ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಮಧ್ಯಪ್ರಾಚ್ಯದಲ್ಲಿ ಅಮೆರಿಕ ಹಾಗೂ ಇರಾನ್ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮ ದೇಶದಲ್ಲಿ ಗ್ಯಾಸ್ ಸಿಲಿಂಡರ್‌ಗಳ ಕೊರತೆ ಎದ್ದು ಕಾಣುತ್ತಿದ್ದು, ಸಿಲಿಂಡರ್‌ಗಾಗಿ ದಿನ ನಿತ್ಯ ಗ್ರಾಹಕರು ಗ್ಯಾಸ್ ಏಜೆನ್ಸಿಗಳ ಮುಂದೆ ಸಾಲುಗಟ್ಟಿ ನಿಲ್ಲುವಂತಾಗಿದೆ.ಕೇಂದ್ರ ಸರ್ಕಾರ ಗೃಹ ಬಳಕೆ ಸಿಲಿಂಡರ್‌ಗಳಿಗೆ ಯಾವುದೇ ಕೊರತೆಯಿಲ್ಲ, ಬೇಡಿಕೆಯಂತೆ ಪೂರೈಸಲಾಗುತ್ತಿದೆ ಎಂದು ಹೇಳುತ್ತಿದ್ದರೂ ಪಟ್ಟಣದಲ್ಲಿ ಮಾತ್ರ ಇನ್ನೂ ಸಿಲಿಂಡರ್‌ಗಳ ಹಾಹಾಕಾರ ನಿಂತಿಲ್ಲ. ಎಚ್‌ಪಿ, ಇಂಡೇನ್, ಭಾರತ್ ಗ್ಯಾಸ್‌ಗಳ ಏಜೆನ್ಸಿ ಕಚೇರಿಗಳ ಮುಂದೆ ನಿತ್ಯ ನೂರಾರು ಜನರು ಕ್ಯೂ ನಿಂತು ಸಿಲಿಂಡರ್‌ಗಳನ್ನು ಪಡೆಯುವಂತಾಗಿದೆ. ಸಿಲಿಂಡರ್‌ಗಾಗಿ ಬುಕ್ ಮಾಡಿ ತಿಂಗಳಾದರೂ ಸಿಲಿಂಡರ್‌ಗಳು ದೊರೆಯುತ್ತಿಲ್ಲವೆಂದು ಆರೋಪಿಸಿ ಗ್ರಾಹಕರು ತಾವೇ ತಮ್ಮ ತಮ್ಮ ಏಜೆನ್ಸಿಗಳ ಕಚೇರಿಗಳ ಮುಂದೆ ಬೆಳಗ್ಗೆಯಿಂದ ಸಂಜೆವರೆಗೂ ನಿಂತು ಬಸವಳಿದರೂ ದೊರೆಯುತ್ತಿಲ್ಲ ಎಂಬ ಆರೋಪಗಳು ಸಾಮಾನ್ಯವಾಗಿದೆ.ತಾಲೂಕು ಆಡಳಿತ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಗೃಹಬಳಕೆ ಸಿಲಿಂಡರ್‌ಗಳನ್ನು ಬಳಸುತ್ತಿರುವ ಹೋಟೆಲ್, ಬೇಕರಿಗಳ ಮೇಲೆ ದಾಳಿ ಮಾಡಿ ವಶಪಡಿಸಿಕೊಂಡಿದ್ದಾರೆ. ಇನ್ನೂ ಕೆಲವು ಕಡೆ ಅಕ್ರಮವಾಗಿ ಬಳಕೆ ಮಾಡಲಾಗುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಕೇಂದ್ರ ಸರ್ಕಾರ ಗೃಹಬಳಕೆ ಸಿಲಿಂಡರ್‌ಗಳಿಗೆ ಯಾವುದೇ ಅಭಾವವಿಲ್ಲ ವದಂತಿಗಳಿಗೆ ಕಿವಿ ಕೊಡದೆ ಇರಿ ನಿಮ್ಮ ಮನೆ ಬಾಗಿಲಿಗೆ ಬರಲಿ ಎಂದು ಹೇಳುತ್ತಿದೆ. ಆದರೆ ಎರಡು ತಿಂಗಳಾದರೂ ಸಿಲಿಂಡರ್‌ಗಳು ಮಾತ್ರ ಸಿಗುತ್ತಿಲ್ಲ, ಯಾಕೆ ಏಜೆನ್ಸಿಗಳು ಗ್ರಾಹಕರಿಗೆ ಮನೆ ಬಾಗಿಲಿಗೆ ಪೂರೈಕೆ ಮಾಡುತ್ತಿಲ್ಲ, ಜನರೇಕೆ ನೂಕುನುಗ್ಗಲಿನಲ್ಲಿ ಸಿಲಿಡಂರ್‌ಗಳನ್ನು ಪಡೆಯುವಂತಾಗಿದೆ ಎಂಬುದು ಇನ್ನೂ ಅರ್ಥವಾಗಿಲ್ಲ. ಏಜನ್ಸಿಗಳು ಸಹ ಗ್ರಾಹಕರಿಗೆ ಸರಿಯಾದ ಮಾಹಿತಿ ನೀಡದೆ ಇರುವುದರಿಂದ ಗೊಂದಲ ಸೃಷ್ಟಿಯಗಿದೆ.ಗ್ರಾಮೀಣ ಭಾಗದಲ್ಲಿರುವ ಗ್ಯಾಸ್ ಏಜೆನ್ಸಿಗಳಿಗೆ ಸರ್ಕಾರ 15 ದಿನವಾದರೂ ಸಿಲಿಂಡರ್‌ಗಳನ್ನು ಸರಬರಾಜು ಮಾಡದ ಕಾರಣ ಬಹುತೇಕ ಮಂದಿ ಮತ್ತೆ ಸೌದೆ ಓಲೆಗಳಿಗೆ ಬದಲಾಗುವಂತಾಗಿದೆ. ಪಟ್ಟಣದಲ್ಲಿ ಬಹುತೇಕ ಹೋಟೆಲ್‌ಗಳು ವಾಣಿಜ್ಯ ಬಳಕೆ ಸಿಲಿಂಡರ್‌ಗಳ ಅಲಭ್ಯದಿಂದ ಬಂದ್ ಮಾಡಲಾಗಿದೆ. ಇನ್ನೂ ಕೆಲವರು ಬರೀ ಚಿತ್ರಾನ್ನ, ಪುಳಿಯೋಗರೆ ಹಾಗೂ ಮೊಸರನ್ನಗಳನ್ನು ಮಾತ್ರ ಗ್ರಾಹಕರಿಗೆ ನೀಡುತ್ತಿದೆ.

ಬುಧವಾರ ಸಹ ಎಚ್‌ಪಿ ಗ್ಯಾಸ್ ಏಜೆನ್ಸಿ ಮುಂದೆ ಗ್ರಾಹಕರು ಸಾಲುಗಟ್ಟಿ ನಿಂತಿರುವ ದೃಶ್ಯವನ್ನು ಕಂಡು ತಹಸೀಲ್ದಾರ್ ಸುಜಾತ ಭೇಟಿ ನೀಡಿ ಪರಿಶೀಲನೆ ಮಾಡಿದರು. ಮನೆಗಳಿಗೆ ಬಳಸುವ ಸಿಲಿಂಡರ್‌ಗಳಿಗೆ ಕೊರತೆ ಇಲ್ಲ. ಯಾವುದೇ ಚಿಂತೆಗೀಡಾಗದೆ ಇರಿ ಬುಕ್ ಮಾಡಿದ ಎಲ್ಲರಿಗೂ ದೊರೆಯುತ್ತದೆ ಎಂದು ಹೇಳಿದರೂ ಪರದಾಟ ಮಾತ್ರ ತಪ್ಪಿಲ್ಲ.