರ್ಷಾಂತ್ಯದಲ್ಲಿ ನಡೆದ ಮಾತಿನ ಜಗಳ. ಸುದೀಪ್ ಆಡಿದ ಮಾತೊಂದು ಗುರಿಮುಟ್ಟಿ, ಪ್ರತ್ಯುತ್ತರ ಪಡೆದು, ಅಭಿಮಾನಿಗಳ ವಲಯದಲ್ಲಿ ಮಹಾಯುದ್ಧವೇ ನಡೆಯಿತು. ಎರಡೂ ಚಿತ್ರಗಳ ಗಳಿಕೆಯ ಮೇಲೂ ಈ ವಿವಾದ ಪರಿಣಾಮ ಬೀರಿತು. ಚಿತ್ರಮಂದಿರಕ್ಕೆ ಬರುವ ಆಸಕ್ತಿ ಇದ್ದವರೂ ಈ ಮಾತಿನ ಯುದ್ಧಕ್ಕೆ ಬೇಸತ್ತು ಚಿತ್ರಮಂದಿರಗಳ ಕಡೆ ತಲೆಹಾಕಲಿಲ್ಲ. ಈ ಲಾಭವನ್ನು ಧುರಂಧರ್ ಚಿತ್ರ ಪಡೆದುಕೊಂಡು ಸಾವಿರ ಕೋಟಿ ಕ್ಲಬ್ ತಲುಪಿತು.

3. ಓಟಿಟಿ, ಡಬ್ಬಿಂಗ್ ಮತ್ತು ಸ್ಯಾಟಲೈಟ್ :

ಈ ವರ್ಷ ಬಿಡುಗಡೆಯಾದ ಬಹುತೇಕ ಚಿತ್ರಗಳನ್ನು ಓಟಿಟಿ ಕೊಂಡುಕೊಳ್ಳಲಿಲ್ಲ. ಸ್ಯಾಟಲೈಟ್ ಹಕ್ಕುಗಳೂ ಮಾರಾಟವಾಗಲಿಲ್ಲ. ಡಬ್ಬಿಂಗು ಹಕ್ಕುಗಳ ಮಾರಾಟ ಶೇ. 90ರಷ್ಟು ಕುಸಿದು ಹೋಗಿ, ಒಂದೆರಡು ಚಿತ್ರಗಳಿಗಷ್ಟೇ ಡಬ್ಬಿಂಗ್ ಭಾಗ್ಯ ಸಿಕ್ಕಿತು. ಇದರಿಂದಾಗಿ ಸಣ್ಣ ಮತ್ತು ಮಧ್ಯಮ ಬಜೆಟ್ಟಿನ ಸಿನಿಮಾಗಳಿಗೆ ಇದ್ದ ಆದಾಯದ ಮೂಲಗಳೆಲ್ಲ ಬಂದ್ ಆಗಿಬಿಟ್ಟವು. ಈ ನೋವಿಗೆ ಬರೆ ಎಳೆದಂತೆ ಸಿನಿಮಾ ರಿಲೀಸ್‌ಗೆ ತಗಲುವ ಖರ್ಚು ದಿನೇದಿನೇ ಏರುತ್ತಾ ಹೋದವು.

4. ಅತಿವೃಷ್ಟಿ ಮತ್ತು ಬರ:

2025ರಲ್ಲಿ ಒಟ್ಟು 282 ಸಿನಿಮಾಗಳು ತೆರೆಕಂಡವು. ಬಹುತೇಕ ಚಿತ್ರಗಳು ಪ್ರೇಕ್ಷಕರ ಬರ ಎದುರಿಸಿದವು. ನೂರಾರು ಚಿತ್ರಗಳನ್ನು ನೋಡಲು ಪ್ರೇಕ್ಷಕರಿರಲಿ, ಪತ್ರಕರ್ತರೂ ಆಸಕ್ತಿ ತೋರಿಸಲಿಲ್ಲ. ಹೀಗಾಗಿ ಅನೇಕ ನಿರ್ದೇಶಕರು ಸಿನಿಮಾಗಳ ಲಿಂಕ್ ಕಳುಹಿಸಿಕೊಟ್ಟು ಮನೆಯಲ್ಲೇ ಸಿನಿಮಾ ನೋಡಿ ವಿಮರ್ಶೆ ಬರೆಯುವಂತೆ ಹೇಳುತ್ತಿದ್ದರು. ಪತ್ರಿಕೆಗಳಲ್ಲಿ ವಿಮರ್ಶೆ ಪ್ರಕಟವಾದರೆ ಓಟಿಟಿಯಲ್ಲಾದರೂ ವ್ಯವಹಾರ ಕುದುರಬಹುದೆಂಬ ಭರವಸೆಯಿಂದ ನಿರ್ಮಾಪಕರು ಕಾಯುತ್ತಿದ್ದರು. ಆದರೆ ಪರಭಾಷಾ ಚಿತ್ರಗಳೂ ಸೇರಿದಂತೆ ಕರ್ನಾಟಕದಲ್ಲಿ 800ಕ್ಕೂ ಹೆಚ್ಚು ಸಿನಿಮಾಗಳು ತೆರೆಕಂಡವು. ದಿನಕ್ಕೆ ಎರಡು ಸಿನಿಮಾ ನೋಡಿದರೂ ಎಲ್ಲಾ ಸಿನಿಮಾಗಳನ್ನು ಒಬ್ಬ ಚಿತ್ರಪ್ರೇಮಿ ನೋಡುವುದಕ್ಕೆ ಸಾಧ್ಯವೇ ಇಲ್ಲದಷ್ಟು ಅತಿವೃಷ್ಟಿಯಾಗಿತ್ತು.

5. ಸ್ನೇಹಿತರ ಸವಾಲ್:

ಮಾತಿನಲ್ಲಿ ಹುಳುಕು ಹುಡುಕುವ, ಮಾತಿನ ಮೂಲಕ ಮನಸ್ಥಿತಿ ಅಳೆಯುವ ಪರಿಪಾಠ ಈ ಸಲ ಅತಿಯಾಯಿತು. ರಿಷಬ್ ಶುಭಾಶಯ ಕೋರಲಿಲ್ಲ, ರಾಜ್ ಶೆಟ್ಟರ ಹೆಸರು ಹೇಳಲಿಲ್ಲ ಅನ್ನುವುದೆಲ್ಲ ದಿನಗಟ್ಟಲೆ ಚರ್ಚೆಯಾಯಿತು. ಅವಕಾಶ ಕೊಡುವಾಗ ಬಡವರು ಅಂತ ನೋಡಲಾಗದು, ಶ್ರೀಮಂತನಾದರೂ ಪ್ರತಿಭೆಗೆ ಮಣೆ ಹಾಕಬೇಕು ಎಂದು ಹೇಳಿ ವಿವಾದಕ್ಕೆ ಗುರಿಯಾದರು. ಅವರನ್ನು ಬಡವರ ಮತ್ತು ದಮನಿತರ ವಿರೋಧಿ ಎಂದು ಬ್ರಾಂಡ್ ಮಾಡಲಾಯಿತು. ಸ್ನೇಹಿತರ ನಡುವೆ ಭಿನ್ನಾಭಿಪ್ರಾಯಗಳಿವೆ ಎಂದು ಬಿಂಬಿಸುವ ಮಾತುಕತೆಗಳು ನಡೆದವು.