ನರಗುಂದ: ಮಧ್ಯಪ್ರಾಚ್ಯದಲ್ಲಿ ಯುದ್ಧ ಮುಂದುವರಿದಿರುವುದರಿಂದ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಇದರಿದ ಗ್ರಾಹಕರು ಸಿಲಿಂಡರ್ ಪಡೆದುಕೊಳ್ಳಲು ಬಿರುಬಿಸಿಲನ್ನೂ ಲೆಕ್ಕಿಸದೇ ಪಟ್ಟಣದ ಗ್ಯಾಸ್ ಏಜೆನ್ಸಿ ಮುಂದೆ ಮುಗಿಬಿದ್ದಿದ್ದರು.
ಗುರುವಾರ ನರಗುಂದ ಸಿದ್ದಲಿಂಗೇಶ್ವರ ಗ್ಯಾಸ್ ಏಜೆನ್ಸಿ ಮುಂದೆ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಗ್ರಾಹಕರು ಬೆಳಗ್ಗೆ 4 ಗಂಟೆಗೆ ಆಗಮಿಸಿ ಸರದಿ ಸಾಲಿನಲ್ಲಿ ನಿಂತು ಅಡುಗೆ ಅನಿಲ ಪಡೆಯಲು ಹರಸಾಹಸಪಟ್ಟರು.ಗುರುವಾರ ಪಟ್ಟಣದ ಸಿದ್ದಲಿಂಗೇಶ್ವರ ಗ್ಯಾಸ್ ಏಜೆನ್ಸಿಗೆ 500 ಸಿಲಿಂಡರಗಳು ಇಂಡಿಯನ್ ಆಯಿಲ್ ಕಂಪನಿಯಿಂದ ಪೂರೈಕೆಯಾಗಿದ್ದವು. ಅದರಲ್ಲಿ 400 ಸಿಲಿಂಡರಗಳನ್ನು ವಿತರಿಸಲಾಯಿತು. ನಮ್ಮ ಏಜೆನ್ಸಿಯಲ್ಲಿ 2 ಸಾವಿರ ಸಿಲಿಂಡರಗಳಿಗಾಗಿ ಬೇಡಿಕೆ ಬಂದಿವೆ ಎನ್ನುತ್ತಾರೆ ಸಿದ್ದಲಿಂಗೇಶ್ವರ ಗ್ಯಾಸ್ ಏಜೆನ್ಸಿ ಮಾಲೀಕ ಚನ್ನಬಸಪ್ಪ ಕೋರಿ.
ತಾಲೂಕಿನ ಕೊಣ್ಣೂರಿನ ಭಾರತ ಗ್ಯಾಸ್ ಏಜೆನ್ಸಿಗೆ 360 ಸಿಲಿಂಡರಗಳು ಗುರುವಾರ ಪೂರೈಕೆಯಾಗಿದ್ದವು. ಅದರಲ್ಲಿ 230 ಸಿಲಿಂಡರಗಳನ್ನು ವಿತರಣೆ ಮಾಡಲಾಗಿದೆ. ನಮ್ಮಲ್ಲಿ ಸಿಲಿಂಡರ್ ಅಭಾವ ಇಲ್ಲ ಎಂದು ಭಾರತ ಗ್ಯಾಸ್ ಏಜೆನ್ಸಿ ಮಾಲೀಕ ಮಹೇಶ ಬಿಜಾಪುರ ತಿಳಿಸಿದರು.ನರಗುಂದದಲ್ಲಿ ಅರ್ಧಗಂಟೆ ರಭಸದ ಮಳೆನರಗುಂದ: ಗುರುವಾರ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಅರ್ಧ ಗಂಟೆಗೂ ಅಧಿಕ ಕಾಲ ರಭಸದ ಮಳೆ ಸುರಿದಿದೆ.ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಬೀಳುತ್ತಿದ್ದು, ಬೇಸಿಗೆ ಮಳೆಯಿಂದ ರೈತರು ಕಂಗಾಲಾಗಿದ್ದು, ಹಿಂಗಾರು ಬೆಳೆಗಳು ಹಾನಿಯಾಗುವ ಆತಂಕವಿದೆ.ತಾಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಗೋವಿನಜೋಳ, ಸೂರ್ಯಕಾಂತಿ, ಗೋದಿ, ಜೋಳ, ಕುಸಬಿ ಸೇರಿದಂತೆ ಹಲವಾರು ಬೆಳೆಗಳನ್ನು ಹಾಕಿದ್ದಾರೆ. ಬಹುತೇಕ ಬೆಳೆಗಳು ಕಟಾವು ಹಂತಕ್ಕೆ ಬಂದಿದ್ದು, ಆದರೆ ನಿರಂತರವಾಗಿ ಮಳೆ ಬೀಳುತ್ತಿರುವುದು ಆತಂಕಕ್ಕೀಡು ಮಾಡಿದೆ ಎಂದು ಕುರ್ಲಗೇರಿ ಗ್ರಾಮದ ರೈತ ಯಲ್ಲಪ್ಪ ಚಲವಣ್ಣವರ ತಿಳಿಸಿದರು.