ಸಾಮೂಹಿಕ ವಿವಾಹ ದುಂದು ವೆಚ್ಚಕ್ಕೆ ಕಡಿವಾಣ: ಶಾಸಕ ಕೃಷ್ಣನಾಯ್ಕ

| Published : Feb 05 2025, 12:32 AM IST

ಸಾಮೂಹಿಕ ವಿವಾಹ ದುಂದು ವೆಚ್ಚಕ್ಕೆ ಕಡಿವಾಣ: ಶಾಸಕ ಕೃಷ್ಣನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಪುರ ಎಂಬ ಪುಟ್ಟ ಗ್ರಾಮದಲ್ಲಿ ಶ್ರೀಗಳ ಮಠದಿಂದ ಅತ್ಯುತ್ತಮ ಸಮಾಜಮುಖಿ ಕೆಲಸ ಕಾರ್ಯಗಳು ಜರುಗುತ್ತಿವೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.

ಹೂವಿನಹಡಗಲಿ: ತುಂಗಭದ್ರಾ ನದಿ ತೀರದ ಪುರ ಗ್ರಾಮದಲ್ಲಿ ಸೋಗಿ ಪುರವರ್ಗ ಕಟ್ಟಿಮನಿ ಮಠದ ಶ್ರೀಗಳ ಸ್ಮರಣೋತ್ಸವ ಅಂಗವಾಗಿ ಜರುಗಿದ ಸಾಮೂಹಿಕ ವಿವಾಹ ದುಂದು ವೆಚ್ಚಕ್ಕೆ ಕಡಿವಾಣ ಹಾಕಿ, ಬಡವರಿಗೆ ಆಸರೆಯಾಗುತ್ತದೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.

ತಾಲೂಕಿನ ಪುರ ಗ್ರಾಮದ ಶ್ರೀಮದ್‌ ಕಾಶಿಜ್ಞಾನ ಸಿಂಹಾಸನಾ ಶಾಖಾ ಸೋಗಿ ಪುರವರ್ಗ ಮಟ್ಟಿಮನಿ ಮಠದ ಸಿದ್ದವೀರ ಶಿವಾಚಾರ್ಯ ಸ್ವಾಮೀಜಿ 48ನೇ ಸಂಸ್ಮರಣೋತ್ಸವ, ಪಟ್ಟಣದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ 10ನೇ ಪುಣ್ಯ ಸ್ಮರಣೆ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪುರ ಎಂಬ ಪುಟ್ಟ ಗ್ರಾಮದಲ್ಲಿ ಶ್ರೀಗಳ ಮಠದಿಂದ ಅತ್ಯುತ್ತಮ ಸಮಾಜಮುಖಿ ಕೆಲಸ ಕಾರ್ಯಗಳು ಜರುಗುತ್ತಿವೆ. ಇದರಿಂದ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.

ನಿವೃತ್ತ ಪಾಚಾರ್ಯ ಆರ್‌.ಎಲ್‌. ಪೊಲೀಸ್‌ ಪಾಟೀಲ್‌ ಮಾತನಾಡಿ, ನಾಡಿನ ಎಲ್ಲ ಕಡೆಗಳಲ್ಲಿರುವ ವೀರಶೈವ ಲಿಂಗಾಯತ ಮಠಗಳು ಶೈಕ್ಷಣಿಕ, ಸಾಮಾಜಿಕ, ಮತ್ತು ಧಾರ್ಮಿಕ, ಸಾಂಸ್ಕೃತಿಕ ಕೆಲಸಗಳನ್ನು ಮಾಡಿ ಬಹು ದೊಡ್ಡ ಕೂಡುಗೆಗಳನ್ನು ನೀಡಿವೆ. ಸಾಮೂಹಿಕ ವಿವಾಹ ಕಾರ್ಯಕ್ರಮಗಳ ಜತೆಗೆ ವಧು-ವರರಿಗೆ ಧಾರ್ಮಿಕ ಸಂಸ್ಕಾರ ನೀಡಿ ಬದುಕಿನ ದಾರಿ ತೋರುತ್ತಿವೆ ಎಂದರು.

