ಸಾರಾಂಶ
ಕಿಡಿಗೇಡಿಗಳು ಹಸುವಿನ ಕೆಚ್ಚಲು ಕತ್ತರಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ತಮ್ಮಿಹಳ್ಳಿಯಲ್ಲಿ ಶನಿವಾರ ಬೆಳಕಿಗೆ ಬಂದಿದೆ.
ಕನ್ನಡ ಪ್ರಭ ವಾರ್ತೆ ಕಡೂರು
ಕಿಡಿಗೇಡಿಗಳು ಹಸುವಿನ ಕೆಚ್ಚಲು ಕತ್ತರಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ತಮ್ಮಿಹಳ್ಳಿಯಲ್ಲಿ ಶನಿವಾರ ಬೆಳಕಿಗೆ ಬಂದಿದೆ.ಚೌಳಹಿರಿಯೂರಿನ ತಮ್ಮಿಹಳ್ಳಿ ಗ್ರಾಮದ ಶೇಖರಪ್ಪ ಎಂಬುವರಿಗೆ ಸೇರಿದ ಸುಮಾರು 20 ಹಸುಗಳನ್ನು ಕಳ್ಳರು ತಂತಿ ಬೇಲಿಯೊಳಗೆ ಹಿಡಿದು ಕೂಡಿ ಹಾಕಿ ಬೇರೆಡೆಗೆ ಸಾಗಿಸಲು ಪ್ರಯತ್ನಿಸಿದ್ದಾರೆ. ಆ ಪ್ರಯತ್ನ ವಿಫಲಗೊಂಡಿದ್ದರಿಂದ ಒಂದು ಹಸುವಿನ ಕೆಚ್ಚಲು ಕತ್ತರಿಸಿ ಪರಾರಿಯಾಗಿದ್ದಾರೆ. ಬಳಿಕ, ಈ ಹಸು ಮೃತಪಟ್ಟಿದೆ. ಯಗಟಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಆರೋಪಿಗಳ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಈ ಹಿಂದೆ ಜನವರಿ 12ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದು ಕ್ರೌರ್ಯ ಎಸಗಲಾಗಿತ್ತು. ಜನವರಿ 16ರಂದು ಮೈಸೂರು ಜಿಲ್ಲೆ ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ಬಳಿ ಹರಕೆಗೆ ಬಿಟ್ಟ ಆಕಳು ಕರುವಿನ ಬಾಲವನ್ನು ದುಷ್ಕರ್ಮಿಗಳು ಕತ್ತರಿಸಿದ್ದರು. ಜನವರಿ 20ರಂದು ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಸಾಲ್ಕೋಡ ಗ್ರಾಮದಲ್ಲಿ ಹಸುವನ್ನು ಕಡಿದು, ಗರ್ಭದಲ್ಲಿದ್ದ ಕರುವನ್ನು ಬಿಸಾಡಿರುವ ಘಟನೆ ವರದಿಯಾಗಿತ್ತು. ಅಲ್ಲದೆ, ಜನವರಿ 30ರಂದ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಗುಂಡ್ಮಿ ಗ್ರಾಮದಲ್ಲಿ ಗೋವಿನ ಬಾಲ ಕತ್ತರಿಸಲಾಗಿತ್ತು.12ಕೆಕೆಡಿಯು2.ಕಡೂರು ತಾಲೂಕು ಚೌಳಹಿರಿಯೂರು ಗ್ರಾಮದ ಸಮೀಪದ ರೈತರ ಹಸುವಿನ ಕೆಚ್ಚಲು ಕತ್ತರಿಸಿರುವುದು.