ಕರ್ಣಾಟಕ ಬ್ಯಾಂಕ್ ಕಾರವಾರ ಶಾಖೆಗೆ ಮುಗಿಬಿದ್ದ ಗ್ರಾಹಕರು

| Published : Jul 02 2025, 12:20 AM IST / Updated: Jul 02 2025, 12:21 AM IST

ಕರ್ಣಾಟಕ ಬ್ಯಾಂಕ್ ಕಾರವಾರ ಶಾಖೆಗೆ ಮುಗಿಬಿದ್ದ ಗ್ರಾಹಕರು
Share this Article
  • FB
  • TW
  • Linkdin
  • Email

ಸಾರಾಂಶ

ಕರ್ಣಾಟಕ ಬ್ಯಾಂಕ್ ನಲ್ಲಿ ಅವ್ಯವಹಾರ ನಡೆದಿದೆ ಎಂಬ ವದಂತಿಯಿಂದ ಕಾರವಾರ ನಗರದಲ್ಲಿನ ಬ್ಯಾಂಕಿನ ಶಾಖೆಗೆ ಗ್ರಾಹಕರು ಮುಗಿಬಿದ್ದು ಠೇವಣಿ ಹಾಗೂ ಹಣವನ್ನು ಮರಳಿ ಪಡೆದರು. ಗ್ರಾಹಕರು ಆತಂಕಗೊಳ್ಳಬೇಕಾಗಿಲ್ಲ. ಎಲ್ಲರ ಹಣವೂ ಭದ್ರವಾಗಿದೆ. ಕರ್ಣಾಟಕ ಬ್ಯಾಂಕ್ ಸಹ ಸುಭದ್ರವಾಗಿದೆ ಎಂದು ಕರ್ನಾಟಕ ಬ್ಯಾಂಕ್ ಕುಮಟಾ ಕ್ಲಸ್ಟರ್‌ ಹೆಡ್‌ ರಂಜಿತ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

ಕಾರವಾರ: ಕರ್ಣಾಟಕ ಬ್ಯಾಂಕ್‌ನಲ್ಲಿ ಅವ್ಯವಹಾರ ನಡೆದಿದೆ ಎಂಬ ವದಂತಿಯಿಂದ ಕಾರವಾರ ನಗರದಲ್ಲಿನ ಬ್ಯಾಂಕಿನ ಶಾಖೆಗೆ ಗ್ರಾಹಕರು ಮುಗಿಬಿದ್ದು ಠೇವಣಿ ಹಾಗೂ ಹಣವನ್ನು ಮರಳಿ ಪಡೆದರು.

ಸೋಮವಾರ ಸುಮಾರು ₹2 ಕೋಟಿ ಹಣವನ್ನು ಗ್ರಾಹಕರು ಪಡೆದುಕೊಂಡಿದ್ದರೆ, ಮಂಗಳವಾರ ಇದು ₹1 ಕೋಟಿ ಮೀರಿತ್ತು. ಬ್ಯಾಂಕಿನ ಕ್ಲಸ್ಟರ್ ಹೆಡ್ ರಂಜಿತ ಶೆಟ್ಟಿ ಸ್ವತಃ ಬ್ಯಾಂಕಿನಲ್ಲಿ ಹಾಜರಿದ್ದು, ಬ್ಯಾಂಕು ಭದ್ರವಾಗಿದೆ. ಯಾರ ಹಣಕ್ಕೂ ಸಮಸ್ಯೆ ಆಗದು ಎಂದು ಗ್ರಾಹಕರಿಗೆ ಮನವರಿಕೆ ಮಾಡಿಕೊಟ್ಟರು. ಆದರೂ ಕೆಲವರು ಹಣ ಮರಳಿ ಪಡೆದರು.

ಕಾರವಾರ ಅರ್ಬನ್ ಬ್ಯಾಂಕಿನಲ್ಲಿ ಆದ ಅವ್ಯವಹಾರದ ಹಿನ್ನೆಲೆಯಲ್ಲಿ ಬ್ಯಾಂಕಿನಲ್ಲಿದ್ದ ಹಣ, ಠೇವಣಿ ಮರಳಿ ಸಿಗದಿದ್ದರೆ ಎಂಬ ಆತಂಕದಲ್ಲಿ ಗ್ರಾಹಕರು ಬ್ಯಾಂಕಿಗೆ ಮುಗಿಬಿದ್ದರು. ಕರ್ನಾಟಕ ಬ್ಯಾಂಕಿನ ಜಿಲ್ಲೆಯ ಇತರ ಶಾಖೆಗಳಲ್ಲಿ ಗ್ರಾಹಕರು ಕಾರವಾರ ಶಾಖೆಯಲ್ಲಿ ಕಂಡುಬಂದಂತೆ ಮುಗಿಬಿದ್ದಿಲ್ಲ. ಕರ್ಣಾಟಕ ಬ್ಯಾಂಕ್ ಕುರಿತು ಹರಿದಾಡುತ್ತಿರುವ ಸುದ್ದಿಯಲ್ಲಿ ಹುರುಳಿಲ್ಲ: ರಂಜಿತ್ ಶೆಟ್ಟಿ

ಕರ್ಣಾಟಕ ಬ್ಯಾಂಕ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಕೇವಲ ಸುಳ್ಳು ಸುದ್ದಿ ಎಂದು ಬ್ಯಾಂಕಿನ ಕುಮಟಾ ಕ್ಲಸ್ಟರ್ ಹೆಡ್ ರಂಜಿತ್ ಶೆಟ್ಟಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಕೆಲವು ದಿನಗಳಿಂದ ಕರ್ನಾಟಕ ಬ್ಯಾಂಕ್ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಡುತ್ತಿರುವುದು ಗಮನಕ್ಕೆ ಬಂದಿದೆ. 101 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಕರ್ನಾಟಕ ಬ್ಯಾಂಕ್ ಕುರಿತು ವಿವೇಚನಾರಹಿತವಾಗಿ ಪ್ರಕಟಿಸಲಾಗಿರುವ ಈ ಸುದ್ದಿಗಳು ಸಂಪೂರ್ಣವಾಗಿ ದುರುದ್ದೇಶಪೂರಿತವಾಗಿವೆ. ಗ್ರಾಹಕರಲ್ಲಿ ಗೊಂದಲ ಮತ್ತು ಆತಂಕ ಸೃಷ್ಟಿಸುವ ಉದ್ದೇಶದಿಂದ ಕೂಡಿದೆ ಎಂದರು.ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಿದೆ. ಕರ್ಣಾಟಕ ಬ್ಯಾಂಕ್ 101 ವರ್ಷಗಳಿಂದಲೂ ನಿರಂತರವಾಗಿ ಲಾಭ ಗಳಿಸುತ್ತಾ ಬಂದಿದೆ. ನಮ್ಮ ಬ್ಯಾಂಕ್‌ನ ಮೊದಲ ಆದ್ಯತೆ ಯಾವಾಗಲೂ ಠೇವಣಿದಾರರ ಹಣದ ಸುರಕ್ಷತೆ ಮತ್ತು ಭದ್ರತೆಯಾಗಿದೆ. ಗ್ರಾಹಕರ ನಂಬಿಕೆ, ವಿಶ್ವಾಸ ಮತ್ತು ಸಾಮಾಜಿಕ ಬದ್ಧತೆಗೆ ಪ್ರಸಿದ್ಧಿಯಾಗಿರುವ ಕರ್ನಾಟಕ ಬ್ಯಾಂಕ್ ಅತ್ಯಂತ ಸುದೃಢವಾಗಿದೆ ಎಂದು ನಾವು ನಮ್ಮ ಗ್ರಾಹಕರಿಗೆ ಸ್ಪಷ್ಟಪಡಿಸಲು ಬಯಸುತ್ತೇವೆ. ಪ್ರಸ್ತುತ, ಕರ್ಣಾಟಕ ಬ್ಯಾಂಕ್ ಶೇ.19.85ಕ್ಕಿಂತ ಹೆಚ್ಚಿನ ಬಂಡವಾಳ ಸಾಮರ್ಥ್ಯ ಅನುಪಾತವನ್ನು ಹೊಂದಿದ್ದು, ಇದು ನಮ್ಮ ಬಲಿಷ್ಠವಾದ ಆರ್ಥಿಕ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದರು.

ಸುಳ್ಳು ಸುದ್ದಿ ಹರಡಿದವರ ವಿರುದ್ಧ ಕ್ರಮ: ಬ್ಯಾಂಕಿಗೆ ಹಾನಿ ಉಂಟು ಮಾಡುವ ಉದ್ದೇಶದಿಂದ ಸಂಪೂರ್ಣ ಸುಳ್ಳು ಮತ್ತು ದುರುದ್ದೇಶಪೂರಿತ ಗಾಳಿಸುದ್ದಿಗಳನ್ನು ಹಬ್ಬಿಸಿರುವ ಮಾಧ್ಯಮ, ಇಂತಹ ಆಧಾರರಹಿತ ಗಾಳಿಸುದ್ದಿಗಳನ್ನು ಪ್ರಕಟಿಸುವ ಮೊದಲು ಬ್ಯಾಂಕಿನ ಯಾವುದೇ ಅಧಿಕಾರಿಯನ್ನು ಸಂಪರ್ಕಿಸಿಲ್ಲ. ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಲು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವ ಚಾನೆಲ್‌ನ ವಿರುದ್ಧ ಬ್ಯಾಂಕ್ ಕಾನೂನು ಕ್ರಮ ಕೈಗೊಳ್ಳುತ್ತಿದೆ ಎಂದು ಸ್ಪಷ್ಟಪಡಿಸಿದರು.ಸಾರ್ವಜನಿಕರಿಗೆ ಮನವಿ: ಸಾರ್ವಜನಿಕರು ಮತ್ತು ನಮ್ಮ ಗ್ರಾಹಕರು ಬ್ಯಾಂಕ್‌ನ ಅಧಿಕೃತ ಪ್ರಕಟಣೆಗಳನ್ನು ಮಾತ್ರ ಪರಿಗಣಿಸುವಂತೆ ನಾವು ಮನವಿ ಮಾಡುತ್ತೇವೆ. ವದಂತಿಗಳನ್ನು ನಿರ್ಲಕ್ಷಿಸಿ, ಯಾವುದೇ ಸುಳ್ಳು ಮಾಹಿತಿಗೆ ಕಿವಿಗೊಡಬೇಡಿ. ನಂಬಿಕೆ, ಸ್ಥಿರತೆ ಮತ್ತು ಸೇವೆಯು ಕರ್ನಾಟಕ ಬ್ಯಾಂಕ್‌ನ ಆಧಾರಸ್ತಂಭಗಳಾಗಿವೆ. ಬ್ಯಾಂಕ್ ಸಂಪೂರ್ಣ ಸುರಕ್ಷಿತ, ಸುಭದ್ರವಾಗಿದೆ ಎಂದರು.ಕಾರವಾರ ಬ್ರಾಂಚ್‌ನ ಹಿರಿಯ ವ್ಯವಸ್ಥಾಪಕ ಗೌತಮ್ ಶೆಟ್ಟಿ ಇದ್ದರು.