ಕೈಲಾಸ್ ಗ್ಯಾಸ್ ಅಂಗಡಿ ಮುಂದೆ ಸರಥಿಸಾಲಿನಲ್ಲಿ ನಿಂತ ಗ್ರಾಹಕರು । ಕಟ್ಟಿಗೆ ಮೊರೆಹೋದ ಹೋಟೆಲ್ ಮಾಲೀಕರು
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಯುದ್ಧ ಪರಿಣಾಮವಾಗಿ ಈಗಾಗಲೇ ರಾಜ್ಯದೆಲ್ಲೆಡೆ ಗ್ಯಾಸ್ ಸಿಲಿಂಡರ್ ಪಡೆಯಲು ಗ್ರಾಹಕರು ಪರದಾಡುತ್ತಿದ್ದು, ಚಳ್ಳಕೆರೆ ನಗರದ ಪರಿಸ್ಥಿತಿಯೂ ಇದಕ್ಕೆ ಭಿನ್ನವಾಗಿಲ್ಲ. ಕಾರಣ ತಾಲೂಕಿನ ಏಕೈಕ ಪ್ರಥಮ ಗ್ಯಾಸ್ ಏಜೆನ್ಸಿಯಾದ ಶಂಕರಲಿಂಗಯ್ಯ ಒಡೆತನದ ಕೈಲಾಸ ಗ್ಯಾಸ್ ಕಳೆದ ಸುಮಾರು 30 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು ಕೊರನಾ ಸಂದರ್ಭ ಹೊರತು ಪಡಿಸಿದರೆ ಮತ್ತೆ ಈಗ ಗ್ಯಾಸ್ ಅಂಗಡಿಮುಂದೆ ಪ್ರತಿನಿತ್ಯ ಸಿಲಿಂಡರ್ ಪಡೆಯಲು ಗ್ರಾಹಕರು ಸಾಲುಗಟ್ಟಿ ನಿಲ್ಲುವ ಸ್ಥಿತಿ ಇದೆ.ಪ್ರತಿನಿತ್ಯ 9.30ಕ್ಕೆ ಕಚೇರಿ ಪ್ರಾರಂಭವಾದರೆ ಬೆಳಗ್ಗೆ 6ಕ್ಕೆ ನಗರ ಹಾಗೂ ಗ್ರಾಮಾಂತರ ಪ್ರದೇಶದಿಂದ ಕೈಯಲ್ಲಿ ಕಾರ್ಡ್ ಹಿಡಿದು ಸಿಲಿಂಡರ್ ಪಡೆಯಲು ಸಾಹಸ ಪಡುತ್ತಿದ್ದಾರೆ. ಒಮ್ಮೆಮ್ಮೆ ಗ್ರಾಹಕರ ಸಂಖ್ಯೆ ಹೆಚ್ಚಾದಂತೆ ಆ ಭಾಗದಲ್ಲಿ ಓಡಾಡುವ ಸಾರ್ವಜನಿಕ ಓಡಾಟಕ್ಕೆ ತೊಂದರೆಯೂ ಉಂಟಾಗುತ್ತಿದೆ. ಸರ್ಕಾರ ಮಾತ್ರ ಕಳವಳಕ್ಕೆ ಅವಕಾಶವಿಲ್ಲವೆಂದು ಹೇಳಿದರೂ ಗ್ರಾಹಕರು ಸಿಲಿಂಡರ್ ಪಡೆಯುವ ನಿಟ್ಟಿನಲ್ಲಿ ತಾಮುಂದು, ನಾಮುಂದು ಎಂದು ಮುಗಿಬೀಳುತ್ತಿದ್ದಾರೆ.