ನಮ್ಮ ಕೌಟುಂಬಿಕ ಜೀವನಕ್ಕೆ ಸಾಕಷ್ಟು ಸಮಸ್ಯೆಗಳು ಸುತ್ತಿಕೊಂಡಿವೆ. ಅವುಗಳ ಪರಿಹಾರಕ್ಕಾಗಿ ಶರಣ ಹಿತ ನುಡಿ ಹಾಗೂ ಹಿರಿಯರ ಮಾರ್ಗದರ್ಶನ ಅಗತ್ಯವಿದೆ. ನಮ್ಮ ಜೀವನದಲ್ಲಿ ಮರೆಯಾಗುತ್ತಿರುವ ಸಂಪ್ರದಾಯಗಳನ್ನು ಉಳಿಸುವ ಪ್ರಯತ್ನ ಆಗಬೇಕು ಎಂದು ಹೇಳಿದರು.ಮನೆಗೆ ಬಂದ ಸೊಸೆಯನ್ನು ಗುಲಾಮರಾಗಿ ಕಾಣಬಾರದು. ಮನೆ ಮಗಳಂತೆ ಕಂಡು ಸದ್ಭಾವನೆ ಬಿತ್ತುವ ಕೆಲಸ ಹಿರಿಯರು ಮಾಡಬೇಕು ಎಂದರು.

ಗವಿಮಠದ ಡಾ. ಹಿರಿಶಾಂತವೀರ ಸ್ವಾಮೀಜಿ ಮಾತನಾಡಿ, ಸೋಗಿ ಪುರವರ್ಗ ಮಠದ ಪಟ್ಟಣದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಈ ನೆಲದಲ್ಲಿ ಸಾಹಿತ್ತಿಕ, ಸಾಂಸ್ಕೃತಿಕ ಪರಂಪರೆ ಬೆಳೆಸಿದ್ದಾರೆ ಎಂದು ತಿ‍ಳಿಸಿದರು.

ಹರಪನಹಳ್ಳಿ ತೆಗ್ಗಿನ ಮಠದ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಠ-ಮಾನ್ಯಗಳು ಜಾತಿ ಧರ್ಮಕ್ಕೆ ಮೀಸಲಾಗಿಲ್ಲ. ಎಲ್ಲ ವರ್ಗದ ಭಕ್ತರನ್ನು ಪ್ರೀತಿಸುತ್ತೇವೆ. ಹೆಚ್ಚು ಆಸ್ತಿ, ಶ್ರೀಮಂತವಾಗಿರುವ ಮಠಗಳಿಗೆ ಸ್ವಾಮೀಜಿ ಪಟ್ಟಾಧಿಕಾರಕ್ಕೆ ಪೈಪೋಟಿ ಇರುತ್ತದೆ, ಆದರೆ ಈ ಮಠದಲ್ಲಿ ಭಕ್ತರು ನೀಡಿದ ಸಹಕಾರದಿಂದ ಉತ್ತಮ ಸಾಮಾಜಿಕ ಕಾರ್ಯಗಳು ನಿರಂತರವಾಗಿ ನಡೆದು ಬಂದಿವೆ. ಶ್ರೀಗಳು ಸದಾ ಕಾಲ ಭಕ್ತರ ಏಳ್ಗೆಯನ್ನೇ ಬಯಸಿದ್ದಾರೆ ಎಂದು ಹೇಳಿದರು.

ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ್‌ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಪಟ್ಟದ ಅಭಿನವ ಸಿದ್ದವೀರ ಶಿವಾಚಾರ್ಯ ಸ್ವಾಮೀಜಿ, ಅಂಗೂರು ಹಿರೇಮಠದ ಶಿವಯೋಗೀಶ್ವರ ಶಿವಾಚಾರ್ಯ ಸ್ವಾಮೀಜಿ, ಕಲಕೇರಿ ಸ್ವಾಮೀಜಿ, ಶಾಂತಮೂರ್ತಿ ಕುಲಕರ್ಣಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಪಟ್ಟಣದ ಚಂದ್ರಶೇಖರ ಶಿವಾಚಾರ್ಯ ಶ್ರೀ ಪ್ರಶಸ್ತಿಯನ್ನು ನವಲಿ ಗ್ರಾಮದ ಪಂಚಾಕ್ಷರಿಗೌಡ್ರು ಅವರಿಗೆ ಮರಣೋತ್ತರವಾಗಿ ನೀಡಲಾಯಿತು. ಪ್ರಭು ಸೊಪ್ಪಿನ, ಅಂಗಡಿ ಗೌರೀಶ, ಹಣ್ಣಿ ಶಶಿಧರ, ಮಲ್ಲಿಕಾರ್ಜುನ ಪೂಜಾರ, ಪರಮೇಶ ಗೌಡ ಸೇರಿದಂತೆ ಇತರರಿದ್ದರು. ಎರಡು ಜೋಡಿ ವಧು-ವರರು ನವ ಜೀವನಕ್ಕೆ ಕಾಲಿಟ್ಟರು.