ಸರಥಿ ಸಾಲಿನಲ್ಲಿ ನಿಂತ ತಿಪ್ಪಯ್ಯ ಮಾತನಾಡಿ, ಇಂತಹ ಸ್ಥಿತಿ ಎಂದಿಗೂ ಬಂದಿಲ್ಲ ಕೊರೋನಾ ಸಂದರ್ಭದಲ್ಲಿ ಒಂದೆರಡು ದಿನಗಳಲ್ಲಿ ಸಿಲಿಂಡರ್ ಪಡೆಯಲು ಸಾಧ್ಯವಾಗುತ್ತಿತ್ತು. ಆದರೆ ನಾವು ಒಂದು ವಾರದಿಂದ ನಿರಂತರ ಬುಕಿಂಗ್ ಮಾಡಲು ಪ್ರಯತ್ನಿಸುತ್ತಿದ್ದೇವೆ. ಬುಕಿಂಗ್ ಆರಂಭವಾದ ಕೂಡಲೇ ಸರ್ವರ್ ಸಮಸ್ಯೆ ಉಂಟಾಗುತ್ತಿದೆ. ಸರ್ವರ್ ಇಲ್ಲದೆ ಬುಕಿಂಗ್ ಮಾಡಲು ಸಾಧ್ಯವಿಲ್ಲ. ಈ ಹಿಂದೆ ಎಂಟ್ಹತ್ತು ದಿನಗಳ ಅಂತರದಲ್ಲಿ ಬುಕಿಂಗ್ ಆಗುತ್ತಿತ್ತು, ಆದರೆ ಈಗ 25 ದಿನಗಳ ನಂತರವೇ ಬುಕಿಂಗ್ ಸಾಧ್ಯವೆನ್ನುತ್ತಾರೆ. ಸಮಾದಾನದ ವಿಷಯವೆಂದರೆ ಗ್ರಾಹಕರು ಸರಥಿ ಸಾಲಿನಲಿದ್ದಾಗೆ ಒಂದುಲೋಡ್ ಸಿಲಿಂಡರ್ ಆಗಮಿಸಿದ್ದು ಇದನ್ನು ಕಂಡ ಗ್ರಾಹಕರು ಸಿಲಿಂಡರ್ ಪಡೆದಷ್ಟು ಸಂತಸ ಪಟ್ಟರು. ಒಂದು ಕಡೆ ಸಿಲಿಂಡರ್ ಬುಕ್ಕಾಗದ ಸಂಕಟ, ಸಿಲಿಂಡರ್ ದೊರೆಯದ ಸಂಕಟ ಮತ್ತೊಂದು ಕಡೆ ಇಡೀದಿನ ಕೆಲಸ ಕಾರ್ಯಬಿಟ್ಟು ಸಿಲಿಂಡರ್ ಪಡೆಯಲು ಕಾಯುವ ದುಸ್ಥಿತಿ ಇಸೇಲ್, ಇರಾನ್ ಯುದ್ಧ ಇಡೀ ದೇಶದ ಜನರ ಬದಕುನನ್ನು ಅಲ್ಲೋಲ, ಕಲ್ಲೋಲ ಆಗಿಸಿದೆ ಎಂಬುವುದಕ್ಕೆ ಉದಾಹರಣೆಯಾಗಿದೆ.*ಕಟ್ಟಿಗೆ ಒಲೆಯಲ್ಲಿ ಅಡುಗೆ: ಗ್ಯಾಸ್ ಸಿಲಿಂಡರ್ ಸಿಗದ ಹಿನ್ನೆಲೆಯಲ್ಲಿ ಪ್ರತಿನಿತ್ಯ ಹೋಟೆಲ್‌ಗೆ ಬರುವ ಗ್ರಾಹಕರಿಗೆ ಮಾಲೀಕರು ಉತ್ತರ ಕೊಡಲಾಗದೆ ಕೊನೆಗೆ ಕಟ್ಟಿಗೆ ಮೊರೆಹೋಗಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆರಮನೆ ಹೋಟೆಲ್ ಮಾಲೀಕರು ಗ್ರಾಹಕರು ಹಾಗೂ ಪ್ರಯಾಣಿಕರ ಹಿತದೃಷ್ಟಿಯಿಂದ ಕಟ್ಟಿಗೆ ಒಲೆ ಮೊರೆ ಹೋಗಿದ್ದು, ಕಟ್ಟಿಗೆ ಓಲೆಯ ಮೇಲೆ ತಿಂಡಿ, ಊಟ ಸಿದ್ದಪಡಿಸಿ ನೀಡುತ್ತಿದ್ದಾರೆ. ನಗರದ ಕೆಲವು ಹೋಟೆಲ್‌ಗಳು ಇದಕ್ಕೆ ಅನುಸರಿಸಿವೆ